ಅದು ಸ್ವರ್ಗದ ನ್ಯಾಯ ಸಭೆ. ಅದೆಷ್ಟೋ ವರ್ಷಗಳು ಕಾದ ನಂತರ ಇವತ್ತು ಆ ಗುಬ್ಬಿಯ ಅವಕಾಶ ಬಂದಿತ್ತು.
ನ್ಯಾಯಾಧೀಶ: ಸರಿ, ಏನು ನಿನ್ನ ಸಮಸ್ಯೆ?
ಗುಬ್ಬಿ: ಮಹಾಸ್ವಾಮಿ, ನಾನು ನನ್ನ ಪಾಡಿಗೆ ನನ್ನ ಗೂಡಿನಲ್ಲಿದ್ದೆ. ಅದೊಂದು ದಿನ ಅಗೋ, ಅಲ್ಲಿದ್ದಾರಲ್ಲಾ ಆ ಕೆಂಪು ಬಣ್ಣದ ಬಟ್ಟೆಯ ಸೈನಿಕರು ಯಾರೊಂದಿಗೂ ಕಾದಾಡುತ್ತಾ ಅಲ್ಲಿಗೆ ಬಂದರು. ಅದರಲ್ಲೊಬ್ಬ ಹೊಡೆದ ಬಾಣಕ್ಕೆ ನನ್ನ ಗೂಡು ಕೆಳಗಡೆ ಬಿದ್ದು ನಾನು ಮತ್ತು ನನ್ನ ಮರಿಗಳೆಲ್ಲ ಇವರ ಕಾಲ್ತುಳಿತಕ್ಕೆ ಸಿಲುಕಿ ಸತ್ತು ಹೋದೆವು. ದಯಮಾಡಿ ಇದಕ್ಕೆ ಕಾರಣರಾದವರಿಗೆ ಶಿಕ್ಷೆ ಕೊಡಬೇಕಾಗಿ ವಿನಂತಿ.
ಸೈನಿಕರು: ಸ್ವಾಮಿ, ಇದರಲ್ಲಿ ನಮ್ಮದೇನು ತಪ್ಪು? ನಾವು ರಾಜನ ಆಜ್ಞೆಯಂತೆ ನಡೆಯುವವರು. ನಾವು ರಾಮನಿಗೆ ಬೆಂಗಾವಲಾಗಿ ಬಂದವರು.
ರಾಮ: ನೋಡಿ ಸ್ವಾಮಿ ನಾನು ನನ್ನ ಹೆಂಡತಿಯನ್ನು ರಕ್ಷಿಸುವುದಕ್ಕಾಗಿ ಬಂದದ್ದು. ಅದಕ್ಕಾಗಿ ಯುದ್ಧ ಮಾಡಿದ್ದು ತಪ್ಪೇ?
ಸೀತೆ: ಛೇ! ಈ ಯುದ್ಧ ಶುರುವಾಗಿದ್ದು ನನ್ನಿಂದಾಗಿ. ನಾನು ಅವತ್ತು ಲಕ್ಷ್ಮಣನ ಮಾತು ಕೇಳಬೇಕಾಗಿತ್ತು. ಆದರೆ ಆ ಮಾರೀಚ ಬಂಗಾರದ ಜಿಂಕೆಯಂತೆ ವೇಷ ತೊಟ್ಟು ನನಗೆ ಮೋಸ ಮಾಡಿದ. ಅವನದೇ ತಪ್ಪು.
ಮಾರೀಚ: ನೋಡಿ, ನನ್ನ ಪಾಡಿಗೆ ನಾನು ಯಾವುದೋ ಕಾಡಿನಲ್ಲಿದ್ದೆ. ರಾವಣ ಬಂದು ಕೇಳಿಕೊಂಡಿದ್ದಕ್ಕೆ ನಾನು ಹಾಗೆ ಬಂದದ್ದು.
ರಾವಣ: ಹಹ್. ನಾನು ನಿನ್ನ ಸಹಕಾರ ಕೇಳಿದ್ದು ಸೀತೆಯನ್ನು ಹೊತ್ತೊಯ್ಯಲು. ಆದರೆ ನನಗೇನು ಕಂಡ ಕಂಡ ಸ್ತ್ರೀಯರನ್ನು ಮೋಹಿಸುವ ಆಸೆಯಿಲ್ಲ. ನನ್ನ ತಂಗಿ ಬಂದು ಗೋಳೋ ಎಂದು ಅತ್ತಿದ್ದಕ್ಕೆ ನಾನು ಪ್ರತಿಕಾರಕ್ಕೆ ಹೊರಡಬೇಕಾಯಿತು.
