Saturday, October 25, 2014

ಅಸಹಾಯಕತೆ

ತುಂಬಾ ತುಂಬಾ ವರ್ಷಗಳ ಹಿಂದೆ ಯಾವುದೊ ಮ್ಯಾಗಜಿನ್ ಅಲ್ಲಿ ಓದಿದ್ದ ಒಂದು ಕತೆಯ ಅತಿ ಅಸ್ಪಷ್ಟ ನೆನಪಿನ ಹಂದರ.

"ಇವನು ಮೆಲ್ಲನೆ ಬಿಯರ್ ಹೀರುತ್ತಾ ಪದೇ ಪದೇ ವಾಚ್ ನೋಡಿಕೊಳ್ಳುತ್ತಿದ್ದ. ಇವತ್ತು ಅವನು ಇಲ್ಲಿಗೆ ಬಂದೇ ಬರುತ್ತಾನೆಂಬ ಸುದ್ದಿ ಬಂದಿತ್ತು. ಎದೆಯೊಳಗೆ ದ್ವೇಷದ ಬೆಂಕಿ ಹತ್ತಿ ಉರಿಯುತಿತ್ತು. ಜೇಬಿನಲ್ಲಿ ಪಿಸ್ತೂಲ್ ಇದ್ದಿದ್ದನ್ನು ಮೇಲಿಂದಲೇ ಮುಟ್ಟಿ ಮತ್ತೊಮ್ಮೆ ಖಾತರಿ ಪಡಿಸಿಕೊಂಡ. ಇವತ್ತು ಅವನನ್ನು ಮುಗಿಸಲೇ ಬೇಕು ಎನ್ನುವ ಹುಚ್ಚು ಧೈರ್ಯ ನಶೆಯ ಜೊತೆಗೆ ಹೆಚ್ಚಾಗುತಿತ್ತು. ಸುಮಾರು ಸಮಯದ ನಂತರ ಹುಡುಗಿಯರ ಜೊತೆ ಲಲ್ಲೆ ಹೊಡೆಯುತ್ತ ಅವನು ಬಂದ. ಪಕ್ಕದ ಟೇಬಲ್.ಅಲ್ಲಿ ಕುಳಿತ ಅವನ ಕೇಕೆ, ನಗು ಇವನನ್ನು ಇನ್ನಷ್ಟು ಕೆರಳಿಸಿತು. ಸೇದುತಿದ್ದ ಸಿಗರೇಟನ್ನು ಒಗೆದವನೆ ಡಮ್ ಡಮ್ ಡಮಾರ್ ಎಂದು ಒಂದರ ಹಿಂದೆ ಒಂದರಂತೆ ಬುಲ್ಲೆಟ್ಗಳನ್ನು ಅವನ ದೇಹದೊಳಗೆ ತೂರಿಸಿಯೇ ಬಿಟ್ಟ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವನ ದೇಹ, ಸುತ್ತ ಇದ್ದ ಹುಡುಗಿಯರ ಚೀರಾಟ, ಉಳಿದವರೆಲ್ಲಾ ಏನಾಯಿತು ಎಂದು ಯೋಚಿಸುವ ಮೊದಲೇ  ಇವನು ಹೊರಗೋಡಿದ. ಒಂದೇ ಒದೆತಕ್ಕೆ ಬೈಕ್ ಶುರು ಮಾಡಿದವನೇ ಶರವೇಗದಲ್ಲಿ ಪಕ್ಕದ ಬೆಟ್ಟದೆಡೆಗೆ ನುಗ್ಗಿಸಿದ. ಸ್ವಲ್ಪ ಸಮಯದಲ್ಲೇ  ಬೆಟ್ಟದ ತುದಿಯನ್ನು ತಲುಪಿದವನೇ ದೂರದಲ್ಲಿ ಕಾಣುತ್ತಿದ್ದ ಬಾರನ್ನೇ ದಿಟ್ಟಿಸುತ್ತ ಮುಂದಿನ ಬೆಳವಣಿಗೆಗಳನ್ನು ನಿರೀಕ್ಷಿಸುತ್ತಾ ನಿಂತ. ಇಷ್ಟರಲ್ಲಾಗಲೇ ಪೊಲೀಸರಿಗೂ ಸುದ್ದಿ ಮುಟ್ಟಿರುತ್ತದೆ. ಕೆಲವೇ ನಿಮಿಷಗಳಲ್ಲಿ ಅವರು ಬರುತ್ತಾರೆ, ನನ್ನನ್ನು ಹುಡುಕಲು ಶುರು ಮಾಡುತ್ತಾರೆ, ಭಯ ಖುಷಿ ಮಿಶ್ರಿತ ವಿಚಿತ್ರ ತಲ್ಲಣ ಅವನದು. ಅರ್ಧ ಗಂಟೆ, ಒಂದು ಗಂಟೆ ಕಳೆದರೂ ಬಾರಿನ ಮುಂದೆ ಯಾವುದೇ ಬೆಳವಣಿಗೆ ಕಾಣಲಿಲ್ಲ. ಹೊತ್ತು ಕಳೆದಂತೆ ಮೆಲ್ಲನೆ ಜನ ಖಾಲಿಯಾದರು. ಬಾಗಿಲು ಮುಚ್ಚುವ ಸಮಯವಾಗಿ ಬಾರಿನ ದೀಪಗಳೂ ಆರಿದವು. ಇವನಿಗೆ ಕುಳಿತಲ್ಲಿಯೇ ನೆಲ ಕುಸಿದಂತಾಯಿತು. ಛೇ ಈ ಬಾರಿಯೂ ಅವಕಾಶ ಕೈ ತಪ್ಪಿ ಹೋಯಿತು. ರಿವಾಲ್ವರ್ ತೆಗೆದು ನೋಡಿದಾಗ ಅದರಲ್ಲಿದ್ದ ಎಲ್ಲಾ ಬುಲೆಟ್ಗಳು ಇವನನ್ನ ಅಣಕಿಸುತ್ತಿವೆ ಅನ್ನಿಸಿತು. ಊರಿನಿಂದೆಲ್ಲೊ ಸಣ್ಣದಾಗಿ ತೇಲಿ ಬಂದ ನಗು ಕೇಕೆ ಕೇಳಿ ಇವನಿಗೆ  ಇನ್ನಷ್ಟು ಪಿಚ್ಚೆನ್ನಿಸಿತು. ಮುಂದಿನ ಬಾರಿ ಅವನನ್ನು ಖಂಡಿತ  ಬಿಡುವುದಿಲ್ಲ, ಮುಗಿಸಿಯೇ ಮುಗಿಸುತ್ತೇನೆ ಎಂದು ಮತ್ತೊಮ್ಮೆ ಶಪಥಗೈದು ಊರಿನೆಡೆಗೆ ಹೊರಟ."

2 comments:

sharan said...

Confused kano naanu

Unknown said...

Reminds me of a suspense story.. Is there a continuation of the series? :D