'ಲೇ ಸ್ವಾಮಿ, ಚೂರು ಹಿಡ್ಕಳಲೇ ಇದನ್ನ. ಇವ್ನಜ್ಜಿ ಅವಾಗಿಂದ ಚಪ್ಲಿ ಕಿತ್ಗಂಡ್ ಬರ್ತಿದದ' ಅಂತ ಹೇಳಿ ಹಿಡ್ಕಂಡಿದ್ದ ಅಟ್ಲಾಸ್ ಸೈಕಲ್ನ ಇವ್ನ ಕೈಗೆ ಕೊಟ್ಟ. ಬೀಳೊ ಹಂಗೆ ಆಗಿದ್ದ ಸೈಕಲ್ ಅನ್ನ ಗಟ್ಟಿಯಾಗಿ ಹಿಡ್ಕಂಡ್ ನಿಂತ. ಸುಮಾರು ಅವ್ನಷ್ಟು ಎತ್ರನೇ ಇತ್ತದು. ಪೂರ್ತಿ ಹಸುರ್ ಬಣ್ಣ, ಬರೀ ಹ್ಯಾಂಡಲ್ ಮತ್ತೆ ಸೀಟ್ ಕವರ್ ಅಷ್ಟೇ ಕೆಂಪು, ದೊಡ್ಡದಾಗಿ 'ರಣಧೀರ' ಅಂತ ಬರ್ದಿದ್ರು ಅದ್ರಮೇಲೆ.
ಅವ್ನಿನ್ನೂ ಚಪ್ಲಿ ಸರಿ ಮಾಡಿದ್ನಾ ಇಲ್ವಾ, ಇವ್ನಿಗೆ ತಡ್ಕಳ್ಲಿಕ್ಕಾಗ್ಲಿಲ್ಲ, ಕೇಳೇಬಿಟ್ಟ. "ಸೀನಣ್ಣ, ನಾನೂ ಒಂದ್ ಸರ್ತಿ ಸೈಕಲ್ ಹೊಡಿಲಾ?"
"ಓಹೋಹೋ, ಏನೂ ಬ್ಯಾಡ. ಹೊಡಿಲಿಕ್ಕೆ ಬರಲ್ಲ ಬಿಡಲ್ಲ, ಎಲ್ಲನಾ ಹೊತ್ಕಂಡ್ ಬಿದ್ರೆ, ಊರೆಲ್ಲಾ ಡಂಗುರ ಹೊಡದ್ಬಿಡ್ತಿಯಾ ಅಷ್ಟೆ, 'ಸೀನಣ್ಣನ ನಂಗ ಹೊಡಿಲಕ್ಹೇಳಿದ್ದು, ಆತ್ನೇ ಬೀಳ್ಸಿದ್ದು' ಅಂತ, ಕಂಡಿಲ್ಲೇನು ನಾನೇನು."
ಸ್ವಾಮಿ ಮುಖ ಒಂಚೂರ್ ಸಪ್ಪಗಾಯ್ತು, ಯಾಕಂದ್ರ ಮೊದ್ಲ್ ಎರಡ್ ಮೂರ್ ಸರ್ತಿ ಹಿಂಗೆ ಮಾಡಿದ್ದ.
'ಹೂಂ ಮತ್ತೆ, ನಾನು ಹೊಡಿಬೇಕಾರ ಹಿಡ್ಕಂಡಿರು ಅಂದ್ರೆ ಹಿಡ್ಕಳದೇ ಇಲ್ಲ. ಕೈ ಬಿಟ್ಬಿಡ್ತಿ, ಬೀಳಲ್ಲೇನ್ ಅವಾಗ ನಾನು?'
"ಇದು ನೋಡು ಮಾತಂದ್ರೆ, ಅಲ್ಲಲೇ ನಾನು ಹಿಡ್ಕಂಡಿದ್ರೆ ನೀನೇನ್ ಹೊಡ್ದಂಗಾಯ್ತು? ಅದಕ್ಕಿಂತ ನೀನ್ ಸುಮ್ನೆ ಹೊಡಿಲಿಲ್ಲದಂಗೆ ಕುತ್ಕಂಡಿದ್ರೇನೆ ವಾಸಿ."
