ಇದು ಬಹುಶಃ ನಿಮ್ಮ ಅನುಭವಕ್ಕೆ ಬಂದಿರಲಿಕ್ಕಿಲ್ಲ.
ಯಾಕೆಂದರೆ ಅನುಭವಿಸುವಂತದ್ದು ಅಲ್ಲವಿದು, ಊಹಿಸಬಹುದಷ್ಟೇ.
ಓಡುತ್ತಿರುವ ಸೈಕಲ್ಲಿನ ಮೇಲೆ ಕುಳಿತಿರಬಹುದು ನೀವು.
ಆದರೆ ತಿರಗುತ್ತಿರುವ ಅದರ ಗಾಲಿಯ ಮೇಲೆ? ಇಲ್ಲ ತಾನೇ?
ನೀವು ಕೂಡಬಹುದಾದಷ್ಟು ದೊಡ್ಡದಾದ, ಅದು ತಿರುಗಿದರೂ ನೀವು ಜಾರಿ ಬೀಳದಂತಹ ಗಾಲಿಯನ್ನೇ ಕಲ್ಪಿಸಿಕೊಳ್ಳಿ. ಅಷ್ಟಕ್ಕೂ ಕಲ್ಪನೆಗೇನು ಬರ?
ಗಾಲಿಯ ಮೇಲ್ತುದಿಯಲ್ಲಿದ್ದಾಗ ಕಾಣುವುದು ಆ ಸುಂದರ ಪರಿಸರ, ಚಂದನೆಯ ಹಾದಿ, ಅದೋ ದೂರದಲ್ಲಿ ಆ ನಿಮ್ಮ ನೆಚ್ಚಿನ ಜಾಗ.
ನೋಡ ನೋಡುತ್ತಿದ್ದಂತೆ ಇವೆಲ್ಲವನು ಮಾಯವಾಗಿಸಿ ರೋಡಿನ ಕಡೆ ಉರಳಿಸುವ ಗಾಲಿ, ನಿಮ್ಮನ್ನ ಎತ್ತಿ ನೆಲದ ಮೇಲೆ ಒಗೆಯುವುದು.
ಕಣ್ಣು ಕಪ್ಪಾಗಿಸಿ ಇಡೀ ಸೈಕಲ್ಲಿನ ಭಾರವನ್ನೆಲ್ಲ ಮೈಮೇಲೆ ಹಾಕಿ, ನುಜ್ಜುಗುಜ್ಜಾಗಿಸಿ, ಜೀವನವೇ ಮುಗಿಯಿತೆನ್ನುವಂತೆ ಮಾಡುವುದು.
ಇದಕ್ಕೂ ಮುಂಚೆ ನೋಡಿದ್ದೆಲ್ಲ ಕನಸೇನೋ, ಇನ್ನೇನು ಅಲ್ಲಿಗೆ ತಲುಪಿಬಿಟ್ಟೆ ಅನ್ನುವಷ್ಟರಲ್ಲಿ ಎಲ್ಲವನ್ನೂ ಬುಡಮೇಲು ಮಾಡಿ ಹಾಕುವ ಗಾಲಿಯ ಹಕೀಕತ್ತು ನಿಮಗೆ ತಿಳಿಯುವುದೇ ಇಲ್ಲ.
ಆದರೆ ಅಷ್ಟಕ್ಕೇ ಬಿಡದೆ ಗಾಲಿ ನಿಮ್ಮನ ಮತ್ತೆ ಮೇಲಕ್ಕೆತ್ತುತ್ತದೆ, ಮೈಗಂಟಿದ ಕೆಸರು ಒರೆಸಿಕೊಳ್ಳಲು ಸಮಯವನ್ನೂ ಕೊಡುತ್ತದೆ.
ಸುತ್ತಲೂ ಮಡ್‌ಗಾರ್ಡಿನ ಕತ್ತಲೆಯೆ ತುಂಬಿದ್ದರೂ ಮೆಲ್ಲನೆ ಮೇಲಕ್ಕೇರುತ್ತಿರುವ ಒಂದು ಹಗುರವಾದ ಅನುಭವವನ್ನೂ ಕೊಡುತ್ತದೆ.
ನೋವುಗಳನ್ನೆಲ್ಲಾ ಮರೆಸುವಂತೆ ಒಂದು ಕ್ಷಣದಲ್ಲಿ ಬೆಳಕು ಮೂಡಿ ಮತ್ತೆ ಅದೇ ಸುಂದರ ಪರಿಸರ, ನೆಚ್ಚಿನ ಜಾಗ ಕಣ್ಣಿಗೆ ಬೀಳುತ್ತದೆ, ಇನ್ನಷ್ಟು ಚಂದವಾಗಿ, ಮತ್ತಷ್ಟು ಹತ್ತಿರವಾಗಿ.
ಗಾಲಿಯಂತೂ ಉರುಳುತ್ತಲೇ ಸಾಗುತ್ತದೆ, ಎಲ್ಲಾ ಅನುಭವಗಳ ನೀಡುತ ಆ ಗಮ್ಯದೆಡೆಗೆ.
ಈಗ ಯೋಚಿಸಿ ಹೇಳಿ, ಇದು ಬಹುಶಃ ನಿಮ್ಮ ಅನುಭವಕ್ಕೂ ಬಂದಿರುತ್ತದೆ, ಆದರೆ ಬೇರೆ ರೀತಿಯಲ್ಲಿರಬಹುದಷ್ಟೆ.