ಅಪ್ಪ: "ಘಂಟೆ ಎಷ್ಟು ಹೊಡಿತು?"
ಮಗ: "ಏಳೂವರೆ."
ಅಪ್ಪ: "ಎಷ್ಟು ಘಂಟೆಗೆ ನಿನ್ನ ಪ್ರೊಗ್ರಾಮು?"
ಮಗ: "ಒಂಬತ್ತೂವರೆಗೆ."
ಅಪ್ಪ: "ನಂದೊಂದು ಪ್ರಶ್ನೆ ಇದೆ."
ಮಗ: "ಕೇಳಿ."
ಅಪ್ಪ: "ಯಾರಾದ್ರೂ ನಿದ್ದೆ ಮಾಡ್ತಿದಾರೆ ಅಂತ ಹೇಗೆ ಕಂಡುಹಿಡಿಯೋದು?"
ಮಗ: " 'ನಿದ್ದೆ ಮಾಡ್ತಿದಿರಾ?' ಅಂತ ಮಲಗಿದ್ದವರನ್ನ ಕರೆದು ಕೇಳಿ, ಗೊತ್ತಾಗುತ್ತೆ."
ಅಪ್ಪ: "ಅದು ಹೇಗೆ?"
ಮಗ: "ಅವ್ರು ನಿದ್ದೆ ಮಾಡ್ತಿದ್ದಿದ್ರೆ, 'ಹೂಂ' ಅಂತಾರೆ. ಇಲ್ಲ ಅಂದ್ರೆ 'ಇಲ್ಲ' ಅಂತಾರೆ."
ಅಪ್ಪ: "ಆದ್ರೆ ಅವ್ರು ಏನೇ ಉತ್ತರ ಕೊಟ್ಟರೂ ಸರಿ, ಅವ್ರು ಎದ್ದಿದಾರೆ ಅಂತಾನೇ ಅರ್ಥ ಅಲ್ವಾ? ಯಾಕಂದ್ರೆ ನಿದ್ದೆ ಮಾಡ್ತಾ ಹೇಗೆ ಉತ್ತರ ಕೊಡೋಕೆ ಸಾಧ್ಯ ಹೇಳು."
ಮಗ: "ಹೌದು. ಆದ್ರೆ ಅವ್ರು 'ಹೂಂ' ಅಂತ ಹೇಳಿದ್ದರ ಅರ್ಥ ಮೊದಲು ನಿದ್ದೆ ಮಾಡ್ತಿದ್ದೆ, ಈಗ ನೀವು ಕೂಗಿದ ಮೇಲೆ ಎಚ್ಚರ ಆಯಿತು ಅಂತ."
ಅಪ್ಪ: "ಹಂಗಂದ್ರೆ ನಾನು ಕೇಳಿದ ಪ್ರಶ್ನೆಗೆ ಅವರ ಉತ್ತರ ಸರಿಯಾಗಿದ್ದಿಲ್ಲ. ನಾನು ಕೇಳೋ ಪ್ರಶ್ನೆಗೆ ಅವ್ರು ಉತ್ತರ ಕೊಟ್ಟರೆ ಅದು 'ಇಲ್ಲ' ಅಂತನೇ ಇರಬೇಕು. ಇಲ್ಲಾಂದ್ರೆ ಅವ್ರು ಸುಳ್ಳು ಹೇಳ್ತಿದಾರೆ ಅಂತ ಅರ್ಥ. ನಾನು ಅವ್ರನ್ನ ಕೇಳಿದ್ದು 'ನಿದ್ದೆ ಮಾಡ್ತಿದಿರಾ?' ಅಂತ, 'ನಿದ್ದೆ ಮಾಡ್ತಿದ್ರಾ?' ಅಂತ ಅಲ್ಲ."
ಮಗ: "ಹಾಗಾದ್ರೆ ಅವ್ರನ್ನ 'ನಿದ್ದೆ ಮಾಡ್ತಿದ್ರಾ?' ಅಂತಾನೇ ಕೇಳಿ."
ಅಪ್ಪ: "ನನಗೆ ಅವರು ಮೊದಲೇನು ಮಾಡ್ತಿದ್ರು ಅನ್ನೋದು ಬೇಡ. ಈಗ, ಈ ಕ್ಷಣ, ನಿದ್ದೆ ಮಾಡ್ತಿದಿರಾ ಅಂತ ಗೊತ್ತಾಗಬೇಕು."
ಮಗ: "ಹ್ಮ್.. ಹಾಗಾದ್ರೆ ಮೊದಲೇ ಕೇಳಿದಂತೆ 'ನಿದ್ದೆ ಮಾಡ್ತಿದಿರಾ?' ಅಂತಾನೇ ಕೇಳಿ. ಏನೇ ಉತ್ತರ ಬಂದರೂ ಎದ್ದಿದಾರೆ ಅಂತ ಅರ್ಥ. ಏನೂ ಉತ್ತರ ಬರಲಿಲ್ಲ ಅಂದ್ರೆ ಖಂಡಿತ ನಿದ್ದೆ ಮಾಡ್ತಿದಾರೆ ಅಂತಾನೇ."
