Monday, July 23, 2007

ತಿರುವು...

ಬೆಳಬೆಳಗ್ಗೆ ೮ ಘಂಟೆಗೆನೇ ಎದ್ದು ರೂಮ್ ಹೊರಗಡೆ ಬಂದೆ. ನಾನೇ ಸೋಮಾರಿ ಎಂದ್ರೆ ಸೂರ್ಯ ನನಗಿಂತ ಸೋಮಾರಿ. ಆ ಚುಮುಚುಮು ಚಳಿಗೆ ಎದ್ದೇಳಕ್ಕೆ ಆಗದೆ ಇನ್ನೂ ಮುಖ ಕೆಳಗೆ ಮಾಡಿಕೊಂಡು ಮಲಗಿದ್ದ. ನಾನು ಎದ್ದ ಮೇಲೆ ನನ್ನ ಗೆಳಯ ಪುತ್ತೂರ್ ( ಪುತ್ತೂರು ವೆಂಕಟೇಶ ) ಇನ್ನೂ ಮಲಗಿರೋದು ನನ್ನ ಕಣ್ಣುಗಳಿಂದ ನೋಡಲಿಕ್ಕೆ ಆಗ್ಲಿಲ್ಲ. ಕಷ್ಟಪಟ್ಟು ಅವನನ್ನು ಎಬ್ಬಿಸಿದೆ. ನನ್ನನ್ನು ಬಾಯಿತುಂಬ ಬೈದುಕೊಳ್ಳುತ್ತಲೇ ಎದ್ದ. ಇಬ್ರಿಗೂ ಹಾಸ್ಟೆಲ್ ಭಟ್ಟರ ಟೀ ಕುಡಿಲಿಕ್ಕೆ ಮನಸಾಗ್ಲಿಲ್ಲ, ಹತ್ತಿರದ ಪಿ.ಡಿ(ಫಲಹಾರ ದರ್ಶಿನಿ) ಕಡೆ ಹೆಜ್ಜೆ ಹಾಕಿದೆವು. ಆ ಚಳಿಯಲ್ಲಿ ಕೈಗಳನ್ನ ಜೇಬಿನೊಳಗೆ ಇಳೆಬಿಟ್ಟುಕೊಂಡು ಹೊಗೋದೊ ಬೇಡವೊ ಅನ್ನೊ ಹಾಗೆ ಮೆಲ್ಲಗೆ ಕಾಲು ಎಳಿತಿದ್ವಿ.

ಅಲ್ಲಿಯ ವೇಟರ್ ಬಂದು ನಮ್ಮ ತಿಂಡಿ ಮತ್ತು ಎರಡು ಟೀಯ ಆರ್ಡರನ್ನ ಗೀಚಿಕೊಂಡು ಹೋದ. ಮುಂದೇನು ಮಾಡುವುದು ಅಂತ ಗೊತ್ತಾಗದಿದ್ದಾಗ ಅಕ್ಕಪಕ್ಕದ ಟೇಬಲ್ ಗಳ ಮೇಲೆ ಕಣ್ಣು ಹಾಯಿಸಿದೆ. ಯಾವ ಮುಖದಲ್ಲೂ ಒಂದು ಕಳೆ ಅಂತ ಇರಲಿಲ್ಲ. ಎದ್ದಿದೇವೆ ಅನ್ನೋ ಒಂದೇ ಕಾರಣಕ್ಕೆ ಅಲ್ಲಿ ಬಂದು ಕುಳಿತುಕೊಂಡಿದ್ರು. ಆ ಹೊತ್ತಿಗೆ ಸುಮಾರು ೩೫ ರ ಆಸುಪಾಸಿನ ಓರ್ವ ವ್ಯಕ್ತಿ ಮತ್ತು ಒಬ್ಬ ಹುಡುಗ ಬಂದು ನಮ್ಮ ಪಕ್ಕದ ಟೇಬಲಲ್ಲಿ ಕುಳಿತರು. ಅವರು ತಂದೆ ಮಕ್ಕಳೆಂದು ಮುಂದೆ ಅವರ ಮಾತು ಕದ್ದಾಲಿಸಿದ ಮೇಲೆ ತಿಳಿತು. ಅಪ್ಪ ಮಗನಿಗೆ ತನ್ನ ಮೊಬೈಲಲ್ಲಿ ಬಂದ ಒಂದು ಮೆಸ್ಸೇಜ್ ಅನ್ನು ಹಿಂಗೆ ಓದಿ ಹೇಳ್ತಿದ್ದ,

"There were 5 frogs sitting on a log. Suddenly one frog decided to jump into ater.

so now how many frogs are there on the log?

