ಸುಮಾರು ೬ ಘಂಟೆ ಆಗ್ತಾ ಬಂದಿತ್ತು. ಸಾಯಂಕಾಲ. ಎಲ್ಲರ ಕಣ್ಣುಗಳು ಮೆಲ್ಲಗೆ ಕತ್ತಲೆಗೆ ಹೊಂದಿಕೊಳ್ತಿದ್ವು. ಆವತ್ತು ಯಾವುದೇ ಹಬ್ಬ-ಹರಿದಿನವಲ್ಲದ ಕಾರಣ ಮನೆಯಲ್ಲೇನೂ ಅಂತಹ ಸಡಗರ ಸಂಭ್ರಮ ಎನೂ ಇರಲಿಲ್ಲ. ಸಾಮಾನ್ಯವಾಗಿ ಜನರು ತಮ್ಮ ಪ್ರತಿಶತ ೮೦ ರಷ್ಟು ಜೀವನವನ್ನು ಹೀಗೆಯೆ ಎನೂ ವಿಶೇಷಗಳಿಲ್ಲದೆ ಕಳೆಯುವಂತಹ ದಿನ. ನಿತ್ಯ ದಿನಚರಿಯಂತೆ ಅವ್ವ, ಅಮ್ಮ ತರಕಾರಿ ಹೆಚ್ಚುತ್ತಾ, ಕಕ್ಕಿಯಂದಿರು ಅಡುಗೆ ಮನೆಯನ್ನು ವಿಚಾರಿಸ್ಕೊತಾ, ಅಪ್ಪ, ಕಕ್ಕಂದಿರು ಹೊರಗಡೆ ಕುತ್ಕೊಂಡು ಮಾತಾಡ್ತಾ, ನಾನು ಅಲ್ಲೆ ಅವರ ಪಕ್ಕದಲ್ಲಿ ಕುತ್ಕೊಂಡು ಹಳೆ ಬಾಲಮಂಗಳದ 'ಡಿಂಗ' ಓದ್ತಾ, ಹೀಗೆ ಪ್ರತಿಯೊಬ್ಬರೂ ಅವರ ಅಭಿರುಚಿಗೆ ತಕ್ಕಂತೆ ಕಾಲ ತಳ್ತಾ ಇದ್ವಿ.
ಹೀಗೆ ಒಂದು ಅರ್ಧ ಘಂಟೆ ಕಳಿತೊ ಇಲ್ವೊ ನನ್ನ ತಂಗಿ ಕಿಟಾರ್ ಅಂತ ಕಿರಿಚ್ಕೊಂಡಿದ್ದು ಕೇಳಿಸ್ತು. ಕಕ್ಕ "ಹೂಂ.. ಅವ್ನು ಬಂದ ಅಂತ ಅನ್ಸತದ. ಇವತ್ತು ಆಗಿದ್ದಾಗಲಿ ಒಂದು ಕೈ ನೋಡ್ಕೊಳ್ಲೇಬೇಕು" ಅಂದ್ರು. ಅವರಿಗೆ ಸಮ್ಮತಿಸುವಂತೆ ಅಪ್ಪಾನೂ " ಹೌದು, ಇವಂದು ಅತಿಯಾಯ್ತು.." ಅಂದ್ರು. "ಬಾಲಮಂಗಳ" ಓದ್ತಾ ಇದ್ದ ನನಗೆ, ಇವತ್ತು ಏನಾದ್ರೂ ಆಗೇ ಆಗುತ್ತೆ ಅನ್ನುವ ಕುತೂಹಲ, ಎನಾದ್ರೂ ಆದ್ರೆ ಎಂಬ ಭಯ, ನಾನೂ ಎನಾದ್ರು ಮಾಡ್ಬೇಕು ಅನ್ನೋ ಧೈರ್ಯ, ಎಲ್ಲಾ ಒಟ್ಟಿಗೆ ಸೇರಿ ನನ್ನ ಎನೂ ಮಾಡದ್ಹಂಗೆ ಮಾಡಿತು. ಕುತೂಹಲದ ಪಾಲು ಒಂದು ತೂಕ ಹೆಚ್ಚಾದಾಗ ತಡಿಲಾರ್ದೆ ನಾನೂ ಅವರ ಹಿಂದೆ ಒಳಗಡೆ ಓಡಿ ಹೋದೆ.
ಬೇಸಿಗೆ ರಜೆಯಲ್ಲಿ ಅವ್ವನ ಮನೆಯಲ್ಲಿ ಒಂದು ತಿಂಗಳು ಇದ್ದು ಹೋಗ್ಲಿಕ್ಕೆ ಬಂದಿದ್ದ ನಾನು ಅವನನ್ನು ಎಂದೂ ನೋಡಿರಲಿಲ್ಲ. ಅವನು ಮಾಡ್ತಿದ್ದ ಕಿತಾಪತಿ, ಕೊಡ್ತಿದ್ದ ಕಿರುಕುಳಗಳ ಬಗ್ಗೆ ಎಲ್ಲ ಎಲ್ಲರ ಬಾಯಲ್ಲೂ ಬೃಹುತ್ ವರ್ಣನೆ ಸಮೇತ ಕೇಳಿದ್ದೆ ಅಷ್ಟೆ. ನಮ್ಮ ಓಣಿಯ ತುಂಬೆಲ್ಲಾ ಅವನ, ಇವನ ಅಣ್ಣ-ತಮ್ಮಂದಿರ ಬಗ್ಗೇನೆ ಮಾತು. ಅವರ ಜಾಯಮಾನವೆ ಅಂತದ್ದು, ಕಂಡ ಕಂಡವರ ಮನೆಗೆ ನುಗ್ಗೋದು, ಕೈಗೆ ಸಿಕ್ಕಿದ್ದೆಲ್ಲಾ ಕಿತ್ಕೋಳ್ಳೋದು, ನಾಲ್ಕಾಣೆಯಷ್ಟು ಸಾಮಾನು ಕದ್ದರೆ ರುಪಾಯಿಯಷ್ಟು ಸಾಮಾನು ಚೆಲ್ಲಾಪಿಲ್ಲಿ ಮಾಡೊದು, ಮನೆಯ ಹೆಂಗಸು ಮಕ್ಕಳನ್ನೆಲ್ಲಾ ಹೆದರಿಸೋದು, ಹೀಗೆ ಒಂದೇ ಎರಡೇ..? ಎಷ್ಟು ಹೇಳಿದರೂ ಮುಗಿಯದ ಅನಂತ ಕಥೆ. ಹೀಗೆ ಯಾರಿಗೂ ಹೆದರದೆ, ಒಬ್ಬರನ್ನೂ ತಮ್ಮ ಮೈ ಸೋಕಲ್ಗೋಡದೆ ರಾಜಾರೋಷವಾಗಿ ಬಾಳುತ್ತಿದ್ದ ಅವನ ಮತ್ತು ಅವನ ಸಂಸಾರ ನೋಡಿ ನನಗೆ ಪ್ರತಿಬಾರಿ ಕೋಪ, ಅಸಹ್ಯ ಉಂಟಾಗ್ತಿದ್ರೂ ಕೆಲವೊಮ್ಮೆ ಅವರ ಧೈರ್ಯ ನೋಡಿ ಒಳಒಳಗೆ ಖುಶಿಯೂ ಆಗ್ತಿತ್ತು.