ಶೂರ್ಪನಖಿ: ಮತ್ತಿನ್ನೇನು? ಪ್ರೇಮವನ್ನರಸಿ ಹೋಗಿದ್ದು ನನ್ನ ತಪ್ಪೆ? ಅಷ್ಟಕ್ಕೆ ನನ್ನ ಮೂಗನ್ನೆ ಕತ್ತರಿಸಿ ಹಾಕಿದ ಆ ಲಕ್ಷ್ಮಣ. ಪಾಪಿ.
ಲಕ್ಷ್ಮಣ: ನಾನು ನನ್ನ ಅಣ್ಣನ ಬಂಟ. ಆತನಿಗೆ ತೊಂದರೆ ಕೊಟ್ಟವರನ್ನು ಎಂದಿಗೂ ಸುಮ್ಮನೆ ಬಿಡಲಾರೆ.
ರಾಮ: ಅಯ್ಯೋ! ಸಾಕು ಮಾಡಿ. ನಾವು ಕಾಡಿಗೆ ಕಾಲಿಟ್ಟಿದ್ದಕ್ಕಾಗಿ ಇಷ್ಟೆಲ್ಲಾ ರಾದ್ಧಾಂತ. ಅಪ್ಪಾಜಿ, ಅಪ್ಪಾಜಿ, ಅದೆಂತಾ ಸಂಕಷ್ಟಕ್ಕೆ ಸಿಲುಕಿಸಿ ಬಿಟ್ಟೆ ನಮ್ಮನ್ನು.
ದಶರಥ: ನಿಜ ತಪ್ಪು ನನ್ನದೆ. ವಯಸ್ಸಿನಲ್ಲಿ ಯೋಚಿಸದೆ ಕೈಕೇಯಿಗೆ ಮಾತು ಕೊಟ್ಟು ಮೋಸ ಹೋದೆ. ಆದರೆ ಸ್ವಂತ ಮಗನಂತಿದ್ದ ರಾಮನಿಗೆ ವನವಾಸ ಬಯಸಿದ್ದು ಕೈಕೇಯಿಯ ಕ್ರೂರತನ.
ಕೈಕೇಯಿ: ಅಯ್ಯೋ.. ರಾಮನಿಗೆ ಕೇಡು ಬಯಸುವ ಯಾವ ಯೋಚನೆಯೂ ನನಗಿರಲಿಲ್ಲ. ಅದು ಯಾವ ಗಳಿಗೆಯಲ್ಲಿ ಮಂಥರೆ ನನ್ನ ತಲೆಯಲ್ಲಿ ವಿಷಬೀಜ ಬಿತ್ತಿದಳೋ..
ಮಂಥರೆ: ನಾನು ಹಾಗೆ ಮಾಡಿದ್ದು ನನಗಾಗಿ ಅಲ್ಲ, ನನ್ನ ಮುದ್ದು ಭರತನ ಒಳಿತಿಗಾಗಿ.
ಅಶ್ವಪತಿ: ಇಲ್ಲ, ತಪ್ಪು ನನ್ನದೆ. ಈ ಮಂಥರೆಯನ್ನು ನನ್ನ ಮಗಳ ಜೊತೆಗೆ ಕಳುಹಿಸಿ ತಪ್ಪು ಮಾಡಿದೆ. ಇವಳ ಬುದ್ದಿಯ ಬಗ್ಗೆ ತಿಳಿದಿದ್ದ ನನ್ನ ಹೆಂಡತಿಯಾದರು ನನ್ನನ್ನೊಮ್ಮೆ ಎಚ್ಚರಿಸಬೇಕಾಗಿತ್ತು.
.
.
ಹೀಗೇ ದೋಷಾರೋಪಣೆ ಮುಂದುವರೆಯಿತು.
ದಿನಗಳು ಕಳೆದವು.
ತಿಂಗಳುಗಳು ಕಳೆದವು.
ಸ್ವರ್ಗದಲ್ಲಿ ಸಮಯಕ್ಕೇನು ಬರ?
ಹಲವು ವರ್ಷಗಳ ನಂತರ
ಯಾರೊ ಒಬ್ಬ ಆದಿಮಾನವ: ಉ ಊಊ ಆ ಆ ಎಂದು ತನ್ನದೇ ಭಾಷೆಯಲ್ಲಿ ಏನೋ ಹೇಳುತಿದ್ದ.
ಇನ್ನೊಬ್ಬ ಆದಿ ಮಾನವ: ಅದಕ್ಕೆ ಪ್ರತಿಯಾಗಿ ಕುಣಿಯುತ್ತಾ, ಜೋರಾಗಿ ಎದೆ ಬಡಿದುಕೊಳ್ಳುತ್ತಾ ಮತ್ತೆ ಯಾರ ಕಡೆಗೋ ಕೈ ತೋರಿಸುತ್ತಿದ್ದ.
.
.
ಗುಬ್ಬಿ ಬಿಟ್ಟ ಕಣ್ಣುಗಳಿಂದ ನೋಡುತ್ತಾ ಮೌನವಾಗಿ ಕುಳಿತಿತ್ತು.