Tuesday, September 11, 2007

ಮೊದಲ ಸಾವು...

ನಾನು ಎರಡರಿಂದ ನಾಲ್ಕನೇ ತರಗತಿವರೆಗೆ ಓದಿದ್ದು, ನನ್ನ ಅತ್ತೆಯ ಮನೆಯಲ್ಲಿದ್ದು. ಅದು ಬೆಳಗ್ಗೆಯೊ ಅಥವಾ ಮಧ್ಯಾನ್ಹವೋ ಸರಿಯಾಗಿ ನೆನಪಿಲ್ಲ. ಆದರೆ ಅದು ರಜಾದಿನವಂತೂ ಹೌದು, ಯಾಕೆಂದರೆ ನಾನೂ ಮತ್ತು ಅಕ್ಕ ಶಾಲೆಗೆ ಹೋಗಿರಲಿಲ್ಲ. ಅಂದಾಜು ಹನ್ನೊಂದೋ ಹನ್ನೆರಡೋ ಆಗಿರಬಹುದು. ಹಿತ್ತಲಲ್ಲಿ ಇದ್ದ ಮರದ ಬುಡದಲ್ಲಿ ಹಸಿ ಮಣ್ಣಲ್ಲಿ ಗುಂಡಿ ತೋಡಿ ಏನೋ ಆಟಾಡ್ತಿದ್ದೆ. ಮನೆಗೆ ಯಾರೋ ಬಂದಿದಾರಂತ ನನ್ನ ೧೪ ನೇ sense ಹೇಳಿದಾಗ, ಬಾನಿಯಲ್ಲಿದ್ದ ನೀರಿನಲ್ಲಿ ಕೈ ತೊಳೆದುಕೊಂಡು ಒಳಗೋಡಿದೆ. ಅದೇ ಊರಲ್ಲಿರುತಿದ್ದ, ಮಾಮನ ಸಂಬಂಧಿಕರೊಬ್ಬರು ಕಬ್ಬಿಣದ ಕುರ್ಚಿಯಲ್ಲಿ ಕುಳಿತಿದ್ದು ನೋಡಿ ಆ ೧೪ ನೇ sense ಗೆ ಒಂದು ಸರ್ತಿ ಬೆನ್ನು ತಟ್ಟಿದೆ, ಖುಶಿಯಿಂದ. ಆದರೆ ಆಮೇಲೆ ಖುಶಿಯಾಗಲಿಲ್ಲ. ಅವರ ಕುರ್ಚಿಯ ಮುಂದೆ ಕುಳಿತಿದ್ದ ಅತ್ತೆ ಕಣ್ಣಲ್ಲಿ ನೀರಿತ್ತು. ಮುಖದಲ್ಲಿ ಅಳುವಿತ್ತು. ೩ ನಿಮಿಷ ಆದಮೇಲೆ ತಿಳೀತು, ತಾತ ತೀರಿಕೊಂಡರು ಅಂತ. ಆಗ ನಮ್ಮ ಮನೆಯಲ್ಲಿ ಫೋನ್ ಇರದ ಕಾರಣ ನನ್ನ ದೊಡ್ಡಪ್ಪ ಮತ್ತು ಕಕ್ಕ ಇವರಿಗೆ ಫೋನ್ ಮಾಡಿ ತಿಳಿಸುವಂತೆ ಹೇಳಿದ್ದರು.