ಅಪ್ಪ: "ಅಂದ್ರೆ ನಾನು ಕರೆದಿದ್ದು ಅವರಿಗೆ ಕೇಳಿಸಲಿಲ್ಲ, ಅದಕ್ಕೆ ಅವರು ಉತ್ತರ ಕೊಡಲಿಲ್ಲ ಅಂದ್ರೆ ಅವರು ನಿದ್ದೆ ಮಾಡ್ತಿದಾರೆ ಅಂತಾನಾ?"
ಮಗ: "ಹಾಗಲ್ಲ."
ಅಪ್ಪ: "ಅಕಸ್ಮಾತ್ ಅವರಿಗೆ ನನ್ನ ಪ್ರಶ್ನೆಗೆ ಉತ್ತರ ಕೊಡುವುದಕ್ಕೆ ಇಷ್ಟ ಇಲ್ದೇ ಉತ್ತರ ಕೊಡದಿದ್ರೆ, ಅವರು ನಿದ್ದೆ ಮಾಡ್ತಿದಾರೆ ಅಂತ ಅರ್ಥನಾ?"
ಮಗ: "ನೀವು ಹೀಗೆ ಕೇಳಿದ್ರೆ ನಾನೇನು ಹೇಳಲಿ? ಒಂದು ಕೆಲ್ಸ ಮಾಡಿ. ಮಲಗಿರುವವರ ಪಕ್ಕ ಹೋಗಿ ನೋಡಿ. ಗೊತ್ತಾಗುತ್ತೆ."
ಅಪ್ಪ: "ಅವರು ನಾನು ಬಂದೆ ಅಂತ ಸುಮ್ನೆ ಕಣ್ಣುಮುಚ್ಚಿಕೊಂಡು ನಾಟಕ ಮಾಡ್ತಿದ್ರೆ? ಅಥವಾ ಅವರು ಕಣ್ಣು ತೆರೆದುಕೊಂಡು ಕುಳಿತುಕೊಂಡೇ ನಿದ್ದೆ ಮಾಡ್ತಿದ್ರೇ? ನನಗೆ ಹೇಗೆ ಗೊತ್ತಾಗಬೇಕು?"
ಮಗ: "ಅಪ್ಪ.. ನೀವು ಹೀಗೇ ಯೊಚನೆ ಮಾಡ್ತಿದ್ರೆ ಖಂಡಿತ ನಿಮ್ಮ ಪ್ರಶ್ನೆಗೆ ಉತ್ತರ ಸಿಗೋದು ಅಸಾಧ್ಯ!"
ಅಪ್ಪ: "ಹೌದಾ? ಈ ಪ್ರಶ್ನೆಗೇ ಉತ್ತರ ಸಿಗಲಿಲ್ಲ ಅಂದ್ರೆ ನಾನು ಮುಂದೆ ಕೇಳಬೇಕಂತಿದ್ದ ನೂರಾರು ಪ್ರಶ್ನೆಗಳಿಗೆ ಉತ್ತರಾನೇ ಇಲ್ಲ ಅನ್ಸುತ್ತೆ. ಉದಾಹರಣೆಗೆ, 'ನಾನು ಮಾತಾಡಿದ್ದು ಇನ್ನೊಬ್ಬರಿಗೆ ಕೇಳಿಸಿತಾ?', 'ನನ್ನನ್ನು ಅವರು ನೋಡಿದರಾ?', 'ನಾನು ನೋಡುತ್ತಿರುವ ವಸ್ತು ಅದೇನಾ?', 'ನಾನು ನಾನೇನಾ?' "
ಮಗ: "ಹ್ಮ್.. ಹೌದೆನ್ನಿಸುತ್ತೆ."
ಅಪ್ಪ: "ಮತ್ತೆ ಇಷ್ಟೆಲ್ಲಾ ಪ್ರಶ್ನೆಗಳು ಮನಸ್ಸಿನಲ್ಲಿ ಎದ್ದು, ಅದಕ್ಕೆ ಉತ್ತರಗಳೇ ಸಿಗದಿದ್ರೂ, ಜನ ಹೇಗೆ ನಿರ್ಭಯ, ನಿಶ್ಚಿಂತೆಯಿಂದ ಜೀವನ ಮಾಡ್ತಾರೆ?"