A: Five only, because there is a great difference between deciding and doing..!"

ಅದನ್ನ ಓದಿದ ಮೇಲೆ ಅದರ ಆರ್ಥ ಅವನಿಗೆ ವಿವರಿಸುತ್ತಾ, "ನೋಡು ಮಗು, ನೀನು ಸುಮ್ನೆ 1st rank ಬರಬೇಕು ಅಂತ ಅಂದುಕೊಂಡರೆ ಆಗೊಲ್ಲ, ಅದಕ್ಕೆ ತಕ್ಕ ಪರಿಶ್ರಮನೂ ಪಡಬೇಕು, ದಿನವೂ ನೀನು......." ಹೀಗೆ ಅವನನ್ನ ಹುರಿದುಂಬಿಸುತಿದ್ದ, ಪರೀಕ್ಷೆಗಳು ಹತ್ತಿರದಲ್ಲಿದ್ವು ಅಂತ ಕಾಣಿಸುತ್ತೆ.

ಜೀವನದಲ್ಲಿ ಕೆಲವೊಂದು ಅತ್ಯಂತ ಸಣ್ಣ ಸಣ್ಣ ಘಟನೆಗಳು ದೊಡ್ಡ ತಿರುವಿಗೆ ಕಾರಣಗಳಾಗುತ್ತವೆ ಅಂತ ಕೇಳಿದ್ದೆ ಆದ್ರೆ ಎಂದೂ ಅನುಭವಿಸಿರಲಿಲ್ಲ. ಆ ತಂದೆ ಮಕ್ಕಳ ಸಂಭಾಷಣೆ ನನ್ನಲ್ಲಿ ಏನೋ ಬದಲಾವಣೆ ತರುತ್ತೆ ಅಂತ ಖಂಡಿತ ಅಂದುಕೊಂಡಿರಲಿಲ್ಲ. ಆ ದಿನ ಪೂರ್ತಿ ಅವೇ ಮಾತುಗಳು ಪದೇ ಪದೇ ನೆನಪಾಗುತಿದ್ದವು. ರಾತ್ರಿ ಮಲಗುವಾಗ ನನ್ನ ಬಹು ವರ್ಷದ ಕನಸಾದ, ವೇಗದ ಓಟಗಾರನಾಗಬೇಕೆಂಬ ಆಸೆಯನ್ನ ನನಸು ಮಾಡಲೇ ಬೇಕಂತ ಅನ್ಕೊಂಡೆ.

ಮರುದಿವಸ ಬೆಳಗ್ಗೆ ೫ ಘಂಟೆಗೆ(!) ಎದ್ದವನೇ ಓಡಲಿಕ್ಕೆ ಹೊರಟೆ. JLB ರೋಡ್ ಅಲ್ಲಿ ೨ ಕಿ.ಮೀ. ಓಡೊವಷ್ಟರಲ್ಲಿ ನನ್ನ ಹೆಣ ಬೀಳುವ ಹಾಗಾಗಿತ್ತು. ಇಷ್ಟು ಜಲ್ದಿ ಸಾಯೊದು ಬೇಡ ಅಂತ ವಾಪಾಸು ನಡಕೊಂಡು ಬಂದೆ. ಅವತ್ತು ದಿನ ಪೂರ್ತಿ ಕಾಲು ನೋವು. ಮರುದಿವ್ಸ ಮತ್ತೆ ಹೋದೆ, ಪರ್ವಾಗಿಲ್ಲ ಓಡಬಹುದು ಅನ್ನಿಸ್ತು. ದಿನ ಕಳೆದ್ಹಂಗೆ ಓಡುವ ದೂರ ಜಾಸ್ತಿ ಮಾಡಿದೆ, ಬೇರೆ ಬೇರೆ ಕಡೆ ಹೋಗ್ಲಿಕ್ಕೆ ಶುರು ಮಾಡ್ದೆ. ಒಂದು ದಿವ್ಸ ಅರಮನೆ ಕಡೆ ಹೋದರೆ, ಇನ್ನೊಂದು ದಿವ್ಸ ಊಟಿ ರೋಡ್ ಗೆ. ಮಳೆ ಬರಲಿ, ಚಳಿಯಾಗಲಿ, ಏನೇ ಆಗ್ಲಿ ಒಂದು ದಿವಸ ಕೂಡ ಓಡುವುದನ್ನ ತಪ್ಪಿಸಲಿಲ್ಲ. ಹೀಗೇ ೩ ತಿಂಗಳು ಕಳೆದ್ಮೇಲೆ, ಮೊದಲನೇ ಸರ್ತಿ ಓಡುತ್ತಾ ಚಾಮುಂಡಿ ಬೆಟ್ಟ ಹತ್ತಿದೆ. ಆಹಾ, ಬೆಟ್ಟದ ತುದಿ ಮುಟ್ಟಿದಾಗ ಆಗುವ ಆನಂದ ವಿವರಿಸಲಿಕ್ಕೆ ಆಗೊಲ್ಲ. ಮುಂದೆ ಅದು ನನ್ನ ದಿನಚರಿಯ ಒಂದು ಅಂಗ ಆಗಿಹೊಯಿತು. ಹಾಸ್ಟೆಲ್ ನಿಂದ ಬೆಟ್ಟದ ಬುಡದವರೆಗೆ ೩ ಕಿ.ಮೀ. ಓಡುವುದು, ಅರ್ಧ ಘಂಟೆಯಲ್ಲಿ ಬೆಟ್ಟದ ಮೆಟ್ಟಲುಗಳನ್ನ ಹತ್ತುವುದು, ಅಲ್ಲಿ ಅರ್ಧ ತಾಸು ಕಳೆದಮೇಲೆ ತಿರುಗಿ ವಾಪಾಸು ಓಡಿಕೊಂಡು ಬರುವುದು. ಹೀಗೆ ಒಂದು ವರ್ಷದವರೆಗೂ ಬೇಜಾರಿಲ್ಲದೆ ನಡೆಸ್ಕೊಂಡು ಬಂದೆ.

