ಅಂದು,
ಮಲಗುವಾಗಾಗಲೇ ಹೊತ್ತು
ಹನ್ನೆರಡರ ಮೇಲೆ ಒಂದಾಗಿತ್ತು.
ಅಲ್ಲಿ, ನನಗೆಂದು ಬಂದಿದ್ದ ಸಿಹಿ ಕನಸುಗಳು
ಆಗಲೇ ಯಾರಕಣ್ಣಲ್ಲಿ ಬಿದ್ದು ಮಲಗಿದ್ದವೇನೋ.
ಎಳೆದು ಅಪ್ಪಿಕೊಂಡರೂ ಕೊಸರಾಡಿ
ಹತ್ತಿರ ಬರಲೊಲ್ಲೆ ಎನ್ನುವ ನಿದ್ದೆ.
ಮುಂದೇನೆನ್ನುವಂತೆ ಖಾಲಿ ಗೋಡೆಯ
ನೋಡುತ್ತಿದ್ದಾಗಲೇ ಬಂದಿದ್ದೆನಿಸುತ್ತೆ ನೋಡಿ,
ನಿದ್ದೆಯ ಜೊತೆಜೊತೆಗೆ, ಆ ಕನಸು.
ಅದು ಬರೀ ಕನಸೆಂದರೆ ಆಯಿತೆ?
ಅಂತಿಂತದ್ದಲ್ಲದು, ಅತೀ ಘೋರ, ಭಯಾನಕ.
ಬೆಟ್ಟದಮೇಲಿಂದ ನನ್ನನ್ಯಾರೊ ನೂಕಿ ನಕ್ಕಾಗ
ತೇಲಾಡುತ ಭಯದಲಿ ಮುದುಡಿ
ನೆಲಮುಟ್ಟುವ ಕ್ಷಣವ ಕಾದಂತೆ?
ನದಿಯಲ್ಲಿ ಮುಳುಗಿದಾಗ ಮೇಲ್ಬರಲಾಗದೆ
ಉಸಿರುಕಟ್ಟಿ, ಕೈಕಾಲು ಬಡಿದು ಒದ್ದಾಡಿದಂತೆ?
ಕರಿ ಕತ್ತಲ ನಿರ್ಜನ ದಾರಿಯಲ್ಲಿ
ವಿಕಾರ ಮುಖದ ಭೂತವೊಂದು ಅಟ್ಟಿ ಬಂದಂತೆ?
ಅಲ್ಲ ಅಲ್ಲ, ಅಲ್ಲವೇ ಅಲ್ಲ.
ಅದಿವೆಲ್ಲಕ್ಕಿಂತಲೂ ಭೀಕರ, ಭಯಂಕರ.
ಈಗಲೂ ಮೈನಡುಕ ಹುಟ್ಟಿಸುವಂತದ್ದು.
ಆ ಕನಸಲ್ಲಿ,
ಹುಣ್ಣಿಮೆಯ ರಾತ್ರಿ, ತಂಗಾಳಿ ಬೀಸುವಾಗ,
ಹೊಟ್ಟೆತುಂಬ ಊಟವಾದಮೇಲೆ,
ಪಕ್ಕದಲ್ಲಿ ಹರಿಯುವ ನೀರಿನ ಸದ್ದು ಕೇಳದೆ,
ತುಂಬು ಚಂದಿರನ ನೋಡದೆ,
ನಸು ನಗದೆ,
ಹೊದ್ದು ಮಲಗಿದ್ದೆ ನಾನು!
ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ,
ಆ ಸಿಹಿ ನಿದ್ದೆಯಲ್ಲಿ ಕೂಡ,
ಹಣ, ಪ್ರತಿಷ್ಠೆ, ಗುರಿ, ಸಾಧನೆಗಳ
ಕನಸು?!
~*~