Monday, September 22, 2008

ಹೀಗೊಂದು ಹುಚ್ಚು ಪ್ರಯೋಗ..

ಈ ಪ್ರಯೋಗದಿಂದ ಆದ ಪ್ರಯೋಜನಗಳಿಗಿಂತ ಕಷ್ಟಗಳೇ ಜಾಸ್ತಿ, ಬೇರೆಯವರಿಗೆ. ಅದೆಲ್ಲರ ಜೊತೆಗೆ ಇದನ್ನು ಓದಿ ನಿಮ್ಮ ೫ ನಿಮಿಷ ಹಾಳುಮಾಡುವ ಈ ಇನ್ನೊಂದು ಕಷ್ಟವನ್ನೂ ಕೊಡುತ್ತಿದ್ದೇನೆ, ಸಂಪೂರ್ಣ ಉಚಿತವಾಗಿ.

ಅಂದಹಾಗೆ ಇದೇನೂ ಅಸಾಧಾರಣ, ಯಾರೂ ಮಾಡೇ ಇರದಂತಹ ಕೆಲಸವೇನಲ್ಲ. ನಮ್ಮ ದೇಶದಲ್ಲೇ ಸರಿಸುಮಾರು ೮೪ ಕೋಟಿ ಜನ ಇದನ್ನು ನಡೆಸಿದಾರೆ ಮತ್ತು ನಡೆಸ್ಕೊಂಡು ಹೋಗ್ತಾನೇ ಇದ್ದಾರೆ. ನಾನು ಮಾಡಿದ್ದೂ ಅದನ್ನೇ, ಅಂದ್ರೆ ಮೊಬೈಲ್ ಬಳಸದೇ ಇರುವುದು.

ಕಳೆದ ಎರಡೂ ಮುಕ್ಕಾಲು ತಿಂಗಳಿಂದ ನಾನು ನನ್ನ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಇಟ್ಟಿದ್ದೇನೆ. ಇದಕ್ಕೆ ಕಾರಣಗಳೆರಡು, ಒಂದು ಹೀಗೇ ಸುಮ್ನೆ, ಇನ್ನೊಂದು ಈ ಸಮಯದಲ್ಲಿ ನಾನು ಹಂಚಿಕೊಳ್ಳಲಾಗದಂತಹದ್ದು. ಮುಂದೊಂದು ದಿವಸ ಖಂಡಿತ ಹೇಳ್ತೀನಿ.

ಈ ದಿನಗಳಲ್ಲಿ ಹಾಗೂ ಅದರ ಆಸುಪಾಸಿನಲ್ಲಿ ಆದ ಕೆಲವೊಂದು ವಿಷಯಗಳು ಇಲ್ಲಿವೆ.

~*~
ಅಪ್ಪ ಅಮ್ಮ ಬೆಂಗಳೂರಿಗೆ ಬಂದಿದ್ದರು, ಸಂಬಂಧಿಕರ ಗೃಹಪ್ರವೇಶಕ್ಕೆ.
'ಅಪ್ಪ, ನಾನು ಮೂರು ತಿಂಗಳು ಮೊಬೈಲು ಆಫ್ ಮಾಡಿ ಇಡೋಣ ಅಂತಿದೀನಿ.'
"ಆಯ್ತು. ಮೊಬೈಲ್ ಬಳಸದೇ ಇರಬಹುದು. ಆದರೆ ನಿನ್ನನ್ನು ಸಂಪರ್ಕಿಸುವುದು ಹೇಗೆ? ಇನ್‍ಕಮ್ಮಿಂಗ್ ಅಷ್ಟೆ ಬರೋಹಾಗೆ ಮಾಡಿಡುವುದಕ್ಕೆ ಆಗಲ್ವ?" (ನಾನು ಬೆಂಗಳೂರಿನಲ್ಲಿ ಒಬ್ಬಂಟಿಗನಾಗಿ ವಾಸಿಸುವುದು)
'ಇನ್‍ಕಮ್ಮಿಂಗು ಔಟ್‍ಗೋಯಿಂಗು ಏನೂ ಬೇಡ ಅಪ್ಪ. ಪತ್ರ ಹಾಕ್ತಿರ್ತೀನಿ.'
"ಸರಿ."
ಈ ದಿನಗಳಲ್ಲಿ ನಾನು ಹಾಕಿದ ಪತ್ರಗಳು ೨. ಮನೆಯಿಂದ ಬಂದ ಪತ್ರ ೧.
~*~
ಅಪ್ಪನಿಗೆ ಹೇಳಿದ ಮಾತನ್ನು ಅಮ್ಮನಿಗೂ ಹೇಳಿದೆ.
"ಯಾಕಪ್ಪ ನಿನಗೆ ಫೋನ್ ಮಾಡಿ ಅಷ್ಟೊಂದು ತೊಂದ್ರೆ ಕೊಡ್ತಿದಿವಾ? ಇನ್ನುಮುಂದೆ ಫೋನ್ ಮಾಡೋದು ಕಡಿಮೆ ಮಾಡ್ತೀವಂತೆ, ಆಫ್ ಮಾಡ್ಬೇಡ."
'ಅಯ್ಯೋ ಹಂಗೇನಿಲ್ಲಮ್ಮ. ಸುಮ್ನೆ ಹೀಗೇ ಆಫ್ ಮಾಡ್ತಿರೋದು.'
"ಬರೇ ಮನೆಗಷ್ಟೇ ಫೋನ್ ಇಲ್ವಾ ಅಥವಾ ಎಲ್ಲರಿಗೂ ಇಲ್ವಾ?"
'ಏನು ಹಂಗಂದ್ರೆ? ಇಡೀ ಪ್ರಪಂಚಕ್ಕೇ ಇಲ್ಲ ಆಯ್ತಾ?'
"ಬೇರೆ ಸಿಮ್ಮು ತೆಗೋತಿದಿಯಾ?"
'ಏನ್ ಅಮ್ಮಾ, ಇಲ್ಲ.'
ನನಗೆ ವಾರದಲ್ಲಿ ೩-೪ ಬಾರಿ ಮನೆಯಿಂದ ಕರೆಬರುತ್ತಿತ್ತು, ಆಫ್ ಮಾಡುವ ಮೊದಲು.
~*~
ಮೂರು ತಿಂಗಳವರೆಗೆ ಮೊಬೈಲ್ ಬಳಸುವುದಿಲ್ಲ ಅಂತ ಆಫ್ ಮಾಡುವ ನಾಲ್ಕು ದಿವಸ ಮುಂಚೆನೇ ಒಂದು ಮೈಲು ಹಾಕಿದೆ. ಕರೆಗಳ ಮಹಾಪೂರನೇ ಹರಿದು ಬಂತು.
"ಲೋ ಹುಚ್ಚು ಹಿಡಿತಾ ನಿಂಗೆ? ನಿನ್ನೆ ಮೊನ್ನೆಯಲ್ಲಾ ಸರಿ ಇದ್ಯಲ್ಲಾ?"
"ಯಾಕೋ ದೇವದಾಸ್, ಯಾರು ಕೈ ಕೊಟ್ರು ನಿಂಗೆ?"
"ಎನಾದ್ರೂ ಪ್ರಾಬ್ಲಮ್ ಇದ್ರೆ ಹೇಳೋ.. ಮನೆಯಲ್ಲೇನಾದ್ರೂ ತೊಂದರೇನಾ?"
"ಆಫೀಸ್ ಅಲ್ಲಿ ಆದ್ರೆ ಚಾಟ್, ಮೈಲ್ ಅಂತ ಹೇಗೋ ಸಿಕ್ತೀಯಾ, ಆದ್ರೆ ವೀಕೆಂಡ್ ಹ್ಯಾಗೆ ನಿನ್ನ ಕಾಂಟಾಕ್ಟ್ ಮಾಡೋದು?"
"ಏನಪ್ಪಾ ಮೊಬೈಲ್ ಖರ್ಚು ಉಳಿಸೋ ಪ್ಲ್ಯಾನಾ? ಲೊ ಜುಗ್ಗಾ ಆನ್ ಮಾಡೋ."
ಎಲ್ಲರಿಗೂ ಸಮಜಾಯಿಷಿ ಕೋಡುವಷ್ಟೊತ್ತಿಗೆ ನನಗೆ ಸಾಕುಸಾಕಾಗಿ ಹೋಗಿತ್ತು.
~*~
ನಾನು ಆಫ್ ಮಾಡಿದಮೇಲೆ ಗೊತ್ತಾದ ಸ್ನೇಹಿತರು ಎಲ್ಲಾ ಮೇಲಿನ ಪ್ರಶ್ನೆಗಳನ್ನು ಪುನರಾವರ್ತಿಸಿದ್ರು. ವಾರಕ್ಕೊಮ್ಮೆ ಸಿಗುವ ಸ್ನೇಹಿತರೂ, ದಿನವೂ ಸಿಗುವ ಆಫೀಸಿನ ಗೆಳೆಯರಿಂದ ಅರ್ಧ ಮುಕ್ಕಾಲು ಘಂಟೆಯ interview ಗಳೂ ನಡೆದವೂ, ಇಲ್ಲದ ವಿಷಯವನ್ನು ಬಾಯಿ ಬಿಡಿಸೋಕೆ. ನಾನು ಕೊಟ್ಟ ಉತ್ತರಗಳು ಸಮಾಧಾನ ಕೊಡದಿದ್ದರೆ ಮರುದಿವಸ ಮತ್ತೆ ಶುರು.
~*~
ಈ ಅವಧಿಯಲ್ಲಿ ಒಂದ್ ಬಾರಿ ಮನೆಗೆ ಹೋಗಿದ್ದೆ. ನಮ್ಮದು ಅವಿಭಕ್ತ ಕುಟುಂಬ. ಒಮ್ಮೆ ಎಲ್ಲರೂ ಒಟ್ಟಿಗೆ ಕುಳಿತಿರಬೇಕಾದರೆ,
"ಅನಂತ ನಿಂಗೆ ಹೆಣ್ಣು ನೋಡೋಕೆ ಶುರು ಮಾಡೋಣ್ವಾ?"
'ನನಗಾ? ಈಗ್ಲೇ ಯಾಕೆ?'
"ಅಲ್ಲ ಈಗಿಂದ ಶುರು ಮಾಡಿದ್ರೆ ಎಲ್ಲಾ ಮುಗಿಯುವಷ್ಟರಲ್ಲಿ ಇನ್ನೂ ಎರಡು ವರ್ಷ ಆದ್ರೂ ಆಗುತ್ತೆ."
'ಹ್ಮ್, ಈಗ್ಲೇ ಹುಡುಕುವಂತದ್ದೇನೂ ಬೇಡ. ಮನೆಯಲ್ಲಿ ನನಗಿಂತ ದೊಡ್ಡೊರು ಇನ್ನೂ ೫-೬ ಜನ ಇದ್ದಾರೆ, ಅವ್ರಿಗ್ಯಾಕೆ ಹುಡ್ಕಲ್ಲಾ?'
"ಅವ್ರಿಗೂ ಹುಡ್ಕೋಣ. ಏನ್ಮಾಡೋದು, ಈಗಿನ ಕಾಲದಲ್ಲಿ ಒಳ್ಳೆ ಸಂಬಂಧ ಸಿಗೋದು ಕಷ್ಟ. ಅದಕ್ಕೇ. ಹೋಗ್ಲಿಬಿಡು, ಜಾಸ್ತಿ ಒತ್ತಾಯ ಮಾಡಲ್ಲ, ಈಗ ಮಾತಾಡೊದನ್ನ ನಿಲ್ಸಿದೀಯ, ಆಮೇಲೆ ಮನೆಗೆ ಬರೋದನ್ನೇ ನಿಲ್ಲಿಸಿ ಬಿಡ್ತೀಯಷ್ಟೆ"
ನನ್ನ ಅಕ್ಕನ ಮದುವೆಯಾಗಿ ಕೆಲವು ತಿಂಗಳಾಗಿದೆ ಅಷ್ಟೆ. ನಾನಿನ್ನೂ ೨೩ ವಯಸ್ಸಿನ ಹಸುಗೂಸು. ಈಗಿಂದೀಗೆ ಮದುವೆಯಾಗ ಬೇಕು, ಇಲ್ಲದಿದ್ದರೆ ಮುಂದೆ ಕಷ್ಟ ಅನ್ನುವ ವಯಸ್ಸೂ ಅಲ್ಲ. ಅಕ್ಕನ ಮದುವೆಯ ಸಮಯದಲ್ಲಿ ಇನ್ನು ೨-೩ ವರ್ಷದ ನಂತರ ನನ್ನ ಮದುವೆಯ ಬಗ್ಗೆ ಯೋಚನೆ ಮಾಡಿದರಾಯಿತು ಅಂತ ಎಲ್ಲಾ ಮಾತಾಡಿಕೊಂಡಿದ್ದರೂ ಕೂಡ. ಪಾಪ, ನನಗೆ ಗೊತ್ತು, ನನ್ನ ನಡುವಳಿಕೆಗಳು ಅವರ ಮನಸ್ಸಿನಲ್ಲಿ ಏನೇನು ಸಂಶಯ ಬಿತ್ತಿರಬಹುದು ಅಂತ.
~*~
ಈ ಸಮಯದಲ್ಲಿ ನನಗೆ ಸಿಕ್ಕ ಬಿರುದಾವಳಿಗಳು ಅನೇಕ. ಹುಚ್ಚ, ದೇವದಾಸ, ಸನ್ಯಾಸಿ, ಮಠಾಧಿಪತಿ, ಇನ್ನು ಏನೇನೋ..
~*~

ನನ್ನಲ್ಲುಂಟಾಗುವ ಭಾವನೆಗಳನ್ನೆಲ್ಲಾ ರಸವತ್ತಾಗಿ ಹಂಚಿಕೊಳ್ಳುವುದು ನನಗೆ ಬರುವುದಿಲ್ಲ. ಇಷ್ಟು ದಿನಗಳಲ್ಲಿ ನನಗನ್ನಿಸಿದ್ದನ್ನು ಹೇಳಬೇಕಂದರೆ, ನೆಮ್ಮದಿಯಾಗಿತ್ತು, ಖುಷಿಯಾಯ್ತು, ಅಷ್ಟೆ.

ಈ ಅಕ್ಟೋಬರ್ ನಾಲ್ಕನೇ ತಾರೀಖಿಗೆ ಮೊಬೈಲ್ ಬಳಸದೇ ಮೂರು ತಿಂಗಳಾಗುತ್ತೆ. ಎಲ್ಲರ ಕಷ್ಟ, ನನ್ನ ಸುಖಗಳನ್ನು ಗಣನೆಗೆ ತೆಗೆದುಕೊಂಡು ಮೊಬೈಲು ಬಳಸಬೇಕೋ ಇಲ್ಲವೋ ಅಂತ ಅವತ್ತು ನಿರ್ಧಾರ ಮಾಡ್ತೀನಿ. ಒಂದು ವೇಳೆ ಬಳಸಲು ಶುರುಮಾಡಿದರೂ ಅದು ತಾತ್ಕಾಲಿಕವಾಗಿ, ಕೆಲವು ದಿನಗಳೋ, ತಿಂಗಳುಗಳೋ, ವರ್ಷಗಳೋ ಅಷ್ಟೆ.

Monday, August 11, 2008

ಸೋಡಾ ಬಾಟಲ್ ಸ್ಪಿರಿಟ್



ನನ್ನ ತಂದೆ ಆವಾಗಾವಾಗ 'ನಮ್ಮದೆಲ್ಲಾ ಬರೇ ಸೋಡಾ ಬಾಟಲ್ ಸ್ಪಿರಿಟ್ ಇದ್ಹಂಗೆ' ಅಂತ ಹೇಳಿ ನಗ್ತಿರ್ತಾರೆ. ಈ ಮಾತು ಬೇರೆಯವರ ಬದುಕಿಗೆ ಒಪ್ಪುತ್ತೋ ಇಲ್ವೋ ಗೋತ್ತಿಲ್ಲ ಆದ್ರೆ ಇವು ೧೦೦% ನನಗೋಸ್ಲರ ಸ್ಪೆಷಲ್ ಆರ್ಡರ್ ಕೊಟ್ಟು ಮಾಡಿಸಿದಂತಹ ಶಬ್ದಗಳು ಅಂತ ಅನ್ಸುತ್ತೆ.

ನೀವು ಇತ್ತೀಚಿನ ದಿನಗಳಲ್ಲಿ ಅಲ್ಲದಿದ್ದರೂ ಚಿಕ್ಕವರಾಗಿದ್ದಾಗಲಾದ್ರೂ ಬಂಡಿಯವನು ಹಸಿರು ಸೋಡಾ ಬಾಟಲ್ ಅನ್ನು ಭುಜಕ್ಕೆ ಆನಿಸಿಕೊಂಡು ಬಲವಾಗಿ ಗೋಲಿಗುಂಡನ್ನು ಹಿಂದಕ್ಕೆ ತಳ್ಳಿ, ಬಂದೂಕಿನಿಂದ ಗುಂಡು ಹೊರಟಂತ ಶಬ್ದ ಬಂದಾಗ ನೀವು ಒಂದು ಕ್ಷಣ ನಡುಗಿ, ಅದರ ಬಾಯಿಂದ ಬರುತ್ತಿದ್ದ ಹೊಗೆಯನ್ನು ಮುಗ್ಧವಾಗಿ ನೋಡಿ, ಕುಡಿಯೋದಿಕ್ಕೆ ಬಾಟಲಿಯೆತ್ತಿದಾಗ ಅದರಿಂದ ಏನೂ ಬರದೆ, ಬೇರೆಯವರು ಕುಡಿಯೋದನ್ನ ಪಿಳಿಪಿಳಿ ಅಂತ ಕಣ್ಣು ಬಿಟ್ಕೊಂಡು ನೋಡಿ, ಕೊನೆಗೆ ಬಾಟಲ್ಲನ್ನು ಹೇಗೋ ತಿರುಗಿಸಿ, ಕುಡಿದು ಡರ್ರ್‌ರ್ರ್ ಎಂದು ಡೇಗು ಬಿಟ್ಟಿರ್ತೀರ.

ಸೋಡ ಬಾಟಲ್ ಓಪನ್ ಮಾಡಿದ ತಕ್ಷಣ ಆಯ್ತು ಇನ್ನು ನನ್ನ ಹಿಡಿಯುವವರೇ ಇಲ್ಲ ಅನ್ನುವಹಾಗೆ ಅರ್ಭಟ ಮಾಡುತ್ತಾ ಒಳಗಿರುವ ಗ್ಯಾಸು ಹೊರನುಗ್ಗುತ್ತೆ. ಆದರೆ ಇದರ ಅರ್ಭಟ ಪೌರುಷ ಎಲ್ಲಾ ಕೇವಲ ಕೆಲವು ಸೆಕಂಡುಗಳ ಕಾಲ ಅಷ್ಟೆ. ಆಮೆಲೇ ಅದಕ್ಕೂ ನೀರಿಗೂ ಯಾವುದೇ ವ್ಯತ್ಯಾಸವಿಲ್ಲ.

ಹಗಲುಗನಸು ಕಾಣುವುದರಲ್ಲಂತೂ ನಾನು ನಿಸ್ಸೀಮ. ಬೆಳಿಗ್ಗೆ ಎದ್ದು ಜಾಗಿಂಗ್ ಹೋಗುವುದು, ವ್ಯಾಯಾಮ ಮಾಡುವುದು, ನನಗಿಷ್ಟವಾದ ವಿಷಯವನ್ನ ಬುಡದವರೆಗೆ ಅರೆದು ಕುಡಿಯುವುದು, ಯಾವದೋ ರಮ್ಯ ಸ್ಥಳದಲ್ಲಿ ಒಬ್ಬನೇ ತಿರುಗಾಡೋದು, ಹಿಮಾಲಯದಲ್ಲೊಂದು ಮನೆ ಮಾಡೋದು, ಇನ್ನೊಬ್ಬರಿಗಾಗಿ ದೊಡ್ಡ ತ್ಯಾಗ ಮಾಡೋದು, ದೇಶಕ್ಕೆ ವಿಪತ್ತು ಬಂದಾಗ ನಾನೋಬ್ಬನೆ ಪ್ರಾಣ ಹೋಗೋ ತನಕ ಹೋರಾಡಿ ಕಾಪಾಡೋದು, ಹೀಗೆ ಒಂದಕ್ಕೊಂದು ಸಂಬಂಧವಿಲ್ಲದ, ಕೆಲವೊಂದಕ್ಕೆ ಅರ್ಥ ಕೂಡ ಇಲ್ಲದ ಕನಸುಗಳನ್ನ ಕಾಣ್ತಿರ್ತೀನಿ. ಕೆಲವೊಂದಂತೂ ನಿಜವಾಗಿಯೂ ನನಗೆ ನಿಜ ಜೀವನದಲ್ಲಿ ಮಾಡಬೇಕೆಂಬ ಆಸಕ್ತಿ ಕೂಡ ಇಲ್ಲ, ಆದರೆ ಹೇಗಿದ್ರೂ ಕನಸಲ್ವಾ, ಪುಕ್ಕಟೆಯಾಗಿ ಸಿಗ್ತಿದೆ ಅಂತ ಇದ್ದುಬದ್ದದ್ದೆಲ್ಲಾ ಕಾಣೋದು.