Thursday, January 7, 2010

ಒಂದಿಷ್ಟು ಇವು...

~*~
ಬಹಳಷ್ಟಿವೆ ಕನಸುಗಳು ನನ್ನ ಬಳಿ,
ಅದಕೆ ತಕ್ಕ ಪರಿಶ್ರಮವಿಲ್ಲವಷ್ಟೆ,
ಮೇಲ್ತೂರಿದರೂ ಹಾರಾಡದ
ದಾರ ಹರಿದ ಪಟಗಳಂತೆ.

~*~
ಜಾತ್ರೆಗೆ ಬಂದ ಪೋರ
ಕಂಡ ನೂರಚ್ಚರಿಗಳಲ್ಲಿ,
ಏನಮಾಡುವುದು ಬಿಡುವುದು ತಿಳಿಯದೆ,
ಏನನ್ನೂ ಮಾಡದೆ,
ನಿಂತಲ್ಲೇ ನಿಂತ, ಬೂದಿಯಾದ.

~*~
ಕೂಗಳತೆಯ ದೂರದಲ್ಲಿದ್ದಾಗ ಕಡಲು,
ಯೋಚಿಸಿತು ಒಮ್ಮೆ ನದಿಯು,
ಆ ಪಕ್ಕದ ನದಿಯಂತೆ
ಇರಬಹುದಾಗಿತ್ತಲ್ಲಾ ನಾನು?
ಹೌದು ಹೌದು ಎಂದು ನಕ್ಕಿತು ಉಪ್ಪು ನೀರು.

~*~
ಜಗತ್ತೇ ವಕ್ರ, ಗೋಜಲು, ಅಸಂಬದ್ಧ,
ಎಂದೆಲ್ಲಾ ಒದರುತಿದ್ದ ನಾನು,
ಸುಮ್ಮನಾದೆ ಒಂದು ದಿನ, ಯಾರಿಗೂ ಹೇಳದೆ.
ಅಂದಹಾಗೆ ನಿಮಗೆ ಹೇಳುವುದೇ ಮರೆತೆ,
ಈಗ ನನ್ನ ಬಳಿಯೂ ಚಾಳೀಸು ಅಂತ ಒಂದಿದೆ.

~*~