ನಾನು ಪಟ್ಟ ಪರಿಶ್ರಮಕ್ಕೆ ಒಂದು ಮೊದಲ ಚಿಕ್ಕ ಪ್ರತಿಫಲ ದೊರೆತದ್ದು ನಾನು ನಮ್ಮ ಯೂನಿವರ್ಸಿಟಿಯ sports meet ಅಲ್ಲಿ ನನ್ನ ಕಾಲೇಜ್ ಅನ್ನು ಪ್ರತಿನಿಧಿಸಿದಾಗ. ೩೦೦೦ ಮೀ ಓಟದಲ್ಲಿ ನನಗೆ ಬಂಗಾರದ ಪದಕ ಸಿಕ್ಕಾಗ. ಸುತ್ತ ನಿಂತಿದ್ದ ಇಷ್ಟು ಜನ ಜೋರಾಗಿ ಚಪ್ಪಾಳೆ ತಟ್ಟಿದಾಗ. ಅಲ್ಲಿಗೆ ಬಂದಿದ್ದ ಕೆಲವು coach ಗಳು ನಂಗೆ ಸ್ಟೇಟ್ ಲೆವೆಲ್ ಅಲ್ಲಿ ಭಾಗವಹಿಸು, ಬಂಗಾರದ ಪದಕ ಖಂಡಿತ ಅಂತ ಬೆನ್ನುತಟ್ಟಿದಾಗ.

ಮುಖದಲ್ಲೊಂದು ಸಣ್ಣ ತೃಪ್ತಿಯ ನಗೆ ಬಂತು.

"ಏನ್ಲೇ ಕಿಸಿತಾ ಇದಿಯಾ..? ನಂದು ತಿಂಡಿ ಮುಗಿದು ಐದು ನಿಮಿಷ ಆದ್ರೂ ನಿಂದಿನ್ನೂ ಮುಗಿತಾನೇ ಇಲ್ಲ. ಜಲ್ದಿ ಜಲ್ದಿ ಮುಗಿಸು. ಮೊದ್ಲೇ ಚಳಿ. ಬ್ಯಾಡ ಅಂದ್ರೂ ಬೆಳಬೆಳಗ್ಗೆನೇ ಎಳಕೊಂಡು ಬಂದಿದಿಯ. ನೆಮ್ಮದಿಯಿಂದ ಮಲಗ್ಲಿಕ್ಕೂ ಬಿಡಲ್ಲ." ಅಂತ ಪುತ್ತೂರ್ ಕರೆದಾಗ್ಲೇ reverse gear ಹಾಕಿ ವಾಪಾಸ್ ಬಂದಿದ್ದು. ಆ ತಂದೆ ಮಗ ಆಗ್ಲೆ ಪಕ್ಕದ ಟೇಬಲ್ ಇಂದ ಎದ್ದು ಹೋಗಿದ್ರು. ಬಿಲ್ಲು ಕೊಟ್ಟು, ೪ ಚಾಕೊಲೇಟ್ ತೆಗೊಂಡು ವಾಪಾಸ್ ಬಂದ್ವಿ, ಜೇಬಲ್ಲಿ ಕೈ ಇಟ್ಕೊಂಡು.

