ಅಂದಹಾಗೆ ಇದೇನೂ ಅಸಾಧಾರಣ, ಯಾರೂ ಮಾಡೇ ಇರದಂತಹ ಕೆಲಸವೇನಲ್ಲ. ನಮ್ಮ ದೇಶದಲ್ಲೇ ಸರಿಸುಮಾರು ೮೪ ಕೋಟಿ ಜನ ಇದನ್ನು ನಡೆಸಿದಾರೆ ಮತ್ತು ನಡೆಸ್ಕೊಂಡು ಹೋಗ್ತಾನೇ ಇದ್ದಾರೆ. ನಾನು ಮಾಡಿದ್ದೂ ಅದನ್ನೇ, ಅಂದ್ರೆ ಮೊಬೈಲ್ ಬಳಸದೇ ಇರುವುದು.
ಕಳೆದ ಎರಡೂ ಮುಕ್ಕಾಲು ತಿಂಗಳಿಂದ ನಾನು ನನ್ನ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಇಟ್ಟಿದ್ದೇನೆ. ಇದಕ್ಕೆ ಕಾರಣಗಳೆರಡು, ಒಂದು ಹೀಗೇ ಸುಮ್ನೆ, ಇನ್ನೊಂದು ಈ ಸಮಯದಲ್ಲಿ ನಾನು ಹಂಚಿಕೊಳ್ಳಲಾಗದಂತಹದ್ದು. ಮುಂದೊಂದು ದಿವಸ ಖಂಡಿತ ಹೇಳ್ತೀನಿ.
ಈ ದಿನಗಳಲ್ಲಿ ಹಾಗೂ ಅದರ ಆಸುಪಾಸಿನಲ್ಲಿ ಆದ ಕೆಲವೊಂದು ವಿಷಯಗಳು ಇಲ್ಲಿವೆ.
~*~
ಅಪ್ಪ ಅಮ್ಮ ಬೆಂಗಳೂರಿಗೆ ಬಂದಿದ್ದರು, ಸಂಬಂಧಿಕರ ಗೃಹಪ್ರವೇಶಕ್ಕೆ.'ಅಪ್ಪ, ನಾನು ಮೂರು ತಿಂಗಳು ಮೊಬೈಲು ಆಫ್ ಮಾಡಿ ಇಡೋಣ ಅಂತಿದೀನಿ.'
"ಆಯ್ತು. ಮೊಬೈಲ್ ಬಳಸದೇ ಇರಬಹುದು. ಆದರೆ ನಿನ್ನನ್ನು ಸಂಪರ್ಕಿಸುವುದು ಹೇಗೆ? ಇನ್ಕಮ್ಮಿಂಗ್ ಅಷ್ಟೆ ಬರೋಹಾಗೆ ಮಾಡಿಡುವುದಕ್ಕೆ ಆಗಲ್ವ?" (ನಾನು ಬೆಂಗಳೂರಿನಲ್ಲಿ ಒಬ್ಬಂಟಿಗನಾಗಿ ವಾಸಿಸುವುದು)
'ಇನ್ಕಮ್ಮಿಂಗು ಔಟ್ಗೋಯಿಂಗು ಏನೂ ಬೇಡ ಅಪ್ಪ. ಪತ್ರ ಹಾಕ್ತಿರ್ತೀನಿ.'
"ಸರಿ."
ಈ ದಿನಗಳಲ್ಲಿ ನಾನು ಹಾಕಿದ ಪತ್ರಗಳು ೨. ಮನೆಯಿಂದ ಬಂದ ಪತ್ರ ೧.
~*~
ಅಪ್ಪನಿಗೆ ಹೇಳಿದ ಮಾತನ್ನು ಅಮ್ಮನಿಗೂ ಹೇಳಿದೆ."ಯಾಕಪ್ಪ ನಿನಗೆ ಫೋನ್ ಮಾಡಿ ಅಷ್ಟೊಂದು ತೊಂದ್ರೆ ಕೊಡ್ತಿದಿವಾ? ಇನ್ನುಮುಂದೆ ಫೋನ್ ಮಾಡೋದು ಕಡಿಮೆ ಮಾಡ್ತೀವಂತೆ, ಆಫ್ ಮಾಡ್ಬೇಡ."
'ಅಯ್ಯೋ ಹಂಗೇನಿಲ್ಲಮ್ಮ. ಸುಮ್ನೆ ಹೀಗೇ ಆಫ್ ಮಾಡ್ತಿರೋದು.'
