Saturday, January 12, 2019

ಅಪೂರ್ವ ಗೆಳೆತನ

ಊಹೂಂ..
ಎಷ್ಟು ಕೂಗಿದ್ರೂ ತಿರುಗಿ‌ನೋಡಲಿಲ್ಲ ಅವನು.
ನನ್ನ ದಾಟಿಕೊಂಡು ಹೋಗುವಾಗ ಗಮನಿಸಿದನಾ ಇಲ್ವಾ ಗೊತ್ತಾಗಲಿಲ್ಲ. ಆಗಲೇ ಅಷ್ಟು ದೂರ ಬೇರೆ ಹೋಗಿಬಿಟ್ಟಿದ್ದ. ಒಂದು ಕ್ಷಣ ಏನು ಮಾಡ್ಬೇಕು ಅಂತಾನೇ ತೋಚಲಿಲ್ಲ ನನಗೆ. ಭಯ ಶುರು ಆಯ್ತು. ಆದರೂ ತಕ್ಷಣ ಸಾವರಿಸಿಕೊಂಡೆ. ಏನು ಮಾಡೋದು ಅಂತ ಯೋಚನೆ ಮಾಡಿ, ಅಲ್ಲಿಯೇ ಪಕ್ಕದಲ್ಲಿದ್ದ ಒಂದು‌ ಬೀದಿ ನಾಯಿಯ ಚಂದದ ಫೋಟೋ ತೆಗೆದೆ. ಬೇಗ ಬೇಗ ಕೆಳಗೊಂದು  ನಾಲ್ಕು ಲೈನು ಕವಿತೆ ಗೀಚಿ ಫೇಸ್‌ಬುಕ್‌ಗೆ ಹಾಕಿದೆ. ಹತ್ತು ಸೆಂಕಡಿನಲ್ಲೆ ಅವನದೊಂದು ಲೈಕು, ಕಮೆಂಟು ಬಂತು. ಸ್ವಲ್ಪ ತಿರುಗಿ ನೋಡು ಅಂತ ರಿಪ್ಲೈ ಬರೆದು ಕೈ ಮಾಡಿದೆ, ಬಂದ. ಓ, ಹಾಯ್, ನೀನಲ್ವಾ? ಸಾರಿ ಗೊತ್ತಾಗಲಿಲ್ಲ ಅಂದ. ಒಂದೆರಡು ಮಾತುಗಳು ಆದಮೇಲೆ ಏನು ಮಾತಾಡಬೇಕು ಅಂತ ಗೊತ್ತಾಗಲಿಲ್ಲ. ನಮ್ಮಿಬ್ಬರದ್ದು ಒಂದು‌ ಸೆಲ್ಫಿ ತೆಗೊಂಡ, ಸರಿ ಮತ್ತೆ ಸಿಗ್ತೀನಿ ಅಂತ ಹೊರಟುಹೋದ. ಆಮೇಲೆ, ನೈಸ್ ಮೀಟಿಂಗ್ ಯು ಅಂತ ಕಮೆಂಟ್ ಕೂಡ ಹಾಕಿದ.

ಮರು ದಿವಸ ಫೇಸ್‌ಬುಕ್‌ನವರು ಒಂದು ಚಂದದ ವಿಡಿಯೋ ಮಾಡಿ ಕಳುಹಿಸಿದ್ದರು, ನಂದು ಅವಂದು ಫ್ರೆಂಡ್‌ಶಿಪ್ ಆಗಿ 6 ವರ್ಷ ಆಗಿದೆ, ಇಷ್ಟು ವರ್ಷದಲ್ಲಿ ಇಷ್ಟು ಫೋಟೋ ಹಾಕಿದ್ದೀರಿ, ಇಷ್ಟು ಲೈಕುಗಳು ಒತ್ತಿಕೊಂಡಿದೀರಿ, ಕಮೆಂಟ್‌ಗಳಲ್ಲೆ ಸಿಕ್ಕಾಪಟ್ಟೆ ಚಾಟ್ ಮಾಡಿದ್ದೀರಿ ಅಂತ.
ಅದಕ್ಕೆ ಅವನಾಗಲೇ ಒಂದು ಲೈಕು ಒತ್ತಿದ್ದ, ನಾನೂ ಒಂದು ಒತ್ತಿದೆ.

#ಅಪೂರ್ವಗೆಳೆತನ #ವಿಪರ್ಯಾಸ

No comments: