Tuesday, September 25, 2007

ಹಸಿರು...

ಕೀ.. ಕೀ.. ಕೀ...

ಎರಡು ವರ್ಷ ಹಳೇ ಸೈಕಲ್, ಒಂದೊಂದು ಸಾರಿ ಪೆಡಲ್ ತುಳಿದಾಗೆಲ್ಲಾ ಮತ್ತೆ ಅದೇ ರಾಗ ಎಳಿತಿತ್ತು. ಗುರ್ತು, ಪರಿಚಯ ಇಲ್ಲದೊರು ಎನಾದ್ರು ನೋಡಿದ್ರೆ, ನಾನು ಅದಕ್ಕೆ ಒದಿತಿದಿನೆನೊ, ಅದಕ್ಕೆ ಅದು ಕಿರಿಚಿಕೊಳ್ತಿದೆ ಏನೋ, ಅಂತ ಅನ್ಕೊಬೇಕು ಅಂತಹ ಶಬ್ದ. ಬಲ್ಲಾಳ್ ಸರ್ಕಲ್ ದಾಟಿ, ಕೋರ್ಟ್ ರೋಡ್ ಹಿಡಿದು ವಿಜಯನಗರದ ಕಡೆ ಹೊರಟಿದ್ದೆ, ಬೆಳ್ಳಂಬೆಳಿಗ್ಗೆ ೧೦ ಘಂಟೆಗೆನೇ, ಸಂಬಂಧಿಕರ ಮನೆಗೆ, ಹಾಗೇ ಮಾತಾಡಿಸಿಕೊಂಡು ಒಂದು ರೌಂಡ್ ತಿಂಡಿನೂ ಮುಗಿಸೋಕೆ. ಅಷ್ಟು ಹೊತ್ತು ಸೈಕಲ್ ತುಳಿದಿದ್ದರಿಂದ ಸುಸ್ತಾಗಿ, ಆರಾಮವಾಗಿ ತುಳಿತಿದ್ದೆ, ಅದೇ ಕೀಕೀ ರಾಗ ಕೇಳ್ತ. ಅಂತಹಾ ಮೋಡ ಕವಿದ ವಾತಾವರಣ, ರೋಡಿನ ಟಾರಲ್ಲಿ ಬಿಟ್ಟು ಉಳಿದೆಲ್ಲಾ ಕಡೆ ಹಬ್ಬಿರುವ ಹಸಿರು, ೧೦ ತರದ ಹಕ್ಕಿಗಳ ದ್ವನಿಯ ಇಂಪು, ಎಲ್ಲಾ ಸೇರಿ ಎಂತವರನ್ನೂ ಪ್ರಕೃತಿಗೆ ತಲೆಬಾಗುವ ಹಾಗೆ ಮಾಡಿತ್ತು. ಇದನ್ನೆಲ್ಲಾ ಮನಃಪೂರ್ತಿ ಸವಿಯುತ್ತಾ ಸಾಗಿತ್ತು, ನನ್ನ ಸೈಕಲ್ ಸವಾರಿ.

ಅಷ್ಟರಲ್ಲಿ ವ್ಯಾಗನ್-ಆರ್ ಅಲ್ಲಿ ಅದೆಲ್ಲಿಂದ ಅದೆಲ್ಲಿಗೆ ಹೋಗ್ತಿದ್ದನೋ ಎನೋ, ೭೦ ರ ವೇಗದಲ್ಲಿ ಬಂದವ ರಸ್ತೆ ತಿರುವಿನ ಹತ್ತಿರ ನನ್ನ ಸೈಕಲ್ ಗೆ ಗುದ್ದಿದ. ಆ ಹೊಡೆತಕ್ಕೆ ಹಾರಿದವನೇ ಸೀದ ಹೋಗಿ ಫುಟ್ಪಾತಿನ ಅಂಚಿಗೆ ಮುಖ ಹೊಡೆದುಕೊಂಡು ಬಿದ್ದೆ. ಇದೆಲ್ಲಾ ನನಗೆ ಗೊತ್ತೇ ಆಗಿರಲಿಲ್ಲ. ಆಸ್ಪತ್ರೆಯ ಬೆಡ್ ಮೇಲೆ ಬಿದ್ಕೊಂಡಾಗ ಡಾಕ್ಟರ್ ಹೇಳಿದ ಮೇಲೆ ಗೊತ್ತಾಗಿದ್ದು. ಅಷ್ಟೇ ಅಲ್ಲದೆ ಅವರು ಉಳಿದದ್ದೆಲ್ಲಾ ಹೇಳಿದ್ರು. ಎಷ್ಟೋ ದಿವಸ ಕೋಮದಲ್ಲಿದ್ದಿದ್ದು, ಮುಖ ಕೊಟ್ಟು ಬಿದ್ದಿದ್ದರಿಂದ ನನ್ನ ಕಣ್ಣುಗಳನ್ನ ತೆಗೆಯಬೇಕಾಗಿ ಬಂದದ್ದು, ನನ್ನ ದೊಡ್ಡ ಪುಣ್ಯದಿಂದಾಗಿ ನೇತ್ರದಾನಿಗಳೊಬ್ಬರು ಅದೇ ಸಮಯದಲ್ಲಿ ತೀರಿಕೊಂಡಿದ್ದು, ಅವರ ಕಣ್ಣುಗಳನ್ನ ನನಗೆ ಜೋಡಿಸಿದ್ದು, ಎಲ್ಲಾ. ಕಣ್ಣಿಗೆ ಸುತ್ತಿದ್ದ ಬಟ್ಟೆಯನ್ನಿನ್ನೂ ಬಿಚ್ಚಿರಲಿಲ್ಲ. ಅಂತಹ ಸುಂದರ ಮುಂಜಾನೆ ಹೋಗಿ ಎನೆಲ್ಲಾ ಅಯಿತಲ್ಲಾ ಅಂತ ಮನಸ್ಸು ತುಂಬಾ ಭಾರವಾಯ್ತು. ಸ್ವಲ್ಪ ದಿನ ಆದಮೇಲೆ ಕಟ್ಟು ಬಿಚ್ಚಿದರು. ಮೊದಲಿನಂತೆಯೇ ಕಾಣುತಿದ್ದರಿಂದ ದೊಡ್ಡ ಅನಾಹುತದಿಂದ ಪಾರಾದ ಸಮಾಧಾನ ಆ ಹೊಸ ಕಣ್ಣುಗಳಲ್ಲಿ ಮಿಂಚುತಿತ್ತು. ಇನ್ನೂ ಸ್ವಲ್ಪ ದಿನ ಅಲ್ಲೇ ಇರಬೇಕಂದಿದ್ದರಿಂದ ಆರಾಮವಾಗಿ ಮಂಚಕ್ಕೊರಗಿದೆ.

ಮಾಡಲಿಕ್ಕೆ ಬೇರೆನೂ ಕೆಲ್ಸ ಇಲ್ದೆ, ಆ ಹೊಸ ಕಣ್ಣುಗಳನ್ನ ಟೆಸ್ಟ್ ಮಾಡುವವರ ಹಾಗೆ ಆ ದೊಡ್ಡ ರೂಮಿನಲ್ಲಿ ಆಕಡೆ ಈಕಡೆ ನೋಡ್ತಾ ಕುತ್ಕೊಂಡೆ. ಆಶ್ಚರ್ಯ ಆಯ್ತು! ಇನ್ನೊಂದು ಸರ್ತಿ ಹಾಗೆ ಅದನ್ನ ನೋಡಿದೆ, ಉಹೂ ಬದಲಾಗಲಿಲ್ಲ. ಆ ರೂಮಿನ ಒಂದು ಮೂಲೆಯಲ್ಲಿ ಸಣ್ಣ ಹೂವಿನ ಗಿಡದ ಕುಂಡ ಇಟ್ಟಿದ್ರು. ಕೆಂಪು ಹಳದಿ ಹೂವು, ಆದರೆ ಅದರ ಎಲೆಗಳೆಲ್ಲಾ ನೀಲಿ ಬಣ್ಣ! ಆಶ್ಚರ್ಯ ಆಯ್ತು. ಜೀವನದಲ್ಲಿ ಮೊದಲಬಾರಿಗೆ ನೀಲಿ ಬಣ್ಣದ ಎಲೆಗಳನ್ನ ನೋಡಿದ್ದು. ಹಾಗೆ ಕಣ್ಣು ಇನ್ನೊಂದು ಮೂಲೆ ಕಡೆ ತಿರುಗಿತು. ನೋಡಿದ್ರೆ ಅಲ್ಲೂ ಅಂತದೇ ಇನ್ನೊಂದು ಗಿಡ. ಸರಿಯಾಗಿ ನೋಡಿದಾಗ ಗೊತ್ತಾಯಿತು, ಅದರ ಹೂಗಳ ಬಣ್ಣ ಬಿಳಿಯಾಗಿದ್ದು, ಅದರ ಪಕಳೆಗಳು ಮೊದಲ ಗಿಡದ ಹಾಗಿರದೆ ಉದ್ದುದ್ದವಾಗಿದ್ವು. ಆದರೆ ಎಲೆಗಳು ಮಾತ್ರ ಅದೇ ನೀಲಿ ಬಣ್ಣ! ಎರಡು ಸರ್ತಿ ಕಣ್ಣುಜ್ಜಿಕೊಂಡು ನೋಡಿದ್ರೂ ಬದಲಾಗ್ತಿಲ್ಲ. ಇಂಜೆಕ್ಷನ್ ಕೊಡ್ಲಿಕ್ಕೆ ಬಂದ ನರ್ಸ್ ಅನ್ನ ಕುತೂಹಲದಿಂದ ಕೇಳಿದೆ, 'ಎಲ್ಲಿಂದ ತಂದ್ರಿ ಈ ನೀಲಿ ಎಲೆಗಳ ಗಿಡಗಳನ್ನ..?'. ಆ ಗಿಡಗಳನ್ನೊಮ್ಮೆ ನೋಡಿ, ನನ್ನನ್ನು ದುರುಗುಟ್ಟಿ ನೋಡಿ ಎನೂ ಮಾತಾಡ್ದೆ ಸ್ವಲ್ಪ ಜೋರಾಗಿಯೇ ಇಂಜೆಕ್ಷನ್ ಚುಚ್ಚಿ ಹೋದ್ಲು. ಮೆಲ್ಲಕ್ಕೆ ನಂಗೆ ಅನುಮಾನ ಬರೊಕ್ಕೆ ಶುರು ಆಯಿತು. ಹಾಗೆ ಎದ್ದವನೇ ಕಿಡಿಕಿ ಹತ್ರ ಹೋದೆ. ಮೂರ್ಛೆ ತಪ್ಪೊದೊಂದು ಬಾಕಿ. ಕೆಳಗಡೆ ಮಾಲಿ, ನೀಲಿ ಎಲೆಗಳ ಗಿಡಕ್ಕೆ ನೀರು ಬಿಡ್ತಿದ್ದ. ರೋಗಿಗಳೆಲ್ಲಾ ಅಲ್ಲೇ ಹುಲ್ಲಿನ ಮೇಲೆ ಕೂತಿದ್ರು. ಹುಲ್ಲೆಲ್ಲಾ ನೀಲಿ ನೀಲಿ. ನೀರಿನ ಪೈಪ್ ಹಿಡಿದು ಮೇಲೆ ಹಬ್ಬುತ್ತಿದ್ದ ಬಳ್ಳಿ ಕೂಡ ನೀಲಿ. ಯಾವದೊ ಬೇರೆ ಪ್ರಪಂಚಕ್ಕೆ ಕಾಲಿಟ್ಟ ಹಾಗಿತ್ತು. ಹಾಗೆ ಗೋಡೆ ಹಿಡಿದು ಕೊಂಡು ಹೇಗೋ ಮಾಡಿ ಟೆರೆಸ್ಸ್ ಮುಟ್ಟಿದೆ. ಹೋದವನೇ ಹಾಗೆ ಕುಸಿದುಬಿದ್ದೆ. ೪ ನಿಮಿಷ ಬೇಕಾಯ್ತು ಸಾವರಿಸಿಕೊಳ್ಳೊಕೆ. ಬಿದ್ದಲ್ಲಿಂದಲೇ ಮುಖ್ ಮೇಲೆ ಮಾಡಿ ಮತ್ತೆ ಆಕಾಶದತ್ತ ನೋಡಿದೆ. ತಿಳಿ ಹಸಿರು ಬಣ್ಣದ ಆಕಾಶ. ಅಲ್ಲಲ್ಲಿ ಚದುರಿದ ಎಲೆ ಹಸುರಿನ ಮೋಡಗಳು! ಮೆಲ್ಲಗೆ ಎದ್ದು ಅಲ್ಲಿಂದ ಸುತ್ತಮುತ್ತೆಲ್ಲಾ ಕಣ್ಣು ಹಾಯಿಸಿದೆ. ರೋಡಿನ ಬದಿಯೆಲ್ಲಾ ನೀಲಿ ಮರಗಳು, ಹಸಿರು ಜೀನ್ಸ್ ತೊಟ್ಟು ಒಡಾಡೊ ಜನಗಳು. ಈ ಲೊಕದಲ್ಲಿ ಇಷ್ಟು ಬಿಟ್ಟರೆ ಬೇರೆಲ್ಲಾ ಮೊದಲ ಲೋಕದ ಹಾಗೆಯೇ ಇತ್ತು. ಒಂದೇ ವ್ಯತ್ಯಾಸ, ಹಸಿರಿರ ಬೇಕಾದದ್ದೆಲ್ಲಾ ನೀಲಿಯಾಗಿದ್ದವು, ನೀಲಿಯಾಗಿರಬೇಕಾಗಿದ್ದವು ಹಸಿರಾಗಿದ್ದವು. ಜನಗಳಿಗೆ ಇದರ ಪರಿವೇ ಇರಲಿಲ್ಲ. ತೀರ ಸಹಜ ಎನ್ನುವಂತೆ ಇದ್ದರು.

ಏನಿದು? ನಾನು ಇಲ್ಲಿಗೇಕೆ ಬಂದೆ ಅಂತ ತಿಳ್ಕೊಳ್ಲಿಕ್ಕೆ ಕೆಳಗಿಳಿದು ಹೋದೆ. ನಾಲ್ಕು ಜನಗಳನ್ನ ವಿಚಾರಿಸಿಯೂ ನೋಡ್ದೆ. ಹುಚ್ಚನನ್ನು ನೋಡುವ ತರ ಕೆಕ್ಕರಿಸಿ ನೋಡಿ ಹೋದರು. ಎಲ್ಲಾ ವಿಚಿತ್ರ. ಏನೂ ಅರ್ಥ ಆಗ್ತಿಲ್ಲ. ಸುಮ್ನೆ ಹೋಗಿ ಆ ನೀಲಿ ಹುಲ್ಲು ಹಾಸಿನ ಮೇಲೆ ಕುಳಿತೆ. ನನ್ನನ್ನ ನೋಡಿಕೊಂಡು ಹೊಗ್ಲಿಕ್ಕೆ ಸ್ನೇಹಿತರು ಬಂದು ಹೋದ್ರು. ಆದ್ರೂ ಅವ್ರೆಲ್ಲಾ ಮಾಮೂಲಾಗಿಯೇ ಇದ್ರು. ಆವಾಗ ಎಲ್ಲ ಸ್ವಲ್ಪ ಸ್ವಲ್ಪವಾಗಿ ಅರ್ಥ ಆಗೊಕ್ಕೆ ಶುರು ಆಯಿತು. ಅಲ್ಲೇ ಇದ್ದ ಒಬ್ಬ ಸಣ್ಣ ಹುಡುಗನ್ನ ಕರೆದೆ. ನನ್ನ ಪ್ರಶ್ನೆಗೆ ಉತ್ತರ ಹೇಳಿದ್ರೆ ೧ ರೂಪಾಯಿ ಕೊಡ್ತಿನಿ ಅಂತ ಆಸೆ ಹುಟ್ಟಿಸಿ, 'ಇದ್ಯಾವ ಬಣ್ಣ?' ಅಂತ ಮರದ ಕಡೆಗೆ ಬೊಟ್ಟು ಮಾಡಿದೆ. ತಟಕ್ಕಂತ 'ಹಸಿರು' ಅಂದ.

