ಅಪ್ಪ ತಂದ್ಕೊಟ್ಟಿದ್ದ ಇವೆರಡು ಅಂದ್ರೆ ನಂಗೆ ಎಲ್ಲಿಲ್ಲದ ಇಷ್ಟ. ಯಾವಾಗ್ಲೂ ಜೊತೆಲೀ ಹಿಡ್ಕೊಂಡೆ ತಿರುಗಾಡ್ತಿದ್ದೆ. ಆ ನನ್ನ ಪುಟ್ಟ ಕಣ್ಣಿಗೆ ಕಾಣ್ಸೋ ದೊಡ್ಡ ಪ್ರಪಂಚವನ್ನೆಲ್ಲಾ ಅದ್ರಲ್ಲಿ ಚೆಂದವಾಗಿ ಬಿಡಿಸಿಡಬೇಕೆಂಬ ಆಶೆ. ಮೊದ್ಲೆಲ್ಲಾ ಹಾಳೆ ತುಂಬಾ ಸುಮ್ನೆ ಕರಬರ ಗೀಚುತಿದ್ದವನು ಮೆಲ್ಲಗೆ ಅದು ಇದು ಅಂತ ಬಿಡಿಸ್ಲಕ್ಕೆ ಶುರು ಮಾಡ್ದೆ. ಒಂದು ದಿವಸ ಹೆಂಚಿನ ಮನೆ ಬಿಡ್ಸಿದ್ರೆ ಇನ್ನೊಂದಿವ್ಸ ಬಾವುಟದ ಕಂಬ. ಹೀಗೆ ಮರ, ಗುಡ್ಡ, ಸೂರ್ಯ, ಮೇಜು, ಲೋಟ, ದೋಣಿ, ಅಲ್ಮೇರಾ ಅಂತ ಎನೇನೋ ಗೀಚುತಿದ್ದೆ. ಬರೆದಿದ್ದಕೆಲ್ಲಾ ಬಣ್ಣ ತುಂಬೋದಂದ್ರೆ ನಂಗೆ ಎಲ್ಲಿಲ್ಲದ ಖುಶಿ. ಸೇಬುಹಣ್ಣಿಗೆ ಕೆಂಪು, ಹುಲ್ಲಿಗೆ ಹಸಿರು, ಆಕಾಶಕ್ಕೆ ನೀಲಿ, ಹುಡುಗನ ಚಡ್ಡಿಗೆ ಹಳದಿ, ಚೆಂಡಿಗೆ ಕಂದು, ಕೆಲವೊಮ್ಮೆ ಬೆಟ್ಟಕ್ಕೆ ಗುಲಾಬಿ! ಅಂತ ಎಲ್ಲದಕ್ಕೂ ಗೆರೆ ದಾಟದ ಹಂಗೆ ಬಹಳ ಕಾಳಜಿ ಇಂದ ತುಂಬ್ತಿದ್ದೆ. ಆ ಬಣ್ಣದ ಹಾಳೆಗಳನ್ನ ತೋರಿಸಿದಾಗ ಮಂದಿ ಮೆಚ್ಚಿಕೊಳ್ಳುತಿದ್ದರು.
ಆಗಲೆ ೪ ನೇ ತರಗತಿ ಮುಟ್ಟಿದ್ದೆ. ಮೆಲ್ಲಗೆ ಬುದ್ದಿ ಬೆಳೆಯುತಾ ಇತ್ತು. ನಾಲ್ಕು ಜನ ಎದುರಿದ್ದಾಗ ಯಾವುದನ್ನ ಕೇಳಬೇಕು, ಯಾವುದನ್ನ ಕೇಳಬಾರ್ದು ಎಂದೆಲ್ಲ ತಿಳಿತಾ ಇತ್ತು. ಅಪ್ಪಿ ತಪ್ಪಿ ಎನಾದ್ರೂ ತಪ್ಪು ಮಾಡಿದ್ರೂ ಕೂಡ ಜನ "ಹುಡುಗ ಇನ್ನು ಬೆಳಿತಿದಾನೆ, ತಪ್ಪು ಮಾಡೊದು ಸಹಜ" ಅಂತ ಹೇಳಿ ಸುಮ್ನಾಗ್ತಿದ್ರು. ಎಲ್ಲರಿಗು ಸಹಾಯವಾಗುವಂತ ಯಾವುದೇ ಕೆಲಸ ಮಾಡದಿದ್ರೂ ಬೇರೆಯವರಿಗೆ ಕಷ್ಟ ಮಾತ್ರ ಕೊಡ್ತಿರ್ಲಿಲ್ಲ. ಎಲ್ಲರೂ ನನ್ನ ಮುದ್ದು ಮಾಡೋರೆ.