Monday, July 9, 2007

ಚೌಕಟ್ಟು...

ಒಂದು ದಪ್ಪನೆಯ ಡ್ರಾಯಿಂಗ್ ಪುಸ್ತಕ ಮತ್ತು ಒಂದು ಕಲರ್ ಪೆನ್ಸಿಲ್ ಡಬ್ಬ.



ಅಪ್ಪ ತಂದ್ಕೊಟ್ಟಿದ್ದ ಇವೆರಡು ಅಂದ್ರೆ ನಂಗೆ ಎಲ್ಲಿಲ್ಲದ ಇಷ್ಟ. ಯಾವಾಗ್ಲೂ ಜೊತೆಲೀ ಹಿಡ್ಕೊಂಡೆ ತಿರುಗಾಡ್ತಿದ್ದೆ. ಆ ನನ್ನ ಪುಟ್ಟ ಕಣ್ಣಿಗೆ ಕಾಣ್ಸೋ ದೊಡ್ಡ ಪ್ರಪಂಚವನ್ನೆಲ್ಲಾ ಅದ್ರಲ್ಲಿ ಚೆಂದವಾಗಿ ಬಿಡಿಸಿಡಬೇಕೆಂಬ ಆಶೆ. ಮೊದ್ಲೆಲ್ಲಾ ಹಾಳೆ ತುಂಬಾ ಸುಮ್ನೆ ಕರಬರ ಗೀಚುತಿದ್ದವನು ಮೆಲ್ಲಗೆ ಅದು ಇದು ಅಂತ ಬಿಡಿಸ್ಲಕ್ಕೆ ಶುರು ಮಾಡ್ದೆ. ಒಂದು ದಿವಸ ಹೆಂಚಿನ ಮನೆ ಬಿಡ್ಸಿದ್ರೆ ಇನ್ನೊಂದಿವ್ಸ ಬಾವುಟದ ಕಂಬ. ಹೀಗೆ ಮರ, ಗುಡ್ಡ, ಸೂರ್ಯ, ಮೇಜು, ಲೋಟ, ದೋಣಿ, ಅಲ್ಮೇರಾ ಅಂತ ಎನೇನೋ ಗೀಚುತಿದ್ದೆ. ಬರೆದಿದ್ದಕೆಲ್ಲಾ ಬಣ್ಣ ತುಂಬೋದಂದ್ರೆ ನಂಗೆ ಎಲ್ಲಿಲ್ಲದ ಖುಶಿ. ಸೇಬುಹಣ್ಣಿಗೆ ಕೆಂಪು, ಹುಲ್ಲಿಗೆ ಹಸಿರು, ಆಕಾಶಕ್ಕೆ ನೀಲಿ, ಹುಡುಗನ ಚಡ್ಡಿಗೆ ಹಳದಿ, ಚೆಂಡಿಗೆ ಕಂದು, ಕೆಲವೊಮ್ಮೆ ಬೆಟ್ಟಕ್ಕೆ ಗುಲಾಬಿ! ಅಂತ ಎಲ್ಲದಕ್ಕೂ ಗೆರೆ ದಾಟದ ಹಂಗೆ ಬಹಳ ಕಾಳಜಿ ಇಂದ ತುಂಬ್ತಿದ್ದೆ. ಆ ಬಣ್ಣದ ಹಾಳೆಗಳನ್ನ ತೋರಿಸಿದಾಗ ಮಂದಿ ಮೆಚ್ಚಿಕೊಳ್ಳುತಿದ್ದರು.



ಆಗಲೆ ೪ ನೇ ತರಗತಿ ಮುಟ್ಟಿದ್ದೆ. ಮೆಲ್ಲಗೆ ಬುದ್ದಿ ಬೆಳೆಯುತಾ ಇತ್ತು. ನಾಲ್ಕು ಜನ ಎದುರಿದ್ದಾಗ ಯಾವುದನ್ನ ಕೇಳಬೇಕು, ಯಾವುದನ್ನ ಕೇಳಬಾರ್ದು ಎಂದೆಲ್ಲ ತಿಳಿತಾ ಇತ್ತು. ಅಪ್ಪಿ ತಪ್ಪಿ ಎನಾದ್ರೂ ತಪ್ಪು ಮಾಡಿದ್ರೂ ಕೂಡ ಜನ "ಹುಡುಗ ಇನ್ನು ಬೆಳಿತಿದಾನೆ, ತಪ್ಪು ಮಾಡೊದು ಸಹಜ" ಅಂತ ಹೇಳಿ ಸುಮ್ನಾಗ್ತಿದ್ರು. ಎಲ್ಲರಿಗು ಸಹಾಯವಾಗುವಂತ ಯಾವುದೇ ಕೆಲಸ ಮಾಡದಿದ್ರೂ ಬೇರೆಯವರಿಗೆ ಕಷ್ಟ ಮಾತ್ರ ಕೊಡ್ತಿರ್ಲಿಲ್ಲ. ಎಲ್ಲರೂ ನನ್ನ ಮುದ್ದು ಮಾಡೋರೆ.