ತಲೆ ಓಡಲಿಕ್ಕೆ ಶುರು ಮಾಡಿತು. ನಾನು ಯಾವುದೇ ಬೇರೆ ಲೋಕಕ್ಕೆ ಬಂದಿಲ್ಲ ಅಂತ ಗೊತ್ತಾಯ್ತು. ಹುಟ್ಟಿದಾಗಿನಿಂದಲೂ ಗಿಡಗಳೆಲ್ಲಾ ಹಸಿರೆಂದು ನಂಬಿದ್ದ ಹುಡುಗನಿನ್ಗೆ ಅವು ಹಸಿರಾಗೆ ಕಂಡಿದ್ದವು. ನನ್ನ ಮೊದಲ ಕಣ್ಣುಗಳಲ್ಲಿ ನೋಡಿದ್ದಾಗ ನನಗೂ ಅವು ಹಸಿರಾಗೆ ಕಂಡಿದ್ದು. ಈ ಪುಣ್ಯಾತ್ಮನ ಕಣ್ಣುಗಳಿಗೆ ಅವು ನೀಲಿಯಾಗಿ ಕಾಣಿಸ್ತಿವೆ. ಆದ್ರೆ ಅವರು ಆ ನೀಲಿಯ ಬಣ್ಣವನ್ನೇ ಹಸಿರಂತ ನಂಬಿದ್ರು. ನಂಬಿರಲೇಬೇಕು. ಯಾಕೆಂದ್ರೆ ಅವರು ಯಾವುದೇ ಹಸಿರು ಬಣ್ಣ ನೊಡಿದರೂ ಅದು ನೀಲಿಯಾಗೇ ಕಾಣಿಸ್ತಿತ್ತು, ಆದ್ರೆ ಜನ ಆ ಬಣ್ಣಕ್ಕೆ ಇಟ್ಟಿದ್ದ ಹೆಸರು ಹಸಿರು. ಯಾರಿಗೆ ತಾನೇ ಅವರಿಗೆ ಹೇಳೊಕ್ಕಾಗುತ್ತೆ, 'ನೀವು ತಪ್ಪು ತಿಳಿದಿದ್ದೀರ, ನೀವು ಹಸಿರು ಅಂತ ತಿಳಿದಿರೊದೆಲ್ಲಾ ನಿಜವಾಗಿ ನಿಮಗೆ ನೀಲಿಯಾಗಿ ಕಾಣಿಸ್ತಿದೆ' ಅಂತ. ಹಾಗೆ ನೋಡಿದ್ರೆ ನಾನು ಈ ಹಿಂದೆ ನನ್ನ ಕಣ್ಣಲ್ಲಿ ನೋಡಿದ್ದ ಹಸಿರು ಬಣ್ಣ ನಿಜವಾಗಿಯೂ ಹಸಿರಾ? ಹಾಗಾದ್ರೆ ಈ ಗಿಡಗಳೆಲ್ಲಾ ಕೆಲವರಿಗೆ ಹಳದಿಯಾಗಿ, ಕೆಲವರಿಗೆ ಕೆಂಪಾಗಿ ಕಾಣಿಸ್ತಿರಬಹುದಾ? ತಮಗೆ ಎನೇ ಬಣ್ಣದಲ್ಲಿ ಕಾಣಲಿ ಅದನ್ನ ಹಸಿರಂತಲೇ ನಂಬಿರ್ತಾರೆ. ಅಂದ್ರೆ ಇದು ಕೇವಲ ಹಸಿರಿನ ವಿಷಯವಾಗದೆ ಎಲ್ಲಾ ಬಣ್ಣಗಳಲ್ಲೂ ಹೀಗೆ ಇರಬಹುದಾ? ಇದೇ ಕಾರಣದಿಂದ ನನಗೆ ಆಕರ್ಷಣೆ ಅನ್ನಿಸೊ ವಸ್ತುಗಳು ಕೆಲವರಿಗೆ ಒಂಚೂರೂ ಇಷ್ಟ ಆಗಲ್ವ? ಹಾಗಾದ್ರೆ ನಿಜವಾದ ಹಸಿರು ಬಣ್ಣ ಅಂದ್ರೆ ಯಾವುದು? ಅದನ್ನು ಯಾರು ನೋಡಿರಬಹುದು? ಯಾವ ಆಧಾರದ ಮೇಲೆ ಅದೇ ಅಪ್ಪಟ ಹಸಿರೆಂದು ಹೇಳಬಹುದು? ಒಂದು ವಸ್ತುವಿನಲ್ಲಿ ತಮಗೆ ಕಾಣುತ್ತಿರುವ ಬಣ್ಣವೇ ಇನ್ನೊಬ್ಬರಿಗೆ ಕಾಣುತ್ತಿದೆಯಾ ಅಂತ ತಿಳಿದುಕೊಳ್ಳೊದು ಹ್ಯಾಗೆ? ಈ ಎಲ್ಲಾ ಪ್ರಶ್ನೆಗಳು ಕೇವಲ ಬಣ್ಣಕ್ಕೆ ಅನ್ವಯಿಸುತ್ತಾ ಅಥವಾ ಆಕಾರ, ಗಾತ್ರ, ತೂಕ, ಮಾತು, ಭಾವನೆ ಎಲ್ಲಾ ಇದೆ ನಿಯಮಕ್ಕೆ ಒಳಪಟ್ಟಿದೆಯಾ? ತಲೆ ಸುತ್ತಿ ಬಂದಂತಾಯಿತು. ಕಣ್ಣೆಲ್ಲಾ ಮಬ್ಬಾಗ್ತಾ ಬಂತು.

ಧಡಕ್ ಅಂತ ಎದ್ದು ಕೂತೆ. ಎನೋ ಕನಸು. ಕರೆಂಟ್ ಬೇರೆ ಹೋಗಿತ್ತು. ಹಾಸ್ಟೆಲ್ ನ ನನ್ನ ರೂಮ್ ಮೇಟ್ ನೆಮ್ಮದಿಯಾಗಿ ಮಲ್ಕೊಂಡಿದ್ದ. ಸಣ್ಣಗೆ ಸೊಳ್ಳೆಯ ಝೇಂಕಾರ ಕೇಳಿಸ್ತಿತ್ತು. ಬಾಯಾರಿದಂತಾಗಿ ಮೆಸ್ಸ್ ಗೆ ಹೋಗಿ ನೀರುಕುಡಿದೆ. ಕರೆಂಟ್ ಬಂತು. ವಾಪಾಸ್ ಬರ್ತಾ ಟ್ಯೂಬ್ ಲೈಟ್ ಬೆಳಕಲ್ಲಿ ಈಗ ಬೆಳಿತಿದ್ದ ಬೇವಿನ ಮರ ನೋಡಿದೆ. ಹಸಿರಾಗೇ ಇತ್ತು. ಹಸಿರಾಗಿತ್ತಾ? ಹಸಿರೆಂದರೆ ಇದೇನಾ? ಅಯ್ಯೋ ಹೀಗೆ ಯೋಚಿಸ್ತಿದ್ರೆ ರಾತ್ರಿ ಎಲ್ಲಾ ನಿದ್ದೆ ಬರಲ್ಲ, ನಾಳೆ ಬೇರೆ ಸಂಬಂಧಿಕರ ಮನೆಗೆ ಹೋಗಬೇಕು ಅಂತ ನೆನಪಾಗಿ ಮುಸುಗೆಳೆದು ಮಲಗಿದೆ. ಫ್ಯಾನ್ ಮೆಲ್ಲಗೆ ಶಬ್ದ ಮಾಡ್ತಿತ್ತು. ಜೋಗುಳ ಹಾಡಿದ ಹಾಗೆ,

ಕೀ.. ಕೀ.. ಕೀ..