'ಇಲ್ಲ ಇಲ್ಲ, ನಿಜ ಇನ್ನಮ್ಯಾಲೆ ಹಂಗೆ ಹೇಳಲ್ಲ. ಒಂದೇ ಒಂದು ರೌಂಡ್ ಹೊಡಿತಿನಿ, ಹಿಡ್ಕಳಣ್ಣ..'
"ಸರಿ ಸರಿ, ಹತ್ತು" ಅಂದ.
ಶಬ್ದಗಳು ಬೆನ್ನ ಹಿಂದಿಂದ ಬರ್ತಿದ್ವು, ಸೀನಣ್ಣ ಹಿಡ್ಕಂಡ್ ಮೇಲೆ ಅದ್ಹೆಂಗ್ ಬೀಳ್ತಿನಿ ಅಂತೇಳಿ ಸ್ವಾಮಿ ದಬಾಯಿಸಿ ತುಳ್ದ. ಅಲೆಲೆಲೇ ಏನ್ ಮಜಾ ಸೈಕಲ್ ಓಡಿಸ್ಬೇಕಾದ್ರೆ, ಅದೂ ಸೀನಣ್ಣ ಹಿಂದೆ ಹಿಡ್ಕಂಡಿರ್ಬೆಕಾದ್ರೆ, ಭಯ ಎಲ್ಲಿಂದ ಬರ್ಬೇಕು? ಖುಶಿಯಾಗಿ ತುಳಿತಾನೇ ಕರ್ದ, 'ಸೀನಣ್ಣಾ...'. ಉತ್ರನೇ ಇಲ್ಲ. ಬ್ರೇಕ್ ಹಿಡ್ದ್, ನಿಲ್ಸಿ, ತಿರುಗ್ ನೋಡ್ದ.
ಇವ್ನೆಲ್ಲಿ ಶುರು ಮಾಡಿದ್ನೋ ಸೀನಣ್ಣ ಅಲ್ಲೇ ಕೂತಿದ್ದ, ಕಿತ್ಹೊಗಿದ್ದ, ಹವಾಯಿ ಚಪ್ಪಲ್ ಸರಿ ಮಾಡ್ಕೊತಾ. ಸ್ವಾಮಿಗೆ ಇವಾಗ ಭಯ ಶುರು ಆಯ್ತು. ಅದ್ಕೆ ಅಲ್ಲಿಂದ ಸೈಕಲ್ ದಬ್ಕೊಂಡೇ ವಾಪಾಸ್ ಬಂದ.
"ಏನಲೇ, ನಾನಿನ್ನೂ ಹಿಡ್ಕಂಡೇ ಇದ್ದಿಲ್ಲ, ಆಗ್ಲೇ ಹೊಡ್ಕಂಡ್ ಹೋಗ್ಬಿಟ್ಟೆ? ಪರ್ವಾಗಿಲ್ಲ ಕಲ್ತ್ ಬಿಟ್ಟಿಯ.. ಯಾವಾಗ ಕಲ್ತೆ?"
ಸ್ವಾಮಿಗ್ಯಾರು ಕಲಿಸ್ಬೇಕು? ಏನೋ ಸೀನಣ್ಣ ಜೊತೆಗಿದಾನೆ ಅನ್ಕೊಂಡು ಹೊಡ್ದಿದ್ದ, ಅಷ್ಟೇ.
ಅವಾಗ್ಲೇ ಸ್ವಾಮಿಗನ್ಸಿದ್ದು, 'ಅಲ್ಲ ಈವಣ್ಣ ಯಾವತ್ತೂ ನಂಗೆ ಹಿಡ್ಕೊಂಡು ಕಲ್ಸೇ ಇಲ್ಲ. ನಾನೇ ಸುಮ್ನೆ ಗಟ್ಟಿ ಹಿಡ್ಕಂಡನ ಬಿಡು ಅಂತೇಳಿ ಕಲ್ತಿದ್ದು. ಅಂದ್ರೆ ಇದ್ರೊಳಗೆ ಕಲಿಸ್ಲಿಕ್ಕೇನೂ ಇಲ್ಲ. ಯಾರೂ ಕಲ್ಸೋದೂ ಇಲ್ಲ. ಆದ್ರೆ ಸೀನಣ್ಣ ಇದಾನ ಅಂತ ಅನ್ಕಂಡಿಲ್ಲ ಅಂದ್ರೆ ನಾನು ಕಲಿತಾನೇ ಇದ್ದಿಲ್ಲೇನೋ.' ಅಂತ.