ಮೆಲ್ಲಗೆ ದಿನ ಕಳೆದಹಂಗೆ ನನ್ನ ಚಿತ್ರಗಳಲ್ಲಿ ಒಂದು ಪ್ರೌಢತೆ ಬಿಂಬಿಸಲಿಕ್ಕೆ ಶುರು ಆಯಿತು. ಈಗ ನನ್ನ ಚಿತ್ರಗಳಲ್ಲಿ ಜಿಂಕೆ ಅಂದರೆ ತಲೆಗೊಂದು ಸೊನ್ನೆ, ಹೊಟ್ಟೆಗೊಂದು ಸೊನ್ನೆ, ಕಾಲುಗಳಿಗೆ ನಾಲ್ಕು ಗೆರೆ ಆಗಿರದೆ, ನಾನು ಹೇಳದೇನೆ ಯಾರಾದರೂ ಅದನ್ನ ನೋಡಿದರೂ ಜಿಂಕೆ ಅಂತ ಕರೆಯುವ ಹಾಗಿರ್ತಿತ್ತು. ಮೊದಲಿನ ಹಾಗೆ ಬಹಳ ವಸ್ತುಗಳನ್ನು ಒಂದೇ ಚಿತ್ರದಲ್ಲಿ ಬಿಡಿಸದೆ, ಒಂದೊಂದೆ ವಸ್ತುವನ್ನು ವಿವರವಾಗಿ ಬಿಡಿಸಲು ತೊಡಗಿದೆ. ಜನ ಕೂಡ ಮೊದಲಿನ ಹಾಗೆ ಬರೆದಿದ್ದಕ್ಕೆಲ್ಲಾ ಹೊಗಳುತ್ತಿರಲ್ಲಿಲ್ಲ. "ಈ ಚಿತ್ರ ಪರವಾಗಿಲ್ಲ", "ಆ ಗಿಳಿಯ ಮೂಗು ಸ್ವಲ್ಪ ಬಾಗಬೇಕಿತ್ತು", "ಏನಿದು, ಹುಲಿನಾ, ಒಳ್ಳೇ ಎಮ್ಮೆ ಕಂಡ ಹಾಗೆ ಕಾಣುತ್ತಿದೆ, ಚೂರೂ ಚೆನ್ನಾಗಿಲ್ಲ" ಅಂತ ತಮಗೆ ಇಷ್ಟ ಬಂದ್ಹಂಗೆ ಅಭಿಪ್ರಾಯ ತಿಳಿಸ್ತಿದ್ರು. ನಾನು ಪ್ರತಿಯೊಂದು ಚಿತ್ರ ಬಿಡಿಸಲು ತೆಗೆದುಕೊಳ್ತಿದ್ದ ಸಮಯವೂ ಏರುತ್ತಾ ಹೊಯಿತು. ಕೊನೆಗೊಮ್ಮೆ ತುಂಬಾ ಸಮಯ ತೆಗೆದುಕೊಂಡು ಪ್ರಶಾಂತ ನೀರಿನ ಮೇಲೆ ದೋಣಿಯಲ್ಲಿ ಕುಳಿತು ಉತ್ಸಾಹದಿಂದ ಹುಟ್ಟು ಹಾಕುತಿದ್ದ ಒಬ್ಬ ಯುವಕನ ಚಿತ್ರ ಬಿಡಿಸಿದೆ. ನನಗಂತೂ ಅದು ಸಿಕ್ಕಾಪಟ್ಟೆ ಹಿಡಿಸಿತು. ನೋಡಿದವರೂ ಅದನ್ನ "ಬಹಳ ಚೆನ್ನಾಗಿದೆ" ಅಂತ ಹೊಗಳಿದರು. ಅದನ್ನ ಚೊಕ್ಕವಾಗಿ ಒಂದು ಪಾರದರ್ಶಕ ಪ್ಲಾಸ್ತಿಕ್ ಚೀಲದಲ್ಲಿ ಹಾಕಿ, ಮನೆಗೆ ಬರುವವರಿಗೆಲ್ಲ ಕಾಣುವ ಹಂಗೆ ಗೋಡೆ ಮೇಲೆ ತೂಗು ಹಾಕಿದೆ.



