Friday, June 5, 2015

ಬೆಂಕಿ

ಆ ಕಾಳ್ಗಿಚ್ಚಿಗೆ ಕಾರಣವಾದ ಬೆಂಕಿ ಹುಟ್ಟಿದ್ದು ಕಡ್ಡಿಯನ್ನು ಗೀರಿದಾಗಲ್ಲ!
ಅದಕ್ಕೂ ಮುಂಚೆ, ಬಹಳ ಮುಂಚೆ.
ಅವನ ಬೀಡಿ ಸೇದುವ ಚಟ ಶುರುವಾದಾಗ,
ಜೀವನಕ್ಕೆ ದಾರಿಯಾಗಲೆಂದು ಇನ್ನೊಬ್ಬ ಗೂಡಂಗಡಿ ತೆರೆದಾಗ,
ಟಾರ್ಗೆಟ್ ಮುಟ್ಟಿಲ್ಲ ಅಂತ ಸೇಲ್ಸ್ ಮ್ಯಾನ್ ಮೇಲೆ ಒತ್ತಡ ಶುರುವಾದಾಗ,
ಮೊದಲಿನಷ್ಟು ಲಾಭವಾಗುತ್ತಿಲ್ಲ ಅಂತ ಕಂಪೆನಿ ಓನರ್ ಗೊಣಗಿದಾಗ,
ದಿನ ದಿನದ ಈ ಬವಣೆಗೆ ಬೇಸತ್ತು ಪೊಟ್ಟಣಕ್ಕೆ ಕಡ್ಡಿ ತುಂಬುವವಳು ನಿಟ್ಟುಸಿರು ಬಿಟ್ಟಾಗ,
ಕಡ್ಡಿಯ ಮಾಡಲು ಧೂಪದ ಮರಕ್ಕೆ ಕೊಡಲಿಯ ಬೀಸಿದಾಗ,
ಅಥವಾ ಅದಕ್ಕೂ ಮುಂಚೆ, ಬಹಳ ಮುಂಚೆ.
ನೀವಂದುಕೊಂಡಂತೆ, ಆ ಕಾಳ್ಗಿಚ್ಚಿಗೆ ಕಾರಣವಾದ ಬೆಂಕಿ ಹುಟ್ಟಿದ್ದು ಕಡ್ಡಿಯನ್ನು ಗೀರಿದಾಗಲ್ಲ,
ಬೆಂಕಿ ಕಡ್ಡಿಯೆಂಬುದು ಕೇವಲ ನೆಪ ಮಾತ್ರ!!

Monday, January 26, 2015

ಜೀವನ ಚಕ್ರ...

....ಮರದ ಬುಡಕೆ ಬಂದ ಹುಡುಗನೊಬ್ಬ ಹಸಿಯಾಗಿದ್ದ ಮಣ್ಣನು ಬಗೆದು ತೆಗೆದ ಮರಿ ಎರೆಹುಳುವನ್ನು ಕೊಕ್ಕೆಗೆ ಸಿಕ್ಕಿಸಿದ ಗಾಳವನ್ನೆಸೆದು ಹಿಡಿದ ಮೀನನ್ನು ಕೊಂಡು, ಕರಿಯಲು ಬೇಕಾದ ಎಣ್ಣೆಯ ತರಲು ಅಂಗಡಿಯೆಡೆಗೆ ಹೊರಟವನ ಕೈಯಲ್ಲಿದ್ದ ಖಾಲಿ ಡಬ್ಬದ ವಿಚಿತ್ರ ಶಬ್ದಕೆ ಬೆದರಿ ಓಡಿದ ನಾಯಿಯ ನೋಡಿ ನಕ್ಕ ಪುಟ್ಟ ಹುಡುಗಿಯ ಅಮ್ಮನ ಬಲಗಾಲಿನ ಕಿತ್ತಿದ್ದ ಚಪ್ಪಲಿಗೆ ಹೊಲಿಗೆ ಹಾಕಿದ್ದವನ ಮಗನ ಜೊತೆ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದವನೊಬ್ಬ ಹೊಡೆದ ಸಿಕ್ಸರ್ ನಿಂದಾಗಿ ಪುಡಿಯಾದ ಗಾಜಿನ ಕಿಟಕಿಯ ಮನೆಯ ಮಾಲೀಕನ ಮಗನ ಮದುವೆಯ ಅಡುಗೆ ಗುತ್ತಿಗೆದಾರನ ಅಜ್ಜಿಯ ಅಂತ್ಯಕ್ರಿಯೆಗೆ ಸ್ಮಶಾನಕ್ಕೆ ಬಂದವರು ಕಾಲು ತೊಳೆದುಕೊಂಡ ನೀರೆಲ್ಲಾ ಹರಿದು ಒದ್ದೆಯಾಗಿದ್ದ ಮರದ ಬುಡಕೆ ಬಂದ ಹುಡುಗನೊಬ್ಬ ಹಸಿಯಾಗಿದ್ದ ಮಣ್ಣನು ಬಗೆದು ತೆಗೆದ ಮರಿ ಎರೆಹುಳುವನ್ನು......