Tuesday, September 11, 2007

ಮೊದಲ ಸಾವು...

ನಾನು ಎರಡರಿಂದ ನಾಲ್ಕನೇ ತರಗತಿವರೆಗೆ ಓದಿದ್ದು, ನನ್ನ ಅತ್ತೆಯ ಮನೆಯಲ್ಲಿದ್ದು. ಅದು ಬೆಳಗ್ಗೆಯೊ ಅಥವಾ ಮಧ್ಯಾನ್ಹವೋ ಸರಿಯಾಗಿ ನೆನಪಿಲ್ಲ. ಆದರೆ ಅದು ರಜಾದಿನವಂತೂ ಹೌದು, ಯಾಕೆಂದರೆ ನಾನೂ ಮತ್ತು ಅಕ್ಕ ಶಾಲೆಗೆ ಹೋಗಿರಲಿಲ್ಲ. ಅಂದಾಜು ಹನ್ನೊಂದೋ ಹನ್ನೆರಡೋ ಆಗಿರಬಹುದು. ಹಿತ್ತಲಲ್ಲಿ ಇದ್ದ ಮರದ ಬುಡದಲ್ಲಿ ಹಸಿ ಮಣ್ಣಲ್ಲಿ ಗುಂಡಿ ತೋಡಿ ಏನೋ ಆಟಾಡ್ತಿದ್ದೆ. ಮನೆಗೆ ಯಾರೋ ಬಂದಿದಾರಂತ ನನ್ನ ೧೪ ನೇ sense ಹೇಳಿದಾಗ, ಬಾನಿಯಲ್ಲಿದ್ದ ನೀರಿನಲ್ಲಿ ಕೈ ತೊಳೆದುಕೊಂಡು ಒಳಗೋಡಿದೆ. ಅದೇ ಊರಲ್ಲಿರುತಿದ್ದ, ಮಾಮನ ಸಂಬಂಧಿಕರೊಬ್ಬರು ಕಬ್ಬಿಣದ ಕುರ್ಚಿಯಲ್ಲಿ ಕುಳಿತಿದ್ದು ನೋಡಿ ಆ ೧೪ ನೇ sense ಗೆ ಒಂದು ಸರ್ತಿ ಬೆನ್ನು ತಟ್ಟಿದೆ, ಖುಶಿಯಿಂದ. ಆದರೆ ಆಮೇಲೆ ಖುಶಿಯಾಗಲಿಲ್ಲ. ಅವರ ಕುರ್ಚಿಯ ಮುಂದೆ ಕುಳಿತಿದ್ದ ಅತ್ತೆ ಕಣ್ಣಲ್ಲಿ ನೀರಿತ್ತು. ಮುಖದಲ್ಲಿ ಅಳುವಿತ್ತು. ೩ ನಿಮಿಷ ಆದಮೇಲೆ ತಿಳೀತು, ತಾತ ತೀರಿಕೊಂಡರು ಅಂತ. ಆಗ ನಮ್ಮ ಮನೆಯಲ್ಲಿ ಫೋನ್ ಇರದ ಕಾರಣ ನನ್ನ ದೊಡ್ಡಪ್ಪ ಮತ್ತು ಕಕ್ಕ ಇವರಿಗೆ ಫೋನ್ ಮಾಡಿ ತಿಳಿಸುವಂತೆ ಹೇಳಿದ್ದರು.