ಮಗ: " "
ಅಪ್ಪ: "ಹೋಗ್ಲಿ ಬಿಡು. ನೀನೆಲ್ಲಿಗೋ ಹೊರಟಿದ್ದೆಯಲ್ಲಾ, ತಯ್ಯಾರಾಗು. ನನಗಂತೂ ಮಾಡ್ಲಿಕ್ಕೊಂದಿಷ್ಟು ಕೂಡ ಕೆಲಸ ಇಲ್ಲ, ಕಾಲ ಕಳಿಯೊದಿಕ್ಕೆ ಹೀಗೇ ಎನೇನೋ ಕೇಳ್ತಿರ್ತಿನಿ ಅಷ್ಟೆ."
ಮಗ: "ಸರಿ."
ಅಪ್ಪ: " 'ನಂಬಿಕೆ' ಅಂತ ಒಂದು ಇರದಿದ್ದರೆ ಈ ಜಗತ್ತಿನ ಕತೆ ಏನಾಗ್ತಿತ್ತೋ!"
9 comments:
ಇದೊಂತರಾ ವಿಚಿತ್ರ ತರ್ಕ ನಂಗೂ ಯಾಕೊ ಯೋಚಿಸಿ ತಲೆ ಕೆಟ್ಟು ಹೋಯ್ತು...
ಅನಂತ,
ಮೊದಮೊದಲು ಓದ್ತಾ ಓದ್ತಾ ಏನೂ ಗೊತ್ತಾಗಲಿಲ್ಲ.
ಆ ನಂತರ ಎಲ್ಲವೂ ಗೊತ್ತಾಗಿಹೊಯ್ತು.
ಹೌದಲ್ವಾ ಅನಿಸ್ತು. ಚೆನ್ನಾಗಿದೆ.
@ಅರುಣ್,
:D
@ಸೀಮಾ,
ಧನ್ಯವಾದಗಳು.. :)
ಅನಂತ ಅವರೇ,
ಕೊನೆಯಲ್ಲಿ ಹೇಳಿದಂತೆ ನಂಬಿಕೆ ಎನ್ನೋದೇ ಜಗತ್ತಿನಲ್ಲಿ ಇಲ್ಲದೇ ಹೋಗಿದ್ದರೆ ಜಗತ್ತೇ ಇರುತ್ತಿರಲಿಲ್ಲ, ಸಂಬಂಧ...ಇತ್ಯಾದಿ ಯಾವುದೂ ಇರುತ್ತಿರಲಿಲ್ಲ.
ತರ್ಕ ಚೆನ್ನಾಗಿದೆ.
ನಾವಡ
@ನಾವಡ,
ಧನ್ಯವಾದಗಳು.. ;)
ತಲೆಕೊರೆಯುವ ತರ್ಕ. ಚೆನ್ನಾಗಿದೆ. ಜಗತ್ತು ನಿಂತಿರುವಿದೇ ಭೂಮಿ ಗುಂಡಗಿದೆ ಎನ್ನುವ ನಂಬಿಕೆಯ ಮೇಲೆಯೇ.
@ತೇಜಸ್ವಿನಿ,
ಹೌದು.. ;) ಧನ್ಯವಾದಗಳು..
ನಮಸ್ಕಾರ..
ತರ್ಕ ಅರ್ಥವಾಯಿತ ಬಿಟ್ಟಿತಾ ಎನ್ನುವುದು ಎರಡನೇ ಪ್ರಶ್ನೆ, ನಿಮ್ಮ ಬ್ಲಾಗ್ ಇಷ್ಟವಾಯಿತು ಕಣ್ರೀ..
ಮೂರನೇ ಕ್ಲಾಸಿನ ಹುಡುಗನ rough book ಅಂತೂ ಖಂಡಿತ ಅಲ್ಲ. ಒಂದು ವೇಳೆ ನೀವು ಹಾಗೆಂದುಕೊಂಡರೂ, ಆ ಎಳೆಯ ಮುಗುವಿನ, ಚಿತ್ತೂ,ಕಾಟೂ ನೀಲಿಮಸಿಯ ಚಿತ್ರಗಳೂ, ಪೆನ್ಸಿಲಿನಿಂದ ಬಿಡಿಸುವ ದೃಶ್ಯಕಾವ್ಯ ಎಷ್ಟು ಸುಂದರ ಅಲ್ಲವೇ? ನೋಡುವ ಕಣ್ಣಿಗೆ ರಸಾನುಭವ ಶಕ್ತಿ ಇದ್ದರೆ ಈ ಜಗತ್ತೇ ಸುಂದರ ಎಂದು ತೇಜಸ್ವಿ ಎಲ್ಲಿಯೋ ಹೇಳಿದ ನೆನಪು.
ಧನ್ಯವಾದಗಳು.
ಜೋಮನ್ ವರ್ಗೀಸ್.
@ಜೋಮನ್,
ಧನ್ಯವಾದಗಳು ಮೆಚ್ಚಿಕೊಂಡಿದ್ದಕ್ಕೆ. :D ಬರ್ತಾ ಇರಿ ಈ ಕಡೆ.. ;)
Post a Comment