"ಬರೇ ಮನೆಗಷ್ಟೇ ಫೋನ್ ಇಲ್ವಾ ಅಥವಾ ಎಲ್ಲರಿಗೂ ಇಲ್ವಾ?"
'ಏನು ಹಂಗಂದ್ರೆ? ಇಡೀ ಪ್ರಪಂಚಕ್ಕೇ ಇಲ್ಲ ಆಯ್ತಾ?'
"ಬೇರೆ ಸಿಮ್ಮು ತೆಗೋತಿದಿಯಾ?"
'ಏನ್ ಅಮ್ಮಾ, ಇಲ್ಲ.'
ನನಗೆ ವಾರದಲ್ಲಿ ೩-೪ ಬಾರಿ ಮನೆಯಿಂದ ಕರೆಬರುತ್ತಿತ್ತು, ಆಫ್ ಮಾಡುವ ಮೊದಲು.
~*~
ಮೂರು ತಿಂಗಳವರೆಗೆ ಮೊಬೈಲ್ ಬಳಸುವುದಿಲ್ಲ ಅಂತ ಆಫ್ ಮಾಡುವ ನಾಲ್ಕು ದಿವಸ ಮುಂಚೆನೇ ಒಂದು ಮೈಲು ಹಾಕಿದೆ. ಕರೆಗಳ ಮಹಾಪೂರನೇ ಹರಿದು ಬಂತು."ಲೋ ಹುಚ್ಚು ಹಿಡಿತಾ ನಿಂಗೆ? ನಿನ್ನೆ ಮೊನ್ನೆಯಲ್ಲಾ ಸರಿ ಇದ್ಯಲ್ಲಾ?"
"ಯಾಕೋ ದೇವದಾಸ್, ಯಾರು ಕೈ ಕೊಟ್ರು ನಿಂಗೆ?"
"ಎನಾದ್ರೂ ಪ್ರಾಬ್ಲಮ್ ಇದ್ರೆ ಹೇಳೋ.. ಮನೆಯಲ್ಲೇನಾದ್ರೂ ತೊಂದರೇನಾ?"
"ಆಫೀಸ್ ಅಲ್ಲಿ ಆದ್ರೆ ಚಾಟ್, ಮೈಲ್ ಅಂತ ಹೇಗೋ ಸಿಕ್ತೀಯಾ, ಆದ್ರೆ ವೀಕೆಂಡ್ ಹ್ಯಾಗೆ ನಿನ್ನ ಕಾಂಟಾಕ್ಟ್ ಮಾಡೋದು?"
"ಏನಪ್ಪಾ ಮೊಬೈಲ್ ಖರ್ಚು ಉಳಿಸೋ ಪ್ಲ್ಯಾನಾ? ಲೊ ಜುಗ್ಗಾ ಆನ್ ಮಾಡೋ."
ಎಲ್ಲರಿಗೂ ಸಮಜಾಯಿಷಿ ಕೋಡುವಷ್ಟೊತ್ತಿಗೆ ನನಗೆ ಸಾಕುಸಾಕಾಗಿ ಹೋಗಿತ್ತು.
~*~
ನಾನು ಆಫ್ ಮಾಡಿದಮೇಲೆ ಗೊತ್ತಾದ ಸ್ನೇಹಿತರು ಎಲ್ಲಾ ಮೇಲಿನ ಪ್ರಶ್ನೆಗಳನ್ನು ಪುನರಾವರ್ತಿಸಿದ್ರು. ವಾರಕ್ಕೊಮ್ಮೆ ಸಿಗುವ ಸ್ನೇಹಿತರೂ, ದಿನವೂ ಸಿಗುವ ಆಫೀಸಿನ ಗೆಳೆಯರಿಂದ ಅರ್ಧ ಮುಕ್ಕಾಲು ಘಂಟೆಯ interview ಗಳೂ ನಡೆದವೂ, ಇಲ್ಲದ ವಿಷಯವನ್ನು ಬಾಯಿ ಬಿಡಿಸೋಕೆ. ನಾನು ಕೊಟ್ಟ ಉತ್ತರಗಳು ಸಮಾಧಾನ ಕೊಡದಿದ್ದರೆ ಮರುದಿವಸ ಮತ್ತೆ ಶುರು.~*~
ಈ ಅವಧಿಯಲ್ಲಿ ಒಂದ್ ಬಾರಿ ಮನೆಗೆ ಹೋಗಿದ್ದೆ. ನಮ್ಮದು ಅವಿಭಕ್ತ ಕುಟುಂಬ. ಒಮ್ಮೆ ಎಲ್ಲರೂ ಒಟ್ಟಿಗೆ ಕುಳಿತಿರಬೇಕಾದರೆ,"ಅನಂತ ನಿಂಗೆ ಹೆಣ್ಣು ನೋಡೋಕೆ ಶುರು ಮಾಡೋಣ್ವಾ?"
