Sunday, August 19, 2012

ಗೋಡೆ...

~*
 ಪ್ರತಿ ದಿನ ಕೆಲಸಕ್ಕೆಂದು ಸೈಕಲ್ಲು ತುಳಿಯುವಾಗ
ಮಾಮೂಲಿಯಾಗಿ ಕಣ್ಣಿಗೆ ಬೀಳುತಿದ್ದ
ರಸ್ತೆಯ ಪಕ್ಕದ ಅತಿ ಸಾಮಾನ್ಯ ಗೋಡೆಯದು.

ಯಾರದೋ ಜಾಗವನ್ನು ಕಾಯಲು ಹುಟ್ಟಿ
ವರ್ಷಗಳ ಮಳೆಗಾಳಿಗೆ ಉಳಿದವರೆಲ್ಲಾ ಉರುಳಿದರೂ
ದಿಟ್ಟವಾಗಿ ನಿಂತ ಶಿಥಿಲ ಅನಾಥ ಗೋಡೆಯದು.

ನನ್ನ ಸೈಕಲ್ಲು ಬರುವವರೆಗೂ ತಾಳ್ಮೆಯಿಂದ ಕಾದು
ಅದು ಮುಂದೆ ಹೋದಂತೆಲ್ಲಾ ತಾನು ಹಿಂದೆ ಹಿಂದೆ ಸಾಗಿ
ತನ್ನ ಮುಡಿಗೇರಿಸಿಕೊಂಡ ಹಕ್ಕಿಗಳ ಬಾಯಿಂದ ಹಾಡಿ ನಲಿಯುತ್ತಿದ್ದ ಗೋಡೆಯದು.

ಗಾಲಿಗಳು ರಸ್ತೆಯಲ್ಲಿನ ಹಂಪನ್ನು ಹತ್ತಿಳಿಯುವಾಗ
ತಾನೂ ತುಸು ಬಗ್ಗಿ ಮತ್ತೆ ಮೇಲೆ ಎದ್ದು ಬಂದಂತೆ ಮಾಡಿ
ಎಂದೋ ಹಚ್ಚಿದ ಸಿನೆಮಾ ಪೋಸ್ಟರ್ ಕಣ್ಣಿಂದ ನಗುತ್ತಿದ್ದ ತುಂಟ ಗೋಡೆಯದು.

ದಿನ ಕಳೆದಂತೆ ಅದರ ಬಿರುಕುಗಳಿಂದ ಹುಟ್ಟಿದ ಬಳ್ಳಿಗಳಿಂದಾವರಿಸಿ
ಹಚ್ಚ ಹಸಿರಿನ ನಡುವೆ ಸಣ್ಣ ಕೆಂಪು ಹೂಗಳನ್ನು ತೊಟ್ಟು
ಎಂತಹ ಸುಂದರಿಯೂ ನಾಚುವಂತೆ ಕಂಗೊಳಿಸುತಿದ್ದ ಗೋಡೆಯದು.

ಅಂದು ಅದರೆದುರು ನಿಂತಿದ್ದ ಜಾಗದ ಮಾಲಿಕ
ಹಾಗೂ ದೈತ್ಯ ಬುಲ್ಡೋಜರನ್ನು ಲೆಕ್ಕಿಸದೆ ದೂರದಲ್ಲಿ ಬರುತ್ತಿದ್ದ ನನ್ನತ್ತ
ಕೈ ಬೀಸಿ ಕಣ್ಣು ಮಿಟುಕಿಸಿದ್ದ ಮುಗ್ಧ ಗೋಡೆಯದು.

ಇಂದು, ಅದಿಲ್ಲದ ರಸ್ತೆಯ ನೋಡಲಾಗದೆ
ನನ್ನ ಹಾದಿಯನ್ನೇ ಬದಲಿಸುವಂತೆ ಮಾಡಿದ
ಗೋಡೆಯದು.
~*~

Wednesday, February 15, 2012

ಆ ದಿನ..


ಅದೊಂದು ದಿನ ಬಂದಿತ್ತು.
ಏನಿಲ್ಲ ಬಿಡು ಅಂತ ಅಂದುಕೊಂಡಿದ್ದನ್ನೆಲ್ಲಾ ಗಾಳಿಗೆ ತೂರಿತ್ತು.

ಆ ರಾತ್ರಿ ಊಟವು ಸೇರದಾಗಿತ್ತು.
ಪಾರ್ಕಿನಲ್ಲಿ ಒಬ್ಬನೇ ಕುಳಿತವನಿಗೆ ಈ ಲೋಕದ ಅರಿವೇ ಇಲ್ಲದಾಗಿತ್ತು.
ಅವಳ ಬಗ್ಗೆ ಎಂದೂ ಕನಸು ಕಟ್ಟದ ನನ್ನ ಮನಸ್ಸಿನಲ್ಲೂ,
ಆ ಸುದ್ದಿಯ ಕೇಳಿ ಭೂಮಿ ಬಿರಿದಂತಾಗಿತ್ತು.
ಎದೆ ಬಡಿತ ಜೋರಾಗಿ, ಕೈ ಕಾಲು ನಡುಗಿ, ತಲೆ ಸುತ್ತಿದಂತಾಗಿತ್ತು.
ಜಗತ್ತಿನಲ್ಲಿರುವುದನೆಲ್ಲವನ್ನೂ ಕಳೆದುಕೊಂಡಂತೆ ದುಃಖ ಮಡುಗಟ್ಟಿತ್ತು.
ಹೇಳಲಾಗದ ಸಂಕಟವೊಂದು ಪದೇ ಪದೇ ಉಕ್ಕಿ ಮೈಯ ಹಿಂಡಿತ್ತು.
ಬಹು ಗಟ್ಟಿಗ ನಾನು ಎಂಬ ನನ್ನ ಊಹೆಗಳನ್ನು ಸುಳ್ಳಾಗಿಸುವಂತೆ ಕಣ್ಣಲ್ಲಿ ಧಳ ಧಳ ನೀರಿಳಿದಿತ್ತು.
ಇನ್ನು ಮುಂದೆ ಎಲ್ಲವೂ ಹೀಗೇನಾ ಎಂಬ ಪ್ರಶ್ನೆ ಹುಟ್ಟಿ,
ಅದೇನೋ ಅವ್ಯಕ್ತ ಭಯ ಮನಸ್ಸನ್ನೆಲ್ಲಾ ಆವರಿಸಿತ್ತು.
ಕೊನೆಗೆ ಅತ್ತು ಅತ್ತು ಕಣ್ಣು ಕೆಂಪಾಗಿ ತಲೆಯಲ್ಲದೇನೋ ಶೂನ್ಯತೆ ಆವರಿಸಿತ್ತು.
ಆ ದಿನ ನನ್ನ ರೂಮು, ಸ್ನೇಹಿತರು, ಈ ಪ್ರಪಂಚ ಯಾವುದೂ ಬೇಡವಾಗಿತ್ತು,
ನನಗೆ ಆ ರಾತ್ರಿ ಮುಗಿಯುವುದೇ ಬೇಡವಾಗಿತ್ತು.

ಹೌದು.
ಅದೊಂದು ದಿನ ಬಂದಿತ್ತು.
ನನ್ನ ಮತ್ತು ಅವಳ ಮಧ್ಯ ಏನಿಲ್ಲ ಬಿಡು ಅಂತ ಅಂದುಕೊಂಡಿದ್ದನ್ನೆಲ್ಲಾ ಗಾಳಿಗೆ ತೂರಿತ್ತು.