Sunday, August 19, 2012

ಗೋಡೆ...

~*
 ಪ್ರತಿ ದಿನ ಕೆಲಸಕ್ಕೆಂದು ಸೈಕಲ್ಲು ತುಳಿಯುವಾಗ
ಮಾಮೂಲಿಯಾಗಿ ಕಣ್ಣಿಗೆ ಬೀಳುತಿದ್ದ
ರಸ್ತೆಯ ಪಕ್ಕದ ಅತಿ ಸಾಮಾನ್ಯ ಗೋಡೆಯದು.

ಯಾರದೋ ಜಾಗವನ್ನು ಕಾಯಲು ಹುಟ್ಟಿ
ವರ್ಷಗಳ ಮಳೆಗಾಳಿಗೆ ಉಳಿದವರೆಲ್ಲಾ ಉರುಳಿದರೂ
ದಿಟ್ಟವಾಗಿ ನಿಂತ ಶಿಥಿಲ ಅನಾಥ ಗೋಡೆಯದು.

ನನ್ನ ಸೈಕಲ್ಲು ಬರುವವರೆಗೂ ತಾಳ್ಮೆಯಿಂದ ಕಾದು
ಅದು ಮುಂದೆ ಹೋದಂತೆಲ್ಲಾ ತಾನು ಹಿಂದೆ ಹಿಂದೆ ಸಾಗಿ
ತನ್ನ ಮುಡಿಗೇರಿಸಿಕೊಂಡ ಹಕ್ಕಿಗಳ ಬಾಯಿಂದ ಹಾಡಿ ನಲಿಯುತ್ತಿದ್ದ ಗೋಡೆಯದು.

ಗಾಲಿಗಳು ರಸ್ತೆಯಲ್ಲಿನ ಹಂಪನ್ನು ಹತ್ತಿಳಿಯುವಾಗ
ತಾನೂ ತುಸು ಬಗ್ಗಿ ಮತ್ತೆ ಮೇಲೆ ಎದ್ದು ಬಂದಂತೆ ಮಾಡಿ
ಎಂದೋ ಹಚ್ಚಿದ ಸಿನೆಮಾ ಪೋಸ್ಟರ್ ಕಣ್ಣಿಂದ ನಗುತ್ತಿದ್ದ ತುಂಟ ಗೋಡೆಯದು.

ದಿನ ಕಳೆದಂತೆ ಅದರ ಬಿರುಕುಗಳಿಂದ ಹುಟ್ಟಿದ ಬಳ್ಳಿಗಳಿಂದಾವರಿಸಿ
ಹಚ್ಚ ಹಸಿರಿನ ನಡುವೆ ಸಣ್ಣ ಕೆಂಪು ಹೂಗಳನ್ನು ತೊಟ್ಟು
ಎಂತಹ ಸುಂದರಿಯೂ ನಾಚುವಂತೆ ಕಂಗೊಳಿಸುತಿದ್ದ ಗೋಡೆಯದು.

ಅಂದು ಅದರೆದುರು ನಿಂತಿದ್ದ ಜಾಗದ ಮಾಲಿಕ
ಹಾಗೂ ದೈತ್ಯ ಬುಲ್ಡೋಜರನ್ನು ಲೆಕ್ಕಿಸದೆ ದೂರದಲ್ಲಿ ಬರುತ್ತಿದ್ದ ನನ್ನತ್ತ
ಕೈ ಬೀಸಿ ಕಣ್ಣು ಮಿಟುಕಿಸಿದ್ದ ಮುಗ್ಧ ಗೋಡೆಯದು.

ಇಂದು, ಅದಿಲ್ಲದ ರಸ್ತೆಯ ನೋಡಲಾಗದೆ
ನನ್ನ ಹಾದಿಯನ್ನೇ ಬದಲಿಸುವಂತೆ ಮಾಡಿದ
ಗೋಡೆಯದು.
~*~