'ನನಗಾ? ಈಗ್ಲೇ ಯಾಕೆ?'
"ಅಲ್ಲ ಈಗಿಂದ ಶುರು ಮಾಡಿದ್ರೆ ಎಲ್ಲಾ ಮುಗಿಯುವಷ್ಟರಲ್ಲಿ ಇನ್ನೂ ಎರಡು ವರ್ಷ ಆದ್ರೂ ಆಗುತ್ತೆ."
'ಹ್ಮ್, ಈಗ್ಲೇ ಹುಡುಕುವಂತದ್ದೇನೂ ಬೇಡ. ಮನೆಯಲ್ಲಿ ನನಗಿಂತ ದೊಡ್ಡೊರು ಇನ್ನೂ ೫-೬ ಜನ ಇದ್ದಾರೆ, ಅವ್ರಿಗ್ಯಾಕೆ ಹುಡ್ಕಲ್ಲಾ?'
"ಅವ್ರಿಗೂ ಹುಡ್ಕೋಣ. ಏನ್ಮಾಡೋದು, ಈಗಿನ ಕಾಲದಲ್ಲಿ ಒಳ್ಳೆ ಸಂಬಂಧ ಸಿಗೋದು ಕಷ್ಟ. ಅದಕ್ಕೇ. ಹೋಗ್ಲಿಬಿಡು, ಜಾಸ್ತಿ ಒತ್ತಾಯ ಮಾಡಲ್ಲ, ಈಗ ಮಾತಾಡೊದನ್ನ ನಿಲ್ಸಿದೀಯ, ಆಮೇಲೆ ಮನೆಗೆ ಬರೋದನ್ನೇ ನಿಲ್ಲಿಸಿ ಬಿಡ್ತೀಯಷ್ಟೆ"
ನನ್ನ ಅಕ್ಕನ ಮದುವೆಯಾಗಿ ಕೆಲವು ತಿಂಗಳಾಗಿದೆ ಅಷ್ಟೆ. ನಾನಿನ್ನೂ ೨೩ ವಯಸ್ಸಿನ ಹಸುಗೂಸು. ಈಗಿಂದೀಗೆ ಮದುವೆಯಾಗ ಬೇಕು, ಇಲ್ಲದಿದ್ದರೆ ಮುಂದೆ ಕಷ್ಟ ಅನ್ನುವ ವಯಸ್ಸೂ ಅಲ್ಲ. ಅಕ್ಕನ ಮದುವೆಯ ಸಮಯದಲ್ಲಿ ಇನ್ನು ೨-೩ ವರ್ಷದ ನಂತರ ನನ್ನ ಮದುವೆಯ ಬಗ್ಗೆ ಯೋಚನೆ ಮಾಡಿದರಾಯಿತು ಅಂತ ಎಲ್ಲಾ ಮಾತಾಡಿಕೊಂಡಿದ್ದರೂ ಕೂಡ. ಪಾಪ, ನನಗೆ ಗೊತ್ತು, ನನ್ನ ನಡುವಳಿಕೆಗಳು ಅವರ ಮನಸ್ಸಿನಲ್ಲಿ ಏನೇನು ಸಂಶಯ ಬಿತ್ತಿರಬಹುದು ಅಂತ.
~*~
ಈ ಸಮಯದಲ್ಲಿ ನನಗೆ ಸಿಕ್ಕ ಬಿರುದಾವಳಿಗಳು ಅನೇಕ. ಹುಚ್ಚ, ದೇವದಾಸ, ಸನ್ಯಾಸಿ, ಮಠಾಧಿಪತಿ, ಇನ್ನು ಏನೇನೋ..~*~
ನನ್ನಲ್ಲುಂಟಾಗುವ ಭಾವನೆಗಳನ್ನೆಲ್ಲಾ ರಸವತ್ತಾಗಿ ಹಂಚಿಕೊಳ್ಳುವುದು ನನಗೆ ಬರುವುದಿಲ್ಲ. ಇಷ್ಟು ದಿನಗಳಲ್ಲಿ ನನಗನ್ನಿಸಿದ್ದನ್ನು ಹೇಳಬೇಕಂದರೆ, ನೆಮ್ಮದಿಯಾಗಿತ್ತು, ಖುಷಿಯಾಯ್ತು, ಅಷ್ಟೆ.