ಮನೆಯಲ್ಲಿದವರೆಲ್ಲಾ ಅಳಲಿಕ್ಕೆ ಶುರು ಮಾಡಿದ್ದರು. ಸ್ವಲ್ಪ ಹೊತ್ತಿನಲ್ಲೇ ಸುದ್ದಿ ತಿಳಿದು, ಮಾಮ ಕಾಲೇಜ್ ಇಂದ ಮನೆಗೆ ಬಂದ್ರು. ಅಳ್ತಾನೇ ಎಲ್ಲಾ ತಯಾರಾಗ್ತಿದ್ದರು. ಚಿಕ್ಕವನಾಗಿದ್ದರಿಂದ ನನಗೆ ಅರ್ಥ ಆಗ್ತಿರಲಿಲ್ಲ, ಅಳಬೇಕಾ ಬೇಡ್ವಾ ಅಂತ. ಅರ್ಧ ತಾಸಿನೊಳಗೆ ಎಲ್ಲಾ ಬಸ್ ಸ್ಟಾಂಡ್ ಅಲ್ಲಿ ಇದ್ವಿ. ಸಿಕ್ಕಿದ ಬಸ್ ಹತ್ತಿ ೪೦ ಕಿಮೀ ದೂರದಲ್ಲಿದ್ದ ತಾತನ ಊರಿಗೆ ಹೊರಟಾಯಿತು. ಸಾಯುವುದು ಅಂದರೆ ಏನು ಎನ್ನುವ ಸರಿಯಾದ ಕಲ್ಪನೆ ಅಥವಾ ಅನುಭವ(!) ಇರದ ನನಗೆ ಅದು ಬೇರೆಯವರ ಮೇಲೆ ಬೀರಿದಷ್ಟು ಪರಿಣಾಮ ನನ್ನ ಮೇಲೆ ಬೀರಿರಲಿಲ್ಲ. ಎಲ್ಲರ ಅಳು ನೋಡಿ ಸಿಕ್ಕಾಪಟ್ಟೆ ಕೆಟ್ಟದ್ದೇ ಇರಬೇಕಂತ ಅನಿಸಿ ಆಗಾಗ ಕಣ್ಣಿಂದ ನಾಲ್ಕು ಹನಿಗಳು ಉದಿರುತಿದ್ವು. ಆದರೆ ಬಹಳ ದಿನಗಳ ಮೇಲೆ ತಾತನ ಊರಿಗೆ ಹೋಗ್ತಿದಿನಲ್ಲಾ, ನನ್ನ ವಯಸ್ಸಿನ ಆಸುಪಾಸಿನವರಾದ ದೊಡ್ಡಪ್ಪನ ಮಕ್ಕಳು, ಇನ್ನೊಬ್ಬ ಅತ್ತೆಯ ಮಕ್ಕಳು, ಚಿಕ್ಕಪ್ಪನ ಮಕ್ಕಳು ಸಿಗುತ್ತಾರಲ್ಲಾ ಅಂತ ಒಳಗೊಳಗೇ ಸ್ವಲ್ಪ ಸ್ವಲ್ಪ ಖುಶಿಯೂ ಆಗ್ತಿತ್ತು. ಪಕ್ಕದಲ್ಲಿ ಕುಳಿತಿದ್ದವರೆಲ್ಲಾ ಆಗಾಗ ತಾತನನ್ನ ನೆನೆಸಿಕೊಂಡು ಕಣ್ಣೀರು ಹಾಕ್ತಿದ್ರು. ಸ್ವಲ್ಪ ಹೊತ್ತಿನಲ್ಲೇ ನಿದ್ದೆಬಂತು, ಮಲಗಿಕೊಂಡೆ.

ತಾತ ಎಂಬ ಶಬ್ದ ಎಲ್ಲಿಯಾದರೂ ಕೇಳಿದರೆ ನನ್ನ ಮನಸ್ಸಿನಲ್ಲಿ ಮೂಡುವ ಮೊದಲ ಚಿತ್ರ ಅಂದ್ರೆ, ತಣ್ಣನೆಯ ಗಾಳಿ, ಪಕ್ಕದಲ್ಲಿ ಹುಣಸೆ ಮರಗಳ ಸಾಲು, ಬಿಳಿ ಅಂಗಿ ಮತ್ತು ಧೋತಿ ಉಟ್ಟು, ಒಂದು ಕೈಯಲ್ಲಿ ಧೋತಿಯ ಚುಂಗು, ಇನ್ನೊಂದರಲ್ಲಿ ನಮ್ಮಲ್ಲಿ ಯಾರಾದರೊಬ್ಬರ ಕೈ ಹಿಡಿದುಕೊಂಡು, ಸಾಯಂಕಾಲ ೫ ಘಂಟೆಗೆ ವಾಕಿಂಗ್ ಗೆ ಕರೆದುಕೊಂಡು ಹೋಗುತಿದ್ದ ನನ್ನ ತಾತ.

ತಾತನ ಮನೆಯ ಹತ್ತಿರವೇ ಇರುವ ಹಳೇ ಬಸ್ ಸ್ಟ್ಯಾಂಡ್ ಅಲ್ಲಿ ಇಳಿದು ಮನೆ ಕಡೆ ಹೊರಟೆವು. ಮನೆ ನೋಡಿ ನಾನು ಹೆಣೆದಿದ್ದ ಸಾವಿನ ಮನೆಯ ಕಲ್ಪನೆ ದಾರಿಯಲ್ಲೆಲ್ಲೋ ಕಳೆದುಹೋದ ಹಾಗೆ ಅನ್ನಿಸ್ತು. ಮನೆ ಸುತ್ತಮುತ್ತೆಲ್ಲಾ ಜನ ತುಂಬಿಕೊಂಡಿದ್ರು. ಅಲ್ಲಲ್ಲಿ ಮುಸುಮುಸು ಅಳು ಕೇಳಿಸ್ತಿತ್ತು. ಮನೆಯೊಳಗೆ ಕಾಲಿಟ್ಟ ತಕ್ಷಣ ಇದ್ದಕ್ಕಿದ್ದಂತೇ ಎಲ್ಲರ ಅಳು ಜೋರಾಯಿತು. ಚಿಕ್ಕವನಾಗಿದ್ದರಿಂದ ಮುಂದೆ ಏನು ನಡಿತಿದೆ ಅಂತ ನೋಡೋ ಕುತೂಹಲ ಆದ್ರೆ ಎನೂ ಕಾಣಿಸ್ತಿಲ್ಲ, ಎಲ್ಲಾ ಅಡ್ಡ ನಿಂತಿದಾರೆ. ಕಷ್ಟಪಟ್ಟು ತೂರಿಕೊಂಡು ಒಳಗ್ಹೋದೆ. ವರಾಂಡದಲ್ಲಿ ಗೋಡೆಯ ಪಕ್ಕ ತಾತನನ್ನ ಮಲಗಿಸಿದ್ದರು. ಮೊದಮೊದ್ಲಿಗೆ ಗುರ್ತು ಹಿಡಿಲಿಕ್ಕೇ ಆಗ್ಲಿಲ್ಲ. ಅವರ ಮುಖದಲ್ಲೊಂದು ಕಳೆ ಕಳೆದ್ಹೋಗಿತ್ತು. ಮುಖ ಕಾಣುವಷ್ಟು ಬಿಟ್ಟು ಬಿಳಿಬಟ್ಟೆ ಹೊದಿಸಿದ್ರು. ಹಣೆಗೊಂದು ಸಣ್ಣ ಕುಂಕುಮ, ಕೊರಳಿಗೊಂದು ಮಲ್ಲಿಗೆ ಹಾರ. ಆದ್ರೆ ತಾತನ ಎತ್ತರವ್ಯಾಕೊ ಕಡಿಮೆಯಾಗಿದೆಯಲ್ಲಾ? ಸಾಯುವಾಗ ಎಲ್ಲರೂ ಸ್ವಲ್ಪ ಗಿಡ್ಡಕಾಗ್ತಾರಾ ಅಂತ ಅನಿಸ್ತು. ಆಮೇಲೆ ಯಾರೋ ಹೇಳಿದ ಮೇಲೆ ತಿಳಿತು, ಸತ್ತಾಗ ಕಾಲು ಚಕ್ಳಂಬಕ್ಳ ಹಾಕಿ ಮಲಗಿಸ್ತಾರೆ ಅಂತ. ಆವಾಗ ಕತ್ತೆತ್ತಿ ಸುತ್ತಮುತ್ತ ಎಲ್ಲಾ ನೋಡಿದೆ. ಎಲ್ಲಾ ನನ್ನ ಅತಿ ಹತ್ತಿರದ ಸಂಬಂದಿಗಳು. ಅಂತಹ ದುಃಖದ ಸಂದರ್ಭದಲ್ಲೂ ಅವರನ್ನೆಲ್ಲಾ ನೋಡಿ ಖುಶಿಯಾಯ್ತು. ಆದ್ರೆ ಅದನ್ನ ವ್ಯಕ್ತ ಪಡಿಸುವುದು ಹ್ಯಾಗೆ ಅಂತ ಗೊತ್ತಾಗ್ಲಿಲ್ಲ. ಯಾರನ್ನಾದರೂ ಬಹಳ ದಿನಗಳ ಮೇಲೆ ನೋಡಿದರೆ ಮುಖದಲ್ಲೊಂದು ಖುಶಿಯ ಮುಗುಳ್ನಗೆ ಇಟ್ಟುಕ್ಕೊಂಡು ಮಾತನಾಡಿಸಿಯೇ ಅಭ್ಯಾಸ. ಗೊತ್ತಿರದಿದ್ದಾಗ ಸುಮ್ಮನಿರುವುದೇ ವಾಸಿ ಅಂತ ಯಾರಾದ್ರೂ ನನ್ನ ಕಡೆ ತಿರುಗಿದಾಗ, ಕಷ್ಟಪಟ್ಟು ಅಳು ನಗುವಿಲ್ಲದ ಮುಖ ಮಾಡ್ತಿದ್ದೆ. ಅಷ್ಟರಲ್ಲಿ ನನ್ನ ಅತ್ತೆ ಕೆಳಗಡೆ ಬಿದ್ದು, ತಾತನನ್ನ ತಬ್ಬಿಕೊಂಡು, ಜೋರಾಗಿ ಅಳುತ್ತಾ ಎನೋ ಬಡಬಡಾಯಿಸೊದಿಕ್ಕೆ ಶುರು ಮಾಡಿದ್ರು. ಇಷ್ಟೊತ್ತು ಸರಿಯಾಗಿದ್ರಲ್ಲಾ, ಈಗೇನಾಯಿತು ಅಂತ ಭಯ ಆಯ್ತು. ಸುಮ್ನೆ ಹೋಗಿ ಅಲ್ಲೇ ಇದ್ದ ಕಟ್ಟೆಯ ಮೇಲೆ ಕುಳಿತ್ಕೊಂಡೆ.