ಮನೆಯಲ್ಲಿದವರೆಲ್ಲಾ ಅಳಲಿಕ್ಕೆ ಶುರು ಮಾಡಿದ್ದರು. ಸ್ವಲ್ಪ ಹೊತ್ತಿನಲ್ಲೇ ಸುದ್ದಿ ತಿಳಿದು, ಮಾಮ ಕಾಲೇಜ್ ಇಂದ ಮನೆಗೆ ಬಂದ್ರು. ಅಳ್ತಾನೇ ಎಲ್ಲಾ ತಯಾರಾಗ್ತಿದ್ದರು. ಚಿಕ್ಕವನಾಗಿದ್ದರಿಂದ ನನಗೆ ಅರ್ಥ ಆಗ್ತಿರಲಿಲ್ಲ, ಅಳಬೇಕಾ ಬೇಡ್ವಾ ಅಂತ. ಅರ್ಧ ತಾಸಿನೊಳಗೆ ಎಲ್ಲಾ ಬಸ್ ಸ್ಟಾಂಡ್ ಅಲ್ಲಿ ಇದ್ವಿ. ಸಿಕ್ಕಿದ ಬಸ್ ಹತ್ತಿ ೪೦ ಕಿಮೀ ದೂರದಲ್ಲಿದ್ದ ತಾತನ ಊರಿಗೆ ಹೊರಟಾಯಿತು. ಸಾಯುವುದು ಅಂದರೆ ಏನು ಎನ್ನುವ ಸರಿಯಾದ ಕಲ್ಪನೆ ಅಥವಾ ಅನುಭವ(!) ಇರದ ನನಗೆ ಅದು ಬೇರೆಯವರ ಮೇಲೆ ಬೀರಿದಷ್ಟು ಪರಿಣಾಮ ನನ್ನ ಮೇಲೆ ಬೀರಿರಲಿಲ್ಲ. ಎಲ್ಲರ ಅಳು ನೋಡಿ ಸಿಕ್ಕಾಪಟ್ಟೆ ಕೆಟ್ಟದ್ದೇ ಇರಬೇಕಂತ ಅನಿಸಿ ಆಗಾಗ ಕಣ್ಣಿಂದ ನಾಲ್ಕು ಹನಿಗಳು ಉದಿರುತಿದ್ವು. ಆದರೆ ಬಹಳ ದಿನಗಳ ಮೇಲೆ ತಾತನ ಊರಿಗೆ ಹೋಗ್ತಿದಿನಲ್ಲಾ, ನನ್ನ ವಯಸ್ಸಿನ ಆಸುಪಾಸಿನವರಾದ ದೊಡ್ಡಪ್ಪನ ಮಕ್ಕಳು, ಇನ್ನೊಬ್ಬ ಅತ್ತೆಯ ಮಕ್ಕಳು, ಚಿಕ್ಕಪ್ಪನ ಮಕ್ಕಳು ಸಿಗುತ್ತಾರಲ್ಲಾ ಅಂತ ಒಳಗೊಳಗೇ ಸ್ವಲ್ಪ ಸ್ವಲ್ಪ ಖುಶಿಯೂ ಆಗ್ತಿತ್ತು. ಪಕ್ಕದಲ್ಲಿ ಕುಳಿತಿದ್ದವರೆಲ್ಲಾ ಆಗಾಗ ತಾತನನ್ನ ನೆನೆಸಿಕೊಂಡು ಕಣ್ಣೀರು ಹಾಕ್ತಿದ್ರು. ಸ್ವಲ್ಪ ಹೊತ್ತಿನಲ್ಲೇ ನಿದ್ದೆಬಂತು, ಮಲಗಿಕೊಂಡೆ.

ತಾತ ಎಂಬ ಶಬ್ದ ಎಲ್ಲಿಯಾದರೂ ಕೇಳಿದರೆ ನನ್ನ ಮನಸ್ಸಿನಲ್ಲಿ ಮೂಡುವ ಮೊದಲ ಚಿತ್ರ ಅಂದ್ರೆ, ತಣ್ಣನೆಯ ಗಾಳಿ, ಪಕ್ಕದಲ್ಲಿ ಹುಣಸೆ ಮರಗಳ ಸಾಲು, ಬಿಳಿ ಅಂಗಿ ಮತ್ತು ಧೋತಿ ಉಟ್ಟು, ಒಂದು ಕೈಯಲ್ಲಿ ಧೋತಿಯ ಚುಂಗು, ಇನ್ನೊಂದರಲ್ಲಿ ನಮ್ಮಲ್ಲಿ ಯಾರಾದರೊಬ್ಬರ ಕೈ ಹಿಡಿದುಕೊಂಡು, ಸಾಯಂಕಾಲ ೫ ಘಂಟೆಗೆ ವಾಕಿಂಗ್ ಗೆ ಕರೆದುಕೊಂಡು ಹೋಗುತಿದ್ದ ನನ್ನ ತಾತ.