ಈ ಅಕ್ಟೋಬರ್ ನಾಲ್ಕನೇ ತಾರೀಖಿಗೆ ಮೊಬೈಲ್ ಬಳಸದೇ ಮೂರು ತಿಂಗಳಾಗುತ್ತೆ. ಎಲ್ಲರ ಕಷ್ಟ, ನನ್ನ ಸುಖಗಳನ್ನು ಗಣನೆಗೆ ತೆಗೆದುಕೊಂಡು ಮೊಬೈಲು ಬಳಸಬೇಕೋ ಇಲ್ಲವೋ ಅಂತ ಅವತ್ತು ನಿರ್ಧಾರ ಮಾಡ್ತೀನಿ. ಒಂದು ವೇಳೆ ಬಳಸಲು ಶುರುಮಾಡಿದರೂ ಅದು ತಾತ್ಕಾಲಿಕವಾಗಿ, ಕೆಲವು ದಿನಗಳೋ, ತಿಂಗಳುಗಳೋ, ವರ್ಷಗಳೋ ಅಷ್ಟೆ.
12 comments:
ಅಲ್ರೀ ಜನ ಹೀಗೂ ಮಾಡ್ತಾರಾ!!
ವೆರಿಗುಡ್, ಇದ್ಯಾಕೋ ನನಗೂ inspiration ಆಗ್ಬೋದಾ ಅಂತ!
ನಾನಂತೂ ನಿಮಗೆ ಯಾವ ಬಿರುದೂ ಕೊಡೋಲ್ಲ. ಖಂಡಿತ ನಿಜವಾದ naarmal ಮನುಷ್ಯ ನೀವು.
It is really nice experiment. What ever may be the reason behind your decision, one thing is for sure, it is good for your health!
-Bala
"ನಾನಿನ್ನೂ ೨೩ ವಯಸ್ಸಿನ ಹಸುಗೂಸು" ಏನ್ ಗುರೂ.. ಹಿಂಗಂದ್ಬಿಟ್ರೆ..?! ;P
ನಂಗೂ ಈ ಪ್ರಯೋಗ ಒಂದ್ಸಲ ಮಾಡಿ ನೋಡ್ಬೇಕು ಅಂತಿದೆ. ಆದ್ರೆ ಮೂರು ತಿಂಗ್ಳುಗಟ್ಲೆ ಮಾಡೋಕಾಗೋದು ಸುಳ್ಳು.. ಹೆಚ್ಚೂಂದ್ರೆ ಮೂರು ದಿನ ಮಾಡ್ಬಹುದೇನೋ.. ಅದ್ಕೇ ಈಗ ಅವಾಗಿವಾಗ ಎರಡು-ಮೂರು ತಾಸು ಸ್ವಿಚ್ಚಾಫ್ ಮಾಡಿ ಅಭ್ಯಾಸ ಮಾಡ್ಕೋತಿದೀನಿ.. :)
ಒಳ್ಳೆ ಪ್ರಯೋಗ. ನಾನೂ ಒಮ್ಮೆ ಹೀಗೆ ಮಾಡಿದ್ದೆ. ಆದ್ರೆ ಒಂದೇ ದಿನದಲ್ಲಿ ಭಂಗ ಆಯ್ತು. ಹೀಗ ಮತ್ತೊಮ್ಮೆ ಇಂತಹದ್ದೊಂದು ಪ್ರಯೋಗ ಮಾಡೋ ಮನಸ್ಸಾಗ್ತಿದೆ.