ಈಗ ನಾನು ಎಲ್ಲರಿಗು ಮೊದಲಿನ ಚಿಕ್ಕ ಮಗುವಾಗಿರ್ಲಿಲ್ಲ. ನನಗೂ ನಾನು ದೊಡ್ಡವನಾಗ್ತಿದಿನಿ ಎಂಬ ಅರಿವು ಉಂಟಾಗ್ತಿತ್ತು. ನನಗೆ ಅಂತ ಜವಬ್ದಾರಿಗಳು ಬರಲಿಕ್ಕೆ ಶುರು ಆದವು. ಅಂಗಡಿಗೆ ಹೋಗಿ ಅಮ್ಮ ಹೇಳಿದ ಸಾಮಾನು ತಂದರೆ ಎರಡು ಚಾಕೊಲೇಟ್ ಸಿಗ್ತಿತ್ತು, ಲೆಕ್ಕದಲ್ಲಿ ಕಡಿಮೆ ಅಂಕ ಸಿಕ್ಕರೆ ಅಪ್ಪನ ಏಟು ಸಿಗ್ತಿತ್ತು, ನಾನು ಬೀದಿ ಬೀದಿ ತಿರುಗೊದು ಜನ ಇಷ್ಟ ಪಡುತ್ತಿರಲಿಲ್ಲ, ಹೀಗೆ ಯಾವುದು ಸರಿ ಯಾವುದು ತಪ್ಪು ಅಂತ ಜನಗಳಿಂದ ತಿಳಿದುಕೊಳ್ಳೊಕೆ ಶುರು ಮಾಡಿದೆ. ನನ್ನದೇ ಅಂತ ಒಂದು ವ್ಯಕ್ತಿತ್ವ ಬೆಳಿತು. ಒಂದು ಹಂತಕ್ಕೆ ಮುಟ್ಟಿದ ಮೇಲೆ ನನ್ನ ನಡುವಳಿಕೆಯಲ್ಲಿ ಉಂಟಾಗುತ್ತಿದ್ದ ಬದಲಾವಣೆ ಬಹಳ ಕಡಿಮೆ. ಒಳ್ಳೆಯದು ಎನ್ನುವ ಅಂಶಗಳನ್ನೆಲ್ಲಾ ನಾನು ಪಾಲಿಸ್ತಿದ್ದೆ. ಆ ಹೊತ್ತಿಗಾಗಲೆ ಹನ್ನೆರಡನೆ ತರಗತಿಯ ಹೊಸ್ತಿಲು ಮೆಟ್ಟಿದ್ದೆ.



ಒಂದು ದಿವಸ ನಾನು ಅಪ್ಪನನ್ನ ಕಾಡಿಬೇಡಿ ಆ ಚಿತ್ರಕ್ಕೊಂದು ಗ್ಲಾಸು ಹೊಂದಿಸಿ ಸುತ್ತ ಸುಂದರ ಮರದ ಕಟ್ಟು ಹಾಕಿಸಿದೆ. ಬಡಗಿಯು ಆ ಚೌಕಟ್ಟಿನ ಮೇಲೆ ಅಲ್ಲಲ್ಲಿ ಚಿತ್ತಾರಗಳನ್ನ ಕೆತ್ತಿದ್ದ. ನೋಡಲು ಮನೋಹರವಾಗಿತ್ತು. ಮನೆಮಂದಿಗೆಲ್ಲ ಅದರಮೇಲೆ ವಿಶೇಷ ಕಾಳಜಿ. ದಿನವೂ ಅದರಮೇಲಿನ ಧೂಳು ಒರೆಸಿಡುತಿದ್ದರು. ಮನೆಗೆ ಬಂದವರೆಲ್ಲಾ "ಓ, ಕಟ್ಟು ಕೂಡಿಸಿದಿರಾ..", "ಎಷ್ಟು ಬಿತ್ತು ಚೌಕಟ್ಟಿಗೆ..?", "ಯಾವ ಮರದ್ದೋ..?" ಅಂತ ಚೌಕಟ್ಟನ್ನೇ ವಿಚಾರಿಸ್ಕೊಳ್ತಿದ್ರು. ಕಡೇಪಕ್ಷ ಮೊದಲನೆ ಸಲ ಮನೆಗೆ ಬಂದವರೂ ಕೂಡ ಚೌಕಟ್ಟನ್ನೇ ಹೊಗಳಿದರು ಹೊರತು ಚಿತ್ರವನ್ನು ಗಮನಿಸಲೇ ಇಲ್ಲ. ಆ ಚಿತ್ರದಲ್ಲಿದ್ದ ಸೊಬಗು ಯಾರ ಕಣ್ಣಿಗೂ ಬೀಳಲೇ ಇಲ್ಲ.