ಹಿಂಗೇ ಘಂಟೆಗಳು ಉರುಳುತಿದ್ದಂಗೆ ಎಷ್ಟೋ ಜನ ಬಂದ್ರು, ಹೋದ್ರು. ಹೊಸದಾಗಿ ಯಾರಾದರೂ ಬಂದಾಗೆಲ್ಲಾ ಎಲ್ಲರ ಅಳು ಜೋರಾಗ್ತಿತ್ತು. ಬಂದವರು ಹಳಬರಾದ ಮೇಲೆ ಸ್ವಲ್ಪ ಕಡಿಮೆ ಆಗ್ತಿತ್ತು. ಪ್ರತಿಯೊಬ್ಬರು ಅಳುವ ರೀತಿ ಬೇರೆಯಾಗಿತ್ತು, ದುಃಖ ಹೊರಗೆಡುವ ರೀತಿ ಬೇರೆಯಾಗಿತ್ತು. ಅವರನ್ನೆಲ್ಲಾ ನಾನು ಮೊದಲಿಗೆ ಬಹಳಷ್ಟು ಸಾರಿ ನೋಡಿದ್ದೆ ಆದರೂ ಈ ರೀತಿ ಅಲ್ಲ. ಪ್ರತಿಯೊಬ್ಬರೂ ಹ್ಯಾಗ್ಯಾಗೋ ಅಳೋದು ನೋಡಿ ವಿಚಿತ್ರ ಅನ್ನಿಸ್ತಿತ್ತು. ನೋಡಿದರೆ ಬಾರಿ ಗಟ್ಟಿಗರು ಅನ್ನಿಸುವ ಕೆಲವು ಗಂಡಸರೂ ಕೂಡ ಅಳ್ತಿದ್ರು. ಸುಮ್ಮನೆ ಕುಳಿತವನಿಗಿನ್ನೇನು ಕೆಲ್ಸ, ಬೇರೆಯವರನ್ನ ವೀಕ್ಷಿಸೋದು ಬಿಟ್ಟು.