-ಜಿತೇಂದ್ರ
ಇದು ಹುಚ್ಚು ಪ್ರಯೋಗವೇನಲ್ಲ ಬಿಡಿ. ಮನಶ್ಶಾಂತಿ ಸಿಗೋದು ಮುಖ್ಯ :)
@ಹರೀಶ,
ಹೌದು, ಈಗಿನ ಜನಕ್ಕೆ ಏನೋ ಆಗಿದೆ ;)
@ವಿಕಾಸ್,ಬಾಲ,
thank u thank u.. :)
@ಸುಶ್ರುತ,
ಓಕೆ, ಅದನ್ನ ಇಲ್ಲಿ ಸರಿಪಡಿಸ್ತಿದೀನಿ, 'ಮುದಿಗೂಸು'. ಆಯ್ತಾ? ;) ಒಳ್ಳೆ ಐಡಿಯಾ ಕೊಡ್ತೀನಿ, ಸ್ವಿಚ್ ಆಫ್ ಮಾಡಿ ಮಂಚದ ಕೆಳಗೋ, ಅಟ್ಟ ಮೇಲೋ ಮೊಬೈಲ್ನ ಬಿಸಾಕು. ಹತ್ರ ಇದ್ರೆ ಮಾತ್ರ ಅದನ್ನ ಬಳಸೋ ಮನಸ್ಸು ಬರೋದು.. ;)
@ಜಿತೇಂದ್ರ,
ಧನ್ಯವಾದಗಳು, ಪ್ರಯತ್ನ ಮಾಡಿ, ಒಳ್ಳೆ ಅನುಭವ ಸಿಗುತ್ತೆ.. :)
@ಲಕ್ಷ್ಮಿ,
:) ಧನ್ಯವಾದಗಳು..
ಒಳ್ಳೆಯ ಪ್ರಯೋಗಾರಿ ಇದು. ಆಗಾಗ, ಮನದ ಮೂಲೆಯೊಳಗೆ ಹೋಗಿ ಕೂತುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು. ಮೊಬೈಲ್ಗಳು ಬಂದಿದ್ದು ಈಗ ಹತ್ತು ವರ್ಷದಲ್ಲಿ. ಅದಕ್ಕೂ ಮುಂಚೆ ನಾವೆಲ್ಲ ಇದ್ದಿದ್ದೇ ಹೀಗಲ್ಲವಾ?
- ಪಲ್ಲವಿ ಎಸ್.
ಮೊಬೈಲು ಸ್ವಿಚ್ ಆಫ್ ಮಾಡೋದು. ಅದೂ ಮೂರು ತಿಂಗಳು. ಇದು ನನ್ನ ಕಡೆಯಿಂದ ಆಗೋ ಮಾತಲ್ಲ ಸ್ವಾಮಿ. ಮೂರು ನಿಮಿಷ ಮೊಬೈಲ್ ಸ್ವಿಚ್ ಆಫ್ ಆದ್ರೂ ಸಾಕು, ನಮ್ಮ ಸಂಪಾದಕರ ಸಿಟ್ಟು ನನ್ನ ಕೆಲಸಕ್ಕೆ ಕುತ್ತು.:)
ನವಿರು ಬರಹ.
- ಜೋಮನ್
ಚೆನ್ನಾಗಿದೆ ಪ್ರಯೋಗ ನಾನೂ ಸ್ಟೂಡೆಂಟ್ ಆಗಿದ್ದಾಗ ಈವಾರ ಇಂಗ್ಲಿಷ್ ಮಾತಾಡೊಲ್ಲ ಈ ವಾರ ಕನ್ನಡ ಮಾತಾಡೊಲ್ಲ ಅಂತೆಲ್ಲಾ ಪ್ರಯೋಗ ಮಾದ್ತಿದ್ದಿದ್ದು ನೆನಪಾಯ್ತು
ಅನಂತ್ ಅವರೆ...
ಒಳ್ಳೆ ಕೆಲಸ ಮಾಡಿದ್ದೀರಿ. ಸಾಧ್ಯವಾದಷ್ಟು ದಿನ ಮುಂದುವರೆಸಿ. ನಾನು ಹೇಳುವುದು ಬಳಸದೇ ಇರಬಾರದು ಅಂತಲ್ಲ, ಮಿತವಾಗಿ ಬಳಸುವುದನ್ನ ಅಭ್ಯಾಸ ಮಾಡಿಕೊಂಡಷ್ಟೂ ಮನಸ್ಸಿಗೆ ಹಿತ ಅನ್ನುವುದು ನನ್ನ ಅರಿವಿಗೆ ಬಂದಿದೆ.