ಹೀಗೆಲ್ಲಾ ಯೋಚಿಸ್ತಾ ನಾನು ಒಳಗೆ ಹೋಗೋವಷ್ಟರಲ್ಲಿ ಅಪ್ಪ, ಕಕ್ಕಂದಿರೆಲ್ಲ ಕೈಯಲ್ಲಿ ಕೋಲ್ಹಿಡಿದು, ಲುಂಗಿ ಮೇಲಕ್ಕೆ ಕಟ್ಟಿ ಅಡುಗೆ ಮನೆ ಕಡೆಗೆ ನುಗ್ಗಿದ್ದು ಕಾಣಿಸ್ತು. ಅವರ ಮುಖದಲ್ಲಿದ್ದ ರೋಷ, ಅಸಮಧಾನದಿಂದಲೇ ಮುಂದೆ ಆಗಬಹುದಾದನ್ನೆಲ್ಲಾ ಮನಸ್ಸು ಊಹೆ ಮಾಡ್ತಿತ್ತು. ಒಳಗೆ ಹೋಗಿ ಒಂದುವರೆ ನಿಮಿಷದ ತನಕ ಸಂಪೂರ್ಣ ನಿಶಬ್ಧ. ಮುಂದಿನ ಕ್ಷಣದಲ್ಲೇ ಅಡುಗೆ ಮನೆಯ ಒಂದೊಂದೆ ಪಾತ್ರೆಗಳು ನೆಲ ಕಂಡು ಧಡ ಭಢ ಶಬ್ದ ಮಾಡಲು ಶುರು ಮಾಡಿದ್ವು. ಆ ಪಾತ್ರೆಗಳ ಸದ್ದು, ಒಳಗಿರುವವರ ಕೂಗಾಟ ಇವುಗಳ ಮಧ್ಯ ನನಗೆ ಅವನ ನೋವಿನ ಕೀರಲು ದನಿ ಕೂಡ ಕೇಳ್ಲಿಲ್ಲ. ಸತ್ತೇ ಹೋದ್ನ ಅಂತ ಅನಿಸ್ಬಿಡ್ತು. ಯಾಕೋ ಇಷ್ಟು ದಿನ ಇಲ್ಲದ್ದು ಇವತ್ತು ನನಗೆ ಅವನ ಮೇಲೆ ಮುರುಕ ಉಂಟಾಗೊಕ್ಕೆ ಶುರು ಆಯ್ತು. ಅಷ್ಟ್ರಲ್ಲಿ ಮುಖದಲ್ಲಿ ವಿಜಯದ ನಗೆ ಹೋತ್ತ ನನ್ನ ಕಕ್ಕ ಕಿಂಚಿತ್ತು ದಯಾ ಕರುಣೆ ಇಲ್ದೇನೆ ಅವ್ನನ್ನ ಎತ್ಕೊಂಡೇ ಹೊರಗಡೆ ಬಂದ. ಎಲ್ಲರ ಮುಂದೆನೇ ಅತ್ಯಂತ ದಾರುಣ ಸ್ಥಿತಿಯಲ್ಲಿದ್ದ ಅವನನ್ನು ’ಸತ್ಹೋಗು..’ ಅಂತ ಶಪಿಸಿ ಹಿತ್ತಲ ಕಡೆ ಬಿಸಾಕಿದ. ಆಮೇಲೆ ಅವ್ನಿಗೆ ಎನಾಯ್ತು, ಎಲ್ಲಿಗೆ ಹೋದ ಅಂತ ಯಾರಿಗೂ ಗೊತ್ತಿಲ್ಲ ಮತ್ತು ಯಾರೂ ತಲೆ ಕೆಡಿಸ್ಕೊಳ್ಲೂ ಇಲ್ಲ. ನನ್ನೊಬ್ಬನನ್ನು ಬಿಟ್ಟು ಎಲ್ಲರ ಮುಖದಲ್ಲೂ ಎನೋ ನಿಶ್ಚಿಂತೆಯ ಕಳೆ. ನನಗೆ ಮಾತ್ರ ಅಯ್ಯೊ ಪಾಪ ಅನ್ಸ್ತಿತ್ತು.
ಯಾಕೆ ಹಿಂಗೆ...?
ಇವತ್ತಿಗೂ ನನಗೆ ಆ ಅಂಗೈಯಗಲದ ಚೂಪು ಮೂಗಿನ ಇಲಿಯ, ಸಾಯೋ ಸ್ಥಿತಿಯಲ್ಲೂ ಎನೋ ಆಶಾಭಾವನೆ ಇಟ್ಕೊಂಡಿರುವಂತೆ ಮಿಣಿಮಿಣಿ ಹೊಳೆಯುವ ಆ ಸಣ್ಣ ಕಣ್ಣುಗಳು ನೆನಪಾಗ್ತವೆ.
ಯಾಕೆ ಹಿಂಗೆ...?