ತಾತನ ಮನೆಯ ಹತ್ತಿರವೇ ಇರುವ ಹಳೇ ಬಸ್ ಸ್ಟ್ಯಾಂಡ್ ಅಲ್ಲಿ ಇಳಿದು ಮನೆ ಕಡೆ ಹೊರಟೆವು. ಮನೆ ನೋಡಿ ನಾನು ಹೆಣೆದಿದ್ದ ಸಾವಿನ ಮನೆಯ ಕಲ್ಪನೆ ದಾರಿಯಲ್ಲೆಲ್ಲೋ ಕಳೆದುಹೋದ ಹಾಗೆ ಅನ್ನಿಸ್ತು. ಮನೆ ಸುತ್ತಮುತ್ತೆಲ್ಲಾ ಜನ ತುಂಬಿಕೊಂಡಿದ್ರು. ಅಲ್ಲಲ್ಲಿ ಮುಸುಮುಸು ಅಳು ಕೇಳಿಸ್ತಿತ್ತು. ಮನೆಯೊಳಗೆ ಕಾಲಿಟ್ಟ ತಕ್ಷಣ ಇದ್ದಕ್ಕಿದ್ದಂತೇ ಎಲ್ಲರ ಅಳು ಜೋರಾಯಿತು. ಚಿಕ್ಕವನಾಗಿದ್ದರಿಂದ ಮುಂದೆ ಏನು ನಡಿತಿದೆ ಅಂತ ನೋಡೋ ಕುತೂಹಲ ಆದ್ರೆ ಎನೂ ಕಾಣಿಸ್ತಿಲ್ಲ, ಎಲ್ಲಾ ಅಡ್ಡ ನಿಂತಿದಾರೆ. ಕಷ್ಟಪಟ್ಟು ತೂರಿಕೊಂಡು ಒಳಗ್ಹೋದೆ. ವರಾಂಡದಲ್ಲಿ ಗೋಡೆಯ ಪಕ್ಕ ತಾತನನ್ನ ಮಲಗಿಸಿದ್ದರು. ಮೊದಮೊದ್ಲಿಗೆ ಗುರ್ತು ಹಿಡಿಲಿಕ್ಕೇ ಆಗ್ಲಿಲ್ಲ. ಅವರ ಮುಖದಲ್ಲೊಂದು ಕಳೆ ಕಳೆದ್ಹೋಗಿತ್ತು. ಮುಖ ಕಾಣುವಷ್ಟು ಬಿಟ್ಟು ಬಿಳಿಬಟ್ಟೆ ಹೊದಿಸಿದ್ರು. ಹಣೆಗೊಂದು ಸಣ್ಣ ಕುಂಕುಮ, ಕೊರಳಿಗೊಂದು ಮಲ್ಲಿಗೆ ಹಾರ. ಆದ್ರೆ ತಾತನ ಎತ್ತರವ್ಯಾಕೊ ಕಡಿಮೆಯಾಗಿದೆಯಲ್ಲಾ? ಸಾಯುವಾಗ ಎಲ್ಲರೂ ಸ್ವಲ್ಪ ಗಿಡ್ಡಕಾಗ್ತಾರಾ ಅಂತ ಅನಿಸ್ತು. ಆಮೇಲೆ ಯಾರೋ ಹೇಳಿದ ಮೇಲೆ ತಿಳಿತು, ಸತ್ತಾಗ ಕಾಲು ಚಕ್ಳಂಬಕ್ಳ ಹಾಕಿ ಮಲಗಿಸ್ತಾರೆ ಅಂತ. ಆವಾಗ ಕತ್ತೆತ್ತಿ ಸುತ್ತಮುತ್ತ ಎಲ್ಲಾ ನೋಡಿದೆ. ಎಲ್ಲಾ ನನ್ನ ಅತಿ ಹತ್ತಿರದ ಸಂಬಂದಿಗಳು. ಅಂತಹ ದುಃಖದ ಸಂದರ್ಭದಲ್ಲೂ ಅವರನ್ನೆಲ್ಲಾ ನೋಡಿ ಖುಶಿಯಾಯ್ತು. ಆದ್ರೆ ಅದನ್ನ ವ್ಯಕ್ತ ಪಡಿಸುವುದು ಹ್ಯಾಗೆ ಅಂತ ಗೊತ್ತಾಗ್ಲಿಲ್ಲ. ಯಾರನ್ನಾದರೂ ಬಹಳ ದಿನಗಳ ಮೇಲೆ ನೋಡಿದರೆ ಮುಖದಲ್ಲೊಂದು ಖುಶಿಯ ಮುಗುಳ್ನಗೆ ಇಟ್ಟುಕ್ಕೊಂಡು ಮಾತನಾಡಿಸಿಯೇ ಅಭ್ಯಾಸ. ಗೊತ್ತಿರದಿದ್ದಾಗ ಸುಮ್ಮನಿರುವುದೇ ವಾಸಿ ಅಂತ ಯಾರಾದ್ರೂ ನನ್ನ ಕಡೆ ತಿರುಗಿದಾಗ, ಕಷ್ಟಪಟ್ಟು ಅಳು ನಗುವಿಲ್ಲದ ಮುಖ ಮಾಡ್ತಿದ್ದೆ. ಅಷ್ಟರಲ್ಲಿ ನನ್ನ ಅತ್ತೆ ಕೆಳಗಡೆ ಬಿದ್ದು, ತಾತನನ್ನ ತಬ್ಬಿಕೊಂಡು, ಜೋರಾಗಿ ಅಳುತ್ತಾ ಎನೋ ಬಡಬಡಾಯಿಸೊದಿಕ್ಕೆ ಶುರು ಮಾಡಿದ್ರು. ಇಷ್ಟೊತ್ತು ಸರಿಯಾಗಿದ್ರಲ್ಲಾ, ಈಗೇನಾಯಿತು ಅಂತ ಭಯ ಆಯ್ತು. ಸುಮ್ನೆ ಹೋಗಿ ಅಲ್ಲೇ ಇದ್ದ ಕಟ್ಟೆಯ ಮೇಲೆ ಕುಳಿತ್ಕೊಂಡೆ.

ಹಿಂಗೇ ಘಂಟೆಗಳು ಉರುಳುತಿದ್ದಂಗೆ ಎಷ್ಟೋ ಜನ ಬಂದ್ರು, ಹೋದ್ರು. ಹೊಸದಾಗಿ ಯಾರಾದರೂ ಬಂದಾಗೆಲ್ಲಾ ಎಲ್ಲರ ಅಳು ಜೋರಾಗ್ತಿತ್ತು. ಬಂದವರು ಹಳಬರಾದ ಮೇಲೆ ಸ್ವಲ್ಪ ಕಡಿಮೆ ಆಗ್ತಿತ್ತು. ಪ್ರತಿಯೊಬ್ಬರು ಅಳುವ ರೀತಿ ಬೇರೆಯಾಗಿತ್ತು, ದುಃಖ ಹೊರಗೆಡುವ ರೀತಿ ಬೇರೆಯಾಗಿತ್ತು. ಅವರನ್ನೆಲ್ಲಾ ನಾನು ಮೊದಲಿಗೆ ಬಹಳಷ್ಟು ಸಾರಿ ನೋಡಿದ್ದೆ ಆದರೂ ಈ ರೀತಿ ಅಲ್ಲ. ಪ್ರತಿಯೊಬ್ಬರೂ ಹ್ಯಾಗ್ಯಾಗೋ ಅಳೋದು ನೋಡಿ ವಿಚಿತ್ರ ಅನ್ನಿಸ್ತಿತ್ತು. ನೋಡಿದರೆ ಬಾರಿ ಗಟ್ಟಿಗರು ಅನ್ನಿಸುವ ಕೆಲವು ಗಂಡಸರೂ ಕೂಡ ಅಳ್ತಿದ್ರು. ಸುಮ್ಮನೆ ಕುಳಿತವನಿಗಿನ್ನೇನು ಕೆಲ್ಸ, ಬೇರೆಯವರನ್ನ ವೀಕ್ಷಿಸೋದು ಬಿಟ್ಟು.