ಮೆಲ್ಲಗೆ ದಿನ ಕಳೆದಹಂಗೆ ನನ್ನ ಚಿತ್ರಗಳಲ್ಲಿ ಒಂದು ಪ್ರೌಢತೆ ಬಿಂಬಿಸಲಿಕ್ಕೆ ಶುರು ಆಯಿತು. ಈಗ ನನ್ನ ಚಿತ್ರಗಳಲ್ಲಿ ಜಿಂಕೆ ಅಂದರೆ ತಲೆಗೊಂದು ಸೊನ್ನೆ, ಹೊಟ್ಟೆಗೊಂದು ಸೊನ್ನೆ, ಕಾಲುಗಳಿಗೆ ನಾಲ್ಕು ಗೆರೆ ಆಗಿರದೆ, ನಾನು ಹೇಳದೇನೆ ಯಾರಾದರೂ ಅದನ್ನ ನೋಡಿದರೂ ಜಿಂಕೆ ಅಂತ ಕರೆಯುವ ಹಾಗಿರ್ತಿತ್ತು. ಮೊದಲಿನ ಹಾಗೆ ಬಹಳ ವಸ್ತುಗಳನ್ನು ಒಂದೇ ಚಿತ್ರದಲ್ಲಿ ಬಿಡಿಸದೆ, ಒಂದೊಂದೆ ವಸ್ತುವನ್ನು ವಿವರವಾಗಿ ಬಿಡಿಸಲು ತೊಡಗಿದೆ. ಜನ ಕೂಡ ಮೊದಲಿನ ಹಾಗೆ ಬರೆದಿದ್ದಕ್ಕೆಲ್ಲಾ ಹೊಗಳುತ್ತಿರಲ್ಲಿಲ್ಲ. "ಈ ಚಿತ್ರ ಪರವಾಗಿಲ್ಲ", "ಆ ಗಿಳಿಯ ಮೂಗು ಸ್ವಲ್ಪ ಬಾಗಬೇಕಿತ್ತು", "ಏನಿದು, ಹುಲಿನಾ, ಒಳ್ಳೇ ಎಮ್ಮೆ ಕಂಡ ಹಾಗೆ ಕಾಣುತ್ತಿದೆ, ಚೂರೂ ಚೆನ್ನಾಗಿಲ್ಲ" ಅಂತ ತಮಗೆ ಇಷ್ಟ ಬಂದ್ಹಂಗೆ ಅಭಿಪ್ರಾಯ ತಿಳಿಸ್ತಿದ್ರು. ನಾನು ಪ್ರತಿಯೊಂದು ಚಿತ್ರ ಬಿಡಿಸಲು ತೆಗೆದುಕೊಳ್ತಿದ್ದ ಸಮಯವೂ ಏರುತ್ತಾ ಹೊಯಿತು. ಕೊನೆಗೊಮ್ಮೆ ತುಂಬಾ ಸಮಯ ತೆಗೆದುಕೊಂಡು ಪ್ರಶಾಂತ ನೀರಿನ ಮೇಲೆ ದೋಣಿಯಲ್ಲಿ ಕುಳಿತು ಉತ್ಸಾಹದಿಂದ ಹುಟ್ಟು ಹಾಕುತಿದ್ದ ಒಬ್ಬ ಯುವಕನ ಚಿತ್ರ ಬಿಡಿಸಿದೆ. ನನಗಂತೂ ಅದು ಸಿಕ್ಕಾಪಟ್ಟೆ ಹಿಡಿಸಿತು. ನೋಡಿದವರೂ ಅದನ್ನ "ಬಹಳ ಚೆನ್ನಾಗಿದೆ" ಅಂತ ಹೊಗಳಿದರು. ಅದನ್ನ ಚೊಕ್ಕವಾಗಿ ಒಂದು ಪಾರದರ್ಶಕ ಪ್ಲಾಸ್ತಿಕ್ ಚೀಲದಲ್ಲಿ ಹಾಕಿ, ಮನೆಗೆ ಬರುವವರಿಗೆಲ್ಲ ಕಾಣುವ ಹಂಗೆ ಗೋಡೆ ಮೇಲೆ ತೂಗು ಹಾಕಿದೆ.