ದೂರದೂರಲ್ಲಿ ಇರ್ತಿದ್ದ ಅಪ್ಪ ಅಮ್ಮ ಬಂದಮೇಲೆ ತಾತನನ್ನ ಕರೆದುಕೊಂಡು ಹೋಗೋಕ್ಕೆ ಎಲ್ಲಾ ಏರ್ಪಾಡು ಮಾಡಿದ್ರು. ತಾತನ್ನ ಎತ್ತಿ ಅಂಗಳದಲ್ಲಿ ಚಟ್ಟದ ಮೇಲೆ ಮಲಗಿಸಿದ್ರು. ಎಲ್ಲರಂತೆ ನಾನೂ ಹೋಗಿ ನಮಸ್ಕಾರ ಮಾಡಿ ಬಂದೆ. ನನಗೇನು ಗೊತ್ತಿತ್ತು, ಅದೇ ಕೊನೆಯಬಾರಿಗೆ ಅವರನ್ನ ನೋಡುವುದು ಅಂತ, ಇನ್ನುಮುಂದೆ ಅವರು ನಮ್ಮ ಜೊತೆಯಲ್ಲಿರುವುದಿಲ್ಲ ಅಂತ. ಕಣ್ಣೆದುರಿಗೆ ನಡಿತಿರುವುದೆಲ್ಲಾ ನೋಡಿ ಹೌದೆನ್ನಿಸಿದ್ರೂ, ಅರ್ಥ ಮಾಡಿಕೊಳ್ಳದಾಗದಂತಹ ಪರಿಸ್ಥಿತಿ. ಎಲ್ಲರೂ ಕೊನೆಯಬಾರಿಗೆ ನಮಸ್ಕಾರ ಮಾಡಿದ ಮೇಲೆ ನಾಲ್ಕುಜನ ಸೇರಿ ಎತ್ಕೊಂಡು ಹೊರಟ್ರು, ಹಿಂದೆ ಇಷ್ಟೊಂದು ಜನ. ನಾನೂ ಅವ್ರ ಜೊತೆಗೆ ಹೊರಟಿದ್ದೆ, ಯಾರೋ ಬೈದು ಎಳ್ಕೊಂಡು ನಿಲ್ಲಿಸಿದ್ರು, 'ಹಾಗೆಲ್ಲ ಹೋಗಬಾರದು'ಅಂತ ಹೇಳಿ. ತಾತನ್ನ ಸುಡ್ತಾರೆ ಅಂತ ಕೇಳಿದ್ದೆ, ಅವಾಗ ಎಷ್ಟು ನೋವಾಗುತ್ತೋ ಅಂತ ದುಃಖ ಆಯ್ತು.