ದೂರದೂರಲ್ಲಿ ಇರ್ತಿದ್ದ ಅಪ್ಪ ಅಮ್ಮ ಬಂದಮೇಲೆ ತಾತನನ್ನ ಕರೆದುಕೊಂಡು ಹೋಗೋಕ್ಕೆ ಎಲ್ಲಾ ಏರ್ಪಾಡು ಮಾಡಿದ್ರು. ತಾತನ್ನ ಎತ್ತಿ ಅಂಗಳದಲ್ಲಿ ಚಟ್ಟದ ಮೇಲೆ ಮಲಗಿಸಿದ್ರು. ಎಲ್ಲರಂತೆ ನಾನೂ ಹೋಗಿ ನಮಸ್ಕಾರ ಮಾಡಿ ಬಂದೆ. ನನಗೇನು ಗೊತ್ತಿತ್ತು, ಅದೇ ಕೊನೆಯಬಾರಿಗೆ ಅವರನ್ನ ನೋಡುವುದು ಅಂತ, ಇನ್ನುಮುಂದೆ ಅವರು ನಮ್ಮ ಜೊತೆಯಲ್ಲಿರುವುದಿಲ್ಲ ಅಂತ. ಕಣ್ಣೆದುರಿಗೆ ನಡಿತಿರುವುದೆಲ್ಲಾ ನೋಡಿ ಹೌದೆನ್ನಿಸಿದ್ರೂ, ಅರ್ಥ ಮಾಡಿಕೊಳ್ಳದಾಗದಂತಹ ಪರಿಸ್ಥಿತಿ. ಎಲ್ಲರೂ ಕೊನೆಯಬಾರಿಗೆ ನಮಸ್ಕಾರ ಮಾಡಿದ ಮೇಲೆ ನಾಲ್ಕುಜನ ಸೇರಿ ಎತ್ಕೊಂಡು ಹೊರಟ್ರು, ಹಿಂದೆ ಇಷ್ಟೊಂದು ಜನ. ನಾನೂ ಅವ್ರ ಜೊತೆಗೆ ಹೊರಟಿದ್ದೆ, ಯಾರೋ ಬೈದು ಎಳ್ಕೊಂಡು ನಿಲ್ಲಿಸಿದ್ರು, 'ಹಾಗೆಲ್ಲ ಹೋಗಬಾರದು'ಅಂತ ಹೇಳಿ. ತಾತನ್ನ ಸುಡ್ತಾರೆ ಅಂತ ಕೇಳಿದ್ದೆ, ಅವಾಗ ಎಷ್ಟು ನೋವಾಗುತ್ತೋ ಅಂತ ದುಃಖ ಆಯ್ತು.

ರಾತ್ರಿ ಎಲ್ಲರದೂ ಸ್ನಾನ ಆಯ್ತು. ೧೩ ದಿವ್ಸ ಮೈಲಿಗೆ ಅಂತ ಯಾರನ್ನೂ ಅಡುಗೆಮನೆ ಒಳಗೆ ಬಿಡ್ತಿರಲಿಲ್ಲ. ಬರೇ ನನ್ನ ಅತ್ತೆಯ ಮನೆಯವರು ಅಡುಗೆ ಮಾಡಿ ಬಡಿಸ್ತಿದ್ರು. ೨ ದಿವ್ಸದಲ್ಲೇ ಮನೆಯ ವಾತಾವರಣ ಎಲ್ಲಾ ತಿಳಿಯಾಯ್ತು. ದೊಡ್ಡವರು ಹೇಗಿದ್ದರೊ ಗೊತ್ತಿಲ್ಲ, ನಾವು ಹುಡುಗರಂತೂ ಖುಶಿಯಿಂದ ಆಟ ಆಡಿಕೊಂಡಿದ್ವಿ. ಎಲ್ಲಾ ಮಕ್ಕಳು ಸೇರಿದ್ದರಿಂದ ಅದೊಂದು ಚಿಕ್ಕ ಬೇಸಿಗೆ ರಜದ ತರವೇ ಆಗಿತ್ತು. ಮಾಮೂಲಿಯಂತೆ ಉಸುಗಿನಲ್ಲಿ ಮನೆಕಟ್ಟೊದು, ಹುಣಸೇಹಣ್ಣು ಉಪ್ಪು ಖಾರ ಕುಟ್ಟಿ ಐಸ್ ಕ್ರೀಮ್ ಕಡ್ಡಿಗೆ ಸಿಗಿಸ್ಕೊಂಡು ಮುಖ ಹುಳ್ಳಗೆ ಮಾಡ್ಕೊಂಡು ತಿನ್ನೋದು, ಕಳ್ಳ ಪೋಲಿಸ್ ಆಟ ಆಡೋದು, ಚೌಕಬಾರ ಆಡೊದು, ಎಲ್ಲಾ ನಡೆದಿತ್ತು, ಪುರಸೊತ್ತು ಇಲ್ಲದ ಹಾಗೆ.

ಸಾಯಂಕಾಲ ಅದೇ ಹುಣಸೇ ಮರಗಳ ಸಾಲಿನ ರಸ್ತೆಯಲ್ಲಿ ಎಲ್ಲಾ ಹುಡುಗ್ರೂ ಜೋರಾಗಿ ನಗಾಡ್ತ, ಗಲಾಟೆ ಮಾಡ್ಕೊಂಡು ವಾಕಿಂಗ್ ಅಂತ ಹೋಗಿಬರ್ತಿದ್ವಿ. ಪಕ್ಕದಲ್ಲಿ ತಾತ ಇಲ್ಲದಿರುವುದು ಪಕ್ಕನೆ ನೆನಪಾಗ್ತಿರಲಿಲ್ಲ. ಎಲ್ಲವನ್ನೂ ಬೇಗನೆ ಮರೆಯುವ ಮನಸ್ಸೋ ಅಥವಾ ಇಷ್ಟು ದಿವಸ ಜೊತೆಗಿದ್ದವರು ಈಗ ಇಲ್ಲ ಎನ್ನುವುದನ್ನು ಕಲ್ಪಿಸಿಕೊಳ್ಳೊಕ್ಕಾಗದೇ, ಇನ್ನೂ ಜೊತೆಯಲ್ಲೇ ಇದ್ದಾರೆ ಅಂತ ನಂಬುವ ಮನಸ್ಸೋ? ಗೊತ್ತಿಲ್ಲ ನಾನಿನ್ನೂ ಚಿಕ್ಕವನು.