'ಅಣ್ಣ ನಾಳೆ ಇಂದ ನಾನೇ ಹೊಡಿತಿನಿ ಸೈಕಲ್' ಅಂದ.
"ಹೊತ್ಕಂಡು ಬಿದ್ರೆ?"
'ಏನೂ ಬೀಳಲ್ಲ. ನಂಗಿವತ್ತು ಗೊತ್ತಾಯ್ತು. ಒಂದೋ ಸೈಕಲ್ ಯಾರೂ ಹಿಡ್ಕಂಡಿರಲ್ಲ, ಓಡ್ಸೋದು ಬೀಳ್ಸೋದು ಎಲ್ಲಾ ನನ್ನ ಕೈಯ್ಯಾಗೇ ಅದ ಅಂತ ಗೊತ್ತಿರ್ಬೇಕು, ಇಲ್ಲಂದ್ರೆ ಯಾರಾದ್ರೂ ಜೊತಿಗಿದಾರ, ಬಿದ್ರೆ ಮ್ಯಾಲ ಎತ್ತತಾರ ಅಂತ ಅನ್ಕೊಂಡು ಧೈರ್ಯದಿಂದ ಓಡಿಸ್ಬೇಕು. ಎರಡೂ ಹೊತ್ನಾಗೂ ಜೊತಿಗೆ ಯಾರೂ ಇರಲ್ಲ, ಆದ್ರ ಎಲ್ಲಾ ನಾನ್ ಅನ್ಕಳದ್ರ ಮ್ಯಾಲ ಹೊಗ್ತದ.'
ಜೋರಾಗಿ ನಕ್ಕಂತ ಸೀನಣ್ಣ ಹೇಳ್ದ "ಬಪ್ಪರೇ ಮಗನ, ಇನ್ನು ನಿನ್ನ ಹಿಡಿಯೊರ್ ಇಲ್ಲ ಬಿಡು. ಆಯ್ತು ಸೈಕಲ್ ತೊಗೊಂಡ್ ಮನಿಕಡಿ ಹೋಗಿರು, ನಾ ಆಮ್ಯಾಲೆ ಬರ್ತಿನಿ"
4 comments:
ಅನಂತ ಅವರೆ...
ಚೆನ್ನಾಗಿ ಬರೆದಿದ್ದೀರ.
ಇದೇ ಸೈಕಲ್ ಸವಾರಿಯ ಹಾಗೆ ಬದುಕೂ ಸಹ ಅಲ್ಲವೆ?
self cofidence ಎಷ್ಟೋ ಬಾರಿ ನಮ್ಮನ್ನು balance ಮಾಡಿಬಿಡುತ್ತದೆ.
ಶಾಂತಲಾ ಅವರೆ,
ಧನ್ಯವಾದಗಳು ರೀ. ಹೌದು, self confidence ಇಲ್ಲ ಅಂದ್ರೆ ಸೈಕಲ್ ಯಾರಾದ್ರೂ ಹಿಡ್ಕೊಂಡಿದ್ರೂ ಕೂಡ ಬೀಳೋದು ಗ್ಯಾರಂಟಿನೇ. :)
P.S: ಏನ್ರಿ, ಬಹುವಚನದಲ್ಲಿ ಬೈತಾ ಇದಿರಾ? ;o) ನಾನು ನಿಮಗಿಂತಾ ಚಿಕ್ಕವನು.. ಏಕವಚನನೇ ಸಾಕು, ಅರ್ಧವಚನ ಅಂತೇನಾದ್ರೂ ಇದ್ರೆ ಉಪಯೋಗಿಸಿ, ಪರ್ವಾಗಿಲ್ಲ.. ;)
ಕತೆ ತುಂಬಾ ಚೆನ್ನಾಗಿದೆ.
@bala,
ಧನ್ಯವಾದಗಳು.. :)
Post a Comment