ರಾತ್ರಿ ಎಲ್ಲರದೂ ಸ್ನಾನ ಆಯ್ತು. ೧೩ ದಿವ್ಸ ಮೈಲಿಗೆ ಅಂತ ಯಾರನ್ನೂ ಅಡುಗೆಮನೆ ಒಳಗೆ ಬಿಡ್ತಿರಲಿಲ್ಲ. ಬರೇ ನನ್ನ ಅತ್ತೆಯ ಮನೆಯವರು ಅಡುಗೆ ಮಾಡಿ ಬಡಿಸ್ತಿದ್ರು. ೨ ದಿವ್ಸದಲ್ಲೇ ಮನೆಯ ವಾತಾವರಣ ಎಲ್ಲಾ ತಿಳಿಯಾಯ್ತು. ದೊಡ್ಡವರು ಹೇಗಿದ್ದರೊ ಗೊತ್ತಿಲ್ಲ, ನಾವು ಹುಡುಗರಂತೂ ಖುಶಿಯಿಂದ ಆಟ ಆಡಿಕೊಂಡಿದ್ವಿ. ಎಲ್ಲಾ ಮಕ್ಕಳು ಸೇರಿದ್ದರಿಂದ ಅದೊಂದು ಚಿಕ್ಕ ಬೇಸಿಗೆ ರಜದ ತರವೇ ಆಗಿತ್ತು. ಮಾಮೂಲಿಯಂತೆ ಉಸುಗಿನಲ್ಲಿ ಮನೆಕಟ್ಟೊದು, ಹುಣಸೇಹಣ್ಣು ಉಪ್ಪು ಖಾರ ಕುಟ್ಟಿ ಐಸ್ ಕ್ರೀಮ್ ಕಡ್ಡಿಗೆ ಸಿಗಿಸ್ಕೊಂಡು ಮುಖ ಹುಳ್ಳಗೆ ಮಾಡ್ಕೊಂಡು ತಿನ್ನೋದು, ಕಳ್ಳ ಪೋಲಿಸ್ ಆಟ ಆಡೋದು, ಚೌಕಬಾರ ಆಡೊದು, ಎಲ್ಲಾ ನಡೆದಿತ್ತು, ಪುರಸೊತ್ತು ಇಲ್ಲದ ಹಾಗೆ.

ಸಾಯಂಕಾಲ ಅದೇ ಹುಣಸೇ ಮರಗಳ ಸಾಲಿನ ರಸ್ತೆಯಲ್ಲಿ ಎಲ್ಲಾ ಹುಡುಗ್ರೂ ಜೋರಾಗಿ ನಗಾಡ್ತ, ಗಲಾಟೆ ಮಾಡ್ಕೊಂಡು ವಾಕಿಂಗ್ ಅಂತ ಹೋಗಿಬರ್ತಿದ್ವಿ. ಪಕ್ಕದಲ್ಲಿ ತಾತ ಇಲ್ಲದಿರುವುದು ಪಕ್ಕನೆ ನೆನಪಾಗ್ತಿರಲಿಲ್ಲ. ಎಲ್ಲವನ್ನೂ ಬೇಗನೆ ಮರೆಯುವ ಮನಸ್ಸೋ ಅಥವಾ ಇಷ್ಟು ದಿವಸ ಜೊತೆಗಿದ್ದವರು ಈಗ ಇಲ್ಲ ಎನ್ನುವುದನ್ನು ಕಲ್ಪಿಸಿಕೊಳ್ಳೊಕ್ಕಾಗದೇ, ಇನ್ನೂ ಜೊತೆಯಲ್ಲೇ ಇದ್ದಾರೆ ಅಂತ ನಂಬುವ ಮನಸ್ಸೋ? ಗೊತ್ತಿಲ್ಲ ನಾನಿನ್ನೂ ಚಿಕ್ಕವನು.

2 comments:

Sumantha said...

Ellavannu Grahisuva Shakti Aa vayassinalliye, manassu doddadu, Vikaasavaadante arhisikolluva pari heechaitu .. Yaavagalu avaru ninna joteyalle iddaremba Nishchala bhaava ninnannu Ishtu bareyalikke tandide ....
Adu Ellavannu mareyuva Vayassu ..!!
Neenu aagale chikkavanaagiralilla ANANTA ..... :)

ಅನಂತ said...

ಧನ್ಯವಾದಗಳು ಸುಮಂತ.. :) ನೀನು ಲೇಖನಗಳನ್ನ ವಿಮರ್ಶಿಸುವ ಪರಿ ಇಷ್ಟ ಆಯ್ತು..