ಈಗ ನಾನು ಎಲ್ಲರಿಗು ಮೊದಲಿನ ಚಿಕ್ಕ ಮಗುವಾಗಿರ್ಲಿಲ್ಲ. ನನಗೂ ನಾನು ದೊಡ್ಡವನಾಗ್ತಿದಿನಿ ಎಂಬ ಅರಿವು ಉಂಟಾಗ್ತಿತ್ತು. ನನಗೆ ಅಂತ ಜವಬ್ದಾರಿಗಳು ಬರಲಿಕ್ಕೆ ಶುರು ಆದವು. ಅಂಗಡಿಗೆ ಹೋಗಿ ಅಮ್ಮ ಹೇಳಿದ ಸಾಮಾನು ತಂದರೆ ಎರಡು ಚಾಕೊಲೇಟ್ ಸಿಗ್ತಿತ್ತು, ಲೆಕ್ಕದಲ್ಲಿ ಕಡಿಮೆ ಅಂಕ ಸಿಕ್ಕರೆ ಅಪ್ಪನ ಏಟು ಸಿಗ್ತಿತ್ತು, ನಾನು ಬೀದಿ ಬೀದಿ ತಿರುಗೊದು ಜನ ಇಷ್ಟ ಪಡುತ್ತಿರಲಿಲ್ಲ, ಹೀಗೆ ಯಾವುದು ಸರಿ ಯಾವುದು ತಪ್ಪು ಅಂತ ಜನಗಳಿಂದ ತಿಳಿದುಕೊಳ್ಳೊಕೆ ಶುರು ಮಾಡಿದೆ. ನನ್ನದೇ ಅಂತ ಒಂದು ವ್ಯಕ್ತಿತ್ವ ಬೆಳಿತು. ಒಂದು ಹಂತಕ್ಕೆ ಮುಟ್ಟಿದ ಮೇಲೆ ನನ್ನ ನಡುವಳಿಕೆಯಲ್ಲಿ ಉಂಟಾಗುತ್ತಿದ್ದ ಬದಲಾವಣೆ ಬಹಳ ಕಡಿಮೆ. ಒಳ್ಳೆಯದು ಎನ್ನುವ ಅಂಶಗಳನ್ನೆಲ್ಲಾ ನಾನು ಪಾಲಿಸ್ತಿದ್ದೆ. ಆ ಹೊತ್ತಿಗಾಗಲೆ ಹನ್ನೆರಡನೆ ತರಗತಿಯ ಹೊಸ್ತಿಲು ಮೆಟ್ಟಿದ್ದೆ.