ನಾನು ಇಂಜಿನಿಯರಿಂಗ್ ಓದುತಿದ್ದಿದ್ದು, ಇಡೀ ಊರಿಗಲ್ಲದಿದ್ದರೂ, ನಮ್ಮ ಮನೆಯ ಆಪ್ತವಲಯಕ್ಕೊಂದು ಹೆಮ್ಮೆ ತರುವ ವಿಷಯವಾಗಿತ್ತು. ಎಲ್ಲರ ಹತ್ತಿರಾನೂ "ನಮ್ಮ ಹುಡುಗ ಇಂಜಿನೀರಿಂಗ್ ಓದ್ತಿದಾನೆ, ದೊಡ್ಡ ಊರಲ್ಲಿ.." ಅಂತ ಹೇಳ್ಕೊಂಡು ತಿರುಗುತಿದ್ದರು. ಎಲ್ಲರು ನನ್ನನ್ನು ನೋಡುವ ರೀತಿ ಬದಲಾಯಿಸದ್ದವು. ನಾನು ಕಷ್ಟಪಟ್ಟು ಮುಗಿಸಿದ ಸುಡೊಕೊ ನೋಡಿ ಗೆಳೆಯ "ನೀನು ಬಿಡು ಇಂಜಿನೀರಿಂಗ್ ಓದ್ತಿದಿಯಲ್ವಾ.. ನೀನೆಲ್ಲಾ ಆರಾಮಾಗಿ ಮುಗಿಸಬಹುದು" ಅಂತ ಕಡೆಗಾಣಿಸಿದ. ವಿಷಯಗಳು ದಿನದಿಂದಿನಕ್ಕೆ ಬದಲಾಗ್ತಿವೆ ಅಂತ ನನಗನ್ನಿಸ್ತಾ ಇತ್ತು.



ತುಂಬ ಆಸೆಯಿಂದ ನನ್ನ ಮೊದಲನೆಯ ಸಂಬಳದಲ್ಲಿ ಆ ಚಿತ್ರಕ್ಕೊಂದು ಬೆಳ್ಳಿಯ ಕಟ್ಟು ಹಾಕಿದ ಮೇಲೆಯಂತೂ ನನಗೆ, ಯಾಕಾದರೂ ಹಾಕಿದೆನೋ ಅಂತ ಅನ್ನಿಸಲಿಕ್ಕೆ ಶುರು ಆಯಿತು. ಅವ್ರ ಮನೆಯಲ್ಲಿ ಬೆಳ್ಳಿಯ ಕಟ್ಟು ಹಾಕಿದ ಚಿತ್ರ ಇದೆಯಂತೆ ಅಂತ ಜನ ನನ್ನ ಮನೆಯವರಿಗೆಲ್ಲಾ ಒಂದು ಗುಲಗಂಜಿ ತೂಕದಷ್ಟು ಹೆಚ್ಚಿಗೆನೇ ಗೌರವ ಕೊಡಲಿಕ್ಕೆ ಶುರು ಮಾಡಿದರು. ಅಪ್ಪ ಮೊನ್ನೆ ಯಾರಹತ್ರಾನೋ ಕೈಗಡ ಕೇಳಲಿಕ್ಕೆ ಹೋದಾಗ " ನಿಮಗೇನು ಕಮ್ಮಿ, ಚಿತ್ರಕೆಲ್ಲ ಬೆಳ್ಳಿಯ ಕಟ್ಟು ಹಾಕಿಸ್ತೀರಾ.." ಅಂತ ನಾವೇನು ಬೆಳ್ಳಿಯ ಗಣಿ ಮಾಲಿಕರೇನೋ ಅನ್ನುವಂತೆ ನೋಡಿದ, ದುಡ್ಡು ಕೊಡುವ ಮೊದಲು. ಮೊನ್ನೆ ಯಾರೋ ಆ ಚಿತ್ರದ ಬಗ್ಗೆ, "ನೋಡಿ ಸರ್, ಬೆಳ್ಳಿಯ ಕಟ್ಟು ಹಾಕಿಸಿದಾರೆ, ಅದರ ಹಿರಿಮೆಗೆ ತಕ್ಕಂತೆ ಇರ್ಲಿ ಅಂತ ಹೇಳಿ ಹಿಂದಗಡೆ ಎಲ್ಲ ಗುಡ್ಡ, ಮರ, ಹಕ್ಕಿ ಎಲ್ಲಾ ಯಾರೋ ಕಲಾವಿದನ ಕೈಯಲ್ಲಿ ಬಿಡಿಸಿಸಿದಾರೆ. ಇದಕ್ಕಿಂತ ಮೊದ್ಲೆನೇ ಚೆನ್ನಾಗಿ ಕಾಣುತಿತ್ತು" ಅಂತ ಆಡ್ಕೋತಿದ್ದ. ನಾನು ಬಿಡಿಸಿದ ದಿನದಿಂದಲೇ ಅದು ಹಾಗೇ ಇತ್ತು ಅಂತ ಅವನಿಗೆ ವಿವರಿಸುವುದು ಹೇಗೆ? ಕೇಳಲಿಕ್ಕೆ ಅವನಿಗೆ ಪುರುಸೊತ್ತಾದರೂ ಎಲ್ಲಿ?