ಮೊಬೈಲ್ ಇಲ್ಲದೇ ಬಳಸದೇ ಇರುವುದು ಬೇರೆ. ಮೊಬೈಲ್ ಇದ್ಯಾಗ್ಯೂ ಹೀಗೆ ಅದನ್ನ ಉಪಯೋಗಿಸದೇ ಇರೋದು ಒಂಥರಾ ನಮ್ಮ ಮನಸ್ಸನ್ನ ನಾವೇ ಪರೀಕ್ಷೆಗೆ ಒಳಪಡಿಸಿಟ್ಟಂತೆ. ನಾನೂ ಎರಡು ವರ್ಷದಿಂದ ಈ ಕೆಲಸ ಮಾಡುತ್ತಿದ್ದೇನೆ. ಆದ್ರೆ ಮೊಬೈಲ್ ಅನ್ನು ಆಫ್ ಮಾಡಿಟ್ಟಿಲ್ಲ, ವೈಬ್ರೇಷನ್ ಮೋಡ್ ಅಲ್ಲಿರತ್ತೆ. ಮಗನ ಸ್ಕೂಲ್ ಅಥವಾ ಇನ್ಯಾವುದೋ ಕೆಲಸಗಳ ಸಲುವಾಗಿ ನಾನೊಬ್ಬಳೇ ಹೊರಗೆ ಹೋಗೋವಾಗ ಅದನ್ನ ಜೊತೆಯಲ್ಲಿ ತಗೊಂಡು ಹೋಗ್ತೀನಿ. ಅತೀ ಅವಷ್ಯಕತೆ ಇರೋವಾಗ ಒಂದು ಫೋನಾಯಿಸ್ತೀನಿ. ತುಂಬ ಕ್ಲೋಸ್ ಜನಕ್ಕೆ ಆ ನಂಬರ್ ಕೊಟ್ಟಿರ್ತೀನಿ, ಲ್ಯಾಂಡ್ ಲೈನ್ ರಿಸೀವ್ ಮಾಡಿಲ್ಲ ಅಂದ್ರೆ ತುಂಬ ಅವಷ್ಯಕತೆ ಇದ್ರೆ ಆ ನಂಬರ್ ಗೆ ಕಾಲ್ ಮಾಡ್ತಾರೆ, ಯಾಕೇಂದ್ರೆ ಆ ನಂಬರ್ ಯಾರ್ಯಾರ ಹತ್ರ ಇದ್ಯೋ ಅವ್ರಿಗೆಲ್ಲ ಗೊತ್ತಿದೆ ನಾನದನ್ನ ರಿಸೀವ್ ಮಾಡಲ್ಲ ಅಂತ:-)
ಅಯ್ಯೋ ಎಷ್ಟೊಂದು ದಿವಸಗಳು ತಡಮಾಡಿ ಉತ್ತರಿಸ್ತಿದೀನಿ, ದಯವಿಟ್ಟು ಕ್ಷಮಿಸಿ.. :)
@ಪಲ್ಲವಿ, ಮಾಲಾ,
ತುಂಬಾ ಧನ್ಯವಾದಗಳು.. :) ಬರ್ತಾ ಇರಿ.
@ಜೋಮನ್,
ಮೊಬೈಲ್ಗಳು ಕೆಲವೊಂದು ವೃತ್ತಿಗಳಿಗೆ ತುಂಬಾನೇ ಸಹಾಯ ಮಾಡ್ತಿವೆ. ಅದ್ರಲ್ಲಿ ನಿಮ್ದೂ ಒಂದು. ಸ್ವಿಚ್ ಆಫ್ ಮಾಡ್ಬೇಡಿ, ಚೆನ್ನಾಗಿ ಬಳಸ್ಕೊಳ್ಳಿ... ;)
@ಶಾಂತಲಾ,
ತುಂಬಾ ಧನ್ಯವಾದಗಳು ರೀ. ಕೆಲವೊಂದು ಕಾರಣಗಳಿಂದ ಮೊಬೈಲ್ ಮತ್ತೆ ಬಳಸುವುದಕ್ಕೆ ಶುರು ಮಾಡಿದಿನಿ. ಆದ್ರೆ ೩ ತಿಂಗಳು ಬಿಟ್ಟಿದ್ದು ತುಂಬಾನೇ ಉಪಯೋಗಕ್ಕೆ ಬಂದಿದೆ. ಒಳಬರುವ ಮತ್ತು ಹೊರಹೋಗುವ ಕರೆಗಳ ಸಂಖ್ಯೆ ತುಂಬಾ ಕಡಿಮೆ ಆಗಿದೆ. ಆದ್ರೆ ನೀವು ಮಾಡ್ತಿರೊ ಕೆಲ್ಸ ನಿಜಕ್ಕೂ ಗ್ರೇಟ್..! ಅನುಸರಿಸಲಿಕ್ಕೆ ಪ್ರಯತ್ನ ಪಡ್ತೀನಿ.. :)
Post a Comment