ಒಂದು ದಿವಸ ನಾನು ಅಪ್ಪನನ್ನ ಕಾಡಿಬೇಡಿ ಆ ಚಿತ್ರಕ್ಕೊಂದು ಗ್ಲಾಸು ಹೊಂದಿಸಿ ಸುತ್ತ ಸುಂದರ ಮರದ ಕಟ್ಟು ಹಾಕಿಸಿದೆ. ಬಡಗಿಯು ಆ ಚೌಕಟ್ಟಿನ ಮೇಲೆ ಅಲ್ಲಲ್ಲಿ ಚಿತ್ತಾರಗಳನ್ನ ಕೆತ್ತಿದ್ದ. ನೋಡಲು ಮನೋಹರವಾಗಿತ್ತು. ಮನೆಮಂದಿಗೆಲ್ಲ ಅದರಮೇಲೆ ವಿಶೇಷ ಕಾಳಜಿ. ದಿನವೂ ಅದರಮೇಲಿನ ಧೂಳು ಒರೆಸಿಡುತಿದ್ದರು. ಮನೆಗೆ ಬಂದವರೆಲ್ಲಾ "ಓ, ಕಟ್ಟು ಕೂಡಿಸಿದಿರಾ..", "ಎಷ್ಟು ಬಿತ್ತು ಚೌಕಟ್ಟಿಗೆ..?", "ಯಾವ ಮರದ್ದೋ..?" ಅಂತ ಚೌಕಟ್ಟನ್ನೇ ವಿಚಾರಿಸ್ಕೊಳ್ತಿದ್ರು. ಕಡೇಪಕ್ಷ ಮೊದಲನೆ ಸಲ ಮನೆಗೆ ಬಂದವರೂ ಕೂಡ ಚೌಕಟ್ಟನ್ನೇ ಹೊಗಳಿದರು ಹೊರತು ಚಿತ್ರವನ್ನು ಗಮನಿಸಲೇ ಇಲ್ಲ. ಆ ಚಿತ್ರದಲ್ಲಿದ್ದ ಸೊಬಗು ಯಾರ ಕಣ್ಣಿಗೂ ಬೀಳಲೇ ಇಲ್ಲ.
ನಾನು ಇಂಜಿನಿಯರಿಂಗ್ ಓದುತಿದ್ದಿದ್ದು, ಇಡೀ ಊರಿಗಲ್ಲದಿದ್ದರೂ, ನಮ್ಮ ಮನೆಯ ಆಪ್ತವಲಯಕ್ಕೊಂದು ಹೆಮ್ಮೆ ತರುವ ವಿಷಯವಾಗಿತ್ತು. ಎಲ್ಲರ ಹತ್ತಿರಾನೂ "ನಮ್ಮ ಹುಡುಗ ಇಂಜಿನೀರಿಂಗ್ ಓದ್ತಿದಾನೆ, ದೊಡ್ಡ ಊರಲ್ಲಿ.." ಅಂತ ಹೇಳ್ಕೊಂಡು ತಿರುಗುತಿದ್ದರು. ಎಲ್ಲರು ನನ್ನನ್ನು ನೋಡುವ ರೀತಿ ಬದಲಾಯಿಸದ್ದವು. ನಾನು ಕಷ್ಟಪಟ್ಟು ಮುಗಿಸಿದ ಸುಡೊಕೊ ನೋಡಿ ಗೆಳೆಯ "ನೀನು ಬಿಡು ಇಂಜಿನೀರಿಂಗ್ ಓದ್ತಿದಿಯಲ್ವಾ.. ನೀನೆಲ್ಲಾ ಆರಾಮಾಗಿ ಮುಗಿಸಬಹುದು" ಅಂತ ಕಡೆಗಾಣಿಸಿದ. ವಿಷಯಗಳು ದಿನದಿಂದಿನಕ್ಕೆ ಬದಲಾಗ್ತಿವೆ ಅಂತ ನನಗನ್ನಿಸ್ತಾ ಇತ್ತು.
