Sunday, May 29, 2016

ಚೆನ್ನಾಗಿದೀನಿ...

Hypocrisy is part of our life, we breathe it.

ಈ ಕಡೆಯಿಂದ:
* ‌‌ಅವತ್ತು ಸಾಯಂಕಾಲ 4th ಬ್ಲಾಕ್ ಹತ್ರ ನಡೆದುಕೊಂಡು ಹೋಗ್ತಿದ್ದೆ. ಎದರುಗಡೆ ನೋಡಿದ್ರೆ ಟಿಲ್ಡು! ಅದೇ ನಮ್ಮ ಟಿಲ್ಡು! "ಹೇ, ಮಗಾ ಏನೋ ಇಲ್ಲಿ!?" ಅವನಿಗೂ ಫುಲ್ಲ್ ಸರ್ಪ್ರೈಸ್. 'ಹೇ, ಸ್ಟಾರು..' ಅಂತ ತಬ್ಬಿಕೊಂಡ. "ಮತ್ತೆ ಹೇಗಿದಿಯಾ?" ಅಂತ ಕೇಳಿದೆ ನಾನು. ಬಹಳ‌ದಿನ ಆದ್ಮೇಲೆ ಸಿಕ್ಕಿದ್ದಕ್ಕೆ ಏನೋ ಒಂದ್  ಅರ್ಧ ನಿಮಿಷ ತಬ್ಬಿಕೊಂಡಿದ್ದು ಬಿಡ್ಲೇ ಇಲ್ಲ, ಏನೂ ಮಾತಾಡ್ಲೆ ಇಲ್ಲ. ಕೊನೆಗೆ ಬಿಟ್ಟು ಹೇಳಿದ ' ನಾನು ಚೆನ್ನಾಗಿದೀನಿ ಕಣೊ, ನೀನು?'. ಹಿಂಗೆ ಅದು ಇದು ಹರಟೆ ಹೊಡೆದು ಮನೆ ಮುಟ್ಟುವಷ್ಟರಲ್ಲಿ ರಾತ್ರಿಯಾಗಿತ್ತು.

ಆ ಕಡೆಯಿಂದ:
~  ಅವತ್ತು ಸಾಯಂಕಾಲ 4th ಬ್ಲಾಕ್ ಹತ್ರ ನಡೆದುಕೊಂಡು ಬರ್ತಿದ್ದೆ. 'ಹೇ, ಮಗಾ ಏನೋ ಇಲ್ಲಿ?' ಅಂತ ಯಾರೋ ಕೂಗಿದ ಹಾಗಾಯ್ತು. ನೋಡಿದ್ರೆ ಸ್ಟಾರು! ಬಹಳದಿನದ ಮೇಲೆ‌ ಅವನನ್ನ ನೋಡಿ ಖುಷಿ ಆಯ್ತು. "ಹೇ, ಸ್ಟಾರು.." ಅಂತ ತಬ್ಬಿಕೊಂಡೆ. 'ಮತ್ತೆ ಹೇಗಿದಿಯಾ?' ಅಂತ ಕೇಳಿದ. ಸಡನ್ನಾಗಿ ಯಾರೊ ಹೊಡೆದ ಹಾಗೆ ಆಯ್ತು. ಅರೆ, ನಾನು ಈ ಪ್ರಶ್ನೆನ ಯಾವತ್ತು ಕೇಳ್ಕೊಂಡೆ ಇಲ್ವಲ್ಲ. ಉತ್ತರ ಹ್ಯಾಗೆ ಕೊಡ್ಲಿ? ok, let's think actually ನಾನು ಹೇಗಿದಿನಿ ಅಂತ. ಕೆಲಸ ಇದೆ. ಸಂಬಳ ಬರ್ತಿದೆ. ಇರೊದಿಕ್ಕೆ ಒಳ್ಳೆ ಮನೆ ಇದೆ. ಆದ್ರೆ ಹೆಂಡ್ತಿ ಯಾಕೋ ಸಣ್ಣ ಸಣ್ಣ ವಿಷಯಕ್ಕೂ ಜಗಳ ಆಡ್ತಾಳೆ. ಈ ಕಾಟ ತಡಿಲಾರ್ದೆ ಆಫೀಸಲ್ಲಿ extra ಕೆಲಸ ಮಾಡಿ ಮಾಡಿ ಬೇಜಾರಾಗ್ಬಿಟ್ಟಿದೆ. ಅದರ ಮೇಲೆ ಈ ಬಾಸ್ ಬೇರೆ ಟಾರ್ಚರ್ ಕೊಡ್ತಾನೆ. ಈ ಹಾಳಾದ್ ಟ್ರಾಫಿಕಲ್ಲಿ ಬೈಕ್ ಓಡ್ಸಿ ಬೆನ್ನು ನೋವು ವಿಪರೀತ ಆಗಿದೆ. ಕಾರು ತೆಗೋಬೇಕು. ಅದಕ್ಕೂ ಮುಂಚೆ ಈ ಮನೆ ಸಾಲ ತೀರಿಸಬೇಕು. ಊರಲ್ಲಿರೊ ಜಮೀನು ಮಾರೋಣ ಅಂದ್ರೆ ಅಣ್ಣಂದು ಏನೋ ತಗಾದೆ.  ಈ ಸರ್ತಿ recession ಅಂತ increment ಇಲ್ಲ, ಬೋನಸ್ಸೂ ಇಲ್ಲ. ಪಕ್ಕದ ಮನೆಯವ್ನು ಆಗ್ಲೆ ಕಾರು ತೆಗೊಂಡಿದಾನೆ. ಆ ಲೋಫರ್ ದಿನಾ ನನ್ನ ಮನೆ ಮುಂದೆನೇ ಕಸ ಹಾಕಿ ಹೋಗ್ತಾನೆ. ಈ ಮನೆ ಕೆಲಸದವಳೋ.... ಅರೇ  topic ಎಲ್ಲೆಲ್ಲಿಗೋ ಹೋಗ್ತಾ ಇದೆಯಲ್ಲಾ.  finally ಏನೀಗ ನಾನು ಚೆನ್ನಾಗಿದೀನಾ ಇಲ್ವ? ಯಾವನಿಗೆ ಗೊತ್ತು? ಅಯ್ಯೊ ಎಷ್ಟು ಹೊತ್ತಾಯ್ತು ಹಂಗೆ ತಬ್ಬಿಕೊಂಡೆ ಇದೀನಿ. ಬಿಟ್ಟು ಹೇಳಿದೆ "ನಾನು ಚೆನ್ನಾಗಿದೀನಿ ಕಣೊ, ನೀನು?". ಹಿಂಗೆ ಅದು ಇದು ಹರಟೆ ಹೊಡೆದು ಮನೆ ಮುಟ್ಟುವಷ್ಟರಲ್ಲಿ ರಾತ್ರಿಯಾಗಿತ್ತು.