ನನಗೆ ಕೆಲ್ಸ ಸಿಕ್ಕಮೇಲೆ ನಾನು ಇಡ್ತಿದ್ದ ಪ್ರತಿಯೊಂದು ಹೆಜ್ಜೆಗೂ ನನ್ನ ಕೆಲಸಕ್ಕೂ ಸಂಬಂಧ ಕಲ್ಪಿಸುತಿದ್ದರು. ನಾನು ಬಂಧುಗಳಿಗೆ ತಿಂಗಳಿಗೆರಡು ಬಾರಿ ಫೋನು ಮಾಡದಿದ್ದರೆ "ಇವನಿಗೆ ಕೆಲ್ಸ ಸಿಕ್ಕಿದೆ ಅಂತ ಪೊಗರು.." ಅಂತೆಲ್ಲಾ ಅನ್ನಿಸಿಕೊಳ್ಳಬೇಕಾಗ್ತಿತ್ತು. ಮೂರು ವರ್ಷದ ಹಿಂದೆ ತೆಗೆದುಕೊಂಡ ಅಂಗಿಯನ್ನ ನೀಟಾಗಿ ಇಸ್ತ್ರಿ ಮಾಡಿ ಹಾಕಿಕೊಂಡ್ರೆ "ಓ, ಹೊಸಾದಾ, ನಿನಗೇನು ಕಮ್ಮಿ ತಿಂಗಳಿಗೆರಡು ಜತೆ ಬಟ್ಟೆ ತೊಗೊತಿಯ.." ಅನ್ನೋ ಶೈಲಿಯಲ್ಲಿ ಮಾತುಗಳು.



ನನಗೆ ಈಗಲೂ ಅರ್ಥ ಆಗೊಲ್ಲ. ಒಂದು ಚಿತ್ರ ಚೆನ್ನಾಗಿದೆ ಅನ್ನಲು ಏನು ಕಾರಣ? ಆ ಚಿತ್ರದ ಚೌಕಟ್ಟಾ? ಚಿತ್ರ ಬಿಡಿಸಿದ ಹಾಳೆಯ ದಪ್ಪಾನಾ? ಅಥವಾ ನಿಜವಾಗಿಯೂ ಆ ಚಿತ್ರದಲ್ಲ್ಲಿರುವ ನೈಜತೆ ಮತ್ತು ಪ್ರತಿ ಸೂಕ್ಷ ವಸ್ತುಗಳನ್ನೂ ಕಡೆಗಾಣಿಸದೆ ವಿವರಿಸುವ ಕಲೆನಾ? ಅದನ್ನು ಬಿಡಿಸಿದ ದಿನದಿಂದ ಇಂದಿನವರೆಗೂ ಅದನ್ನು ಉತ್ತಮಗೊಳಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ಸರಿಕಾಣದನ್ನೆಲ್ಲಾ ಮೆಲ್ಲಗೆ ಅಳಿಸಿದ್ದೇನೆ, ಇದಿದ್ದರೆ ಇನ್ನೂ ಚೆನ್ನಾಗಿ ಕಾಣುತ್ತೆ ಅನ್ನುವುದನ್ನೆಲ್ಲಾ ಅಳವಡಿಸಿದ್ದೇನೆ. ಅದು ಯಾರೂ ಗಮನಿಸುವುದೇ ಇಲ್ಲ. ಚಿತ್ರ ಹಾಳಾಗದಿರಲೆಂದು ಹಾಕಿದ ಚೌಕಟ್ಟಿನ ಅವಾಂತರವೇ ಜಾಸ್ತಿ.



ಕೆಲವೊಮ್ಮೆ ಅದನ್ನು ತಿರುಗಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಲಾ ಅನ್ನಿಸುತ್ತೆ, ಆದರೆ ಕೆಟ್ಟುಹೋದರೆ ಅನ್ನೋ ಭಯ.