ತುಂಬ ಆಸೆಯಿಂದ ನನ್ನ ಮೊದಲನೆಯ ಸಂಬಳದಲ್ಲಿ ಆ ಚಿತ್ರಕ್ಕೊಂದು ಬೆಳ್ಳಿಯ ಕಟ್ಟು ಹಾಕಿದ ಮೇಲೆಯಂತೂ ನನಗೆ, ಯಾಕಾದರೂ ಹಾಕಿದೆನೋ ಅಂತ ಅನ್ನಿಸಲಿಕ್ಕೆ ಶುರು ಆಯಿತು. ಅವ್ರ ಮನೆಯಲ್ಲಿ ಬೆಳ್ಳಿಯ ಕಟ್ಟು ಹಾಕಿದ ಚಿತ್ರ ಇದೆಯಂತೆ ಅಂತ ಜನ ನನ್ನ ಮನೆಯವರಿಗೆಲ್ಲಾ ಒಂದು ಗುಲಗಂಜಿ ತೂಕದಷ್ಟು ಹೆಚ್ಚಿಗೆನೇ ಗೌರವ ಕೊಡಲಿಕ್ಕೆ ಶುರು ಮಾಡಿದರು. ಅಪ್ಪ ಮೊನ್ನೆ ಯಾರಹತ್ರಾನೋ ಕೈಗಡ ಕೇಳಲಿಕ್ಕೆ ಹೋದಾಗ " ನಿಮಗೇನು ಕಮ್ಮಿ, ಚಿತ್ರಕೆಲ್ಲ ಬೆಳ್ಳಿಯ ಕಟ್ಟು ಹಾಕಿಸ್ತೀರಾ.." ಅಂತ ನಾವೇನು ಬೆಳ್ಳಿಯ ಗಣಿ ಮಾಲಿಕರೇನೋ ಅನ್ನುವಂತೆ ನೋಡಿದ, ದುಡ್ಡು ಕೊಡುವ ಮೊದಲು. ಮೊನ್ನೆ ಯಾರೋ ಆ ಚಿತ್ರದ ಬಗ್ಗೆ, "ನೋಡಿ ಸರ್, ಬೆಳ್ಳಿಯ ಕಟ್ಟು ಹಾಕಿಸಿದಾರೆ, ಅದರ ಹಿರಿಮೆಗೆ ತಕ್ಕಂತೆ ಇರ್ಲಿ ಅಂತ ಹೇಳಿ ಹಿಂದಗಡೆ ಎಲ್ಲ ಗುಡ್ಡ, ಮರ, ಹಕ್ಕಿ ಎಲ್ಲಾ ಯಾರೋ ಕಲಾವಿದನ ಕೈಯಲ್ಲಿ ಬಿಡಿಸಿಸಿದಾರೆ. ಇದಕ್ಕಿಂತ ಮೊದ್ಲೆನೇ ಚೆನ್ನಾಗಿ ಕಾಣುತಿತ್ತು" ಅಂತ ಆಡ್ಕೋತಿದ್ದ. ನಾನು ಬಿಡಿಸಿದ ದಿನದಿಂದಲೇ ಅದು ಹಾಗೇ ಇತ್ತು ಅಂತ ಅವನಿಗೆ ವಿವರಿಸುವುದು ಹೇಗೆ? ಕೇಳಲಿಕ್ಕೆ ಅವನಿಗೆ ಪುರುಸೊತ್ತಾದರೂ ಎಲ್ಲಿ?
ನನಗೆ ಕೆಲ್ಸ ಸಿಕ್ಕಮೇಲೆ ನಾನು ಇಡ್ತಿದ್ದ ಪ್ರತಿಯೊಂದು ಹೆಜ್ಜೆಗೂ ನನ್ನ ಕೆಲಸಕ್ಕೂ ಸಂಬಂಧ ಕಲ್ಪಿಸುತಿದ್ದರು. ನಾನು ಬಂಧುಗಳಿಗೆ ತಿಂಗಳಿಗೆರಡು ಬಾರಿ ಫೋನು ಮಾಡದಿದ್ದರೆ "ಇವನಿಗೆ ಕೆಲ್ಸ ಸಿಕ್ಕಿದೆ ಅಂತ ಪೊಗರು.." ಅಂತೆಲ್ಲಾ ಅನ್ನಿಸಿಕೊಳ್ಳಬೇಕಾಗ್ತಿತ್ತು. ಮೂರು ವರ್ಷದ ಹಿಂದೆ ತೆಗೆದುಕೊಂಡ ಅಂಗಿಯನ್ನ ನೀಟಾಗಿ ಇಸ್ತ್ರಿ ಮಾಡಿ ಹಾಕಿಕೊಂಡ್ರೆ "ಓ, ಹೊಸಾದಾ, ನಿನಗೇನು ಕಮ್ಮಿ ತಿಂಗಳಿಗೆರಡು ಜತೆ ಬಟ್ಟೆ ತೊಗೊತಿಯ.." ಅನ್ನೋ ಶೈಲಿಯಲ್ಲಿ ಮಾತುಗಳು.
ನನಗೆ ಈಗಲೂ ಅರ್ಥ ಆಗೊಲ್ಲ. ಒಂದು ಚಿತ್ರ ಚೆನ್ನಾಗಿದೆ ಅನ್ನಲು ಏನು ಕಾರಣ? ಆ ಚಿತ್ರದ ಚೌಕಟ್ಟಾ? ಚಿತ್ರ ಬಿಡಿಸಿದ ಹಾಳೆಯ ದಪ್ಪಾನಾ? ಅಥವಾ ನಿಜವಾಗಿಯೂ ಆ ಚಿತ್ರದಲ್ಲ್ಲಿರುವ ನೈಜತೆ ಮತ್ತು ಪ್ರತಿ ಸೂಕ್ಷ ವಸ್ತುಗಳನ್ನೂ ಕಡೆಗಾಣಿಸದೆ ವಿವರಿಸುವ ಕಲೆನಾ? ಅದನ್ನು ಬಿಡಿಸಿದ ದಿನದಿಂದ ಇಂದಿನವರೆಗೂ ಅದನ್ನು ಉತ್ತಮಗೊಳಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ಸರಿಕಾಣದನ್ನೆಲ್ಲಾ ಮೆಲ್ಲಗೆ ಅಳಿಸಿದ್ದೇನೆ, ಇದಿದ್ದರೆ ಇನ್ನೂ ಚೆನ್ನಾಗಿ ಕಾಣುತ್ತೆ ಅನ್ನುವುದನ್ನೆಲ್ಲಾ ಅಳವಡಿಸಿದ್ದೇನೆ. ಅದು ಯಾರೂ ಗಮನಿಸುವುದೇ ಇಲ್ಲ. ಚಿತ್ರ ಹಾಳಾಗದಿರಲೆಂದು ಹಾಕಿದ ಚೌಕಟ್ಟಿನ ಅವಾಂತರವೇ ಜಾಸ್ತಿ.
ಕೆಲವೊಮ್ಮೆ ಅದನ್ನು ತಿರುಗಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಲಾ ಅನ್ನಿಸುತ್ತೆ, ಆದರೆ ಕೆಟ್ಟುಹೋದರೆ ಅನ್ನೋ ಭಯ.
4 comments:
ಬರಹ ತುಂಬ ಚೆನ್ನಾಗಿದೆ. ನನಗಂತೂ ಕೆಲವು ನನ್ನ ಸ್ವಂತ ಘಟನೆಗಳು ನೆನಪಿಗೆ ಬಂದವು.
ಹೀಗೆ ಬರೀತ ಇರಿ. ನಿಮಗೆ ಶುಭ ಹಾರಿಸುವ
-ಚೇತನ್
ಒಳ್ಳೇ ಬರಹ.
ಹ್ಮ್.. ಚಿತ್ರ, ಚೌಕಟ್ಟಿನ ಮೂಲಕ ವಾಸ್ತವ ಬದುಕಿನ ಸತ್ಯವನ್ನು ತಿಳಿಸಿದ್ದಿರ. ಈ ಲೋಕ ಹಾಗೇ ಸ್ವಾಮಿ.. ಏನು ಮಾಡುವುದು !!
ಅನಂತು ನೀನು ಚಿತ್ರ ಬಿಡಿಸುತ್ತೀಯ ಅನೋದು ನನಗೆ ಇವತೇ ತಿಳಿದದ್ದು! ಶೈಲಿ ತುಂಬಾ ಚನ್ನಾಗಿದೆ. ಒಳ್ಳೇ ಬರಹ.
EXCELLENT... HEEGENE BARITA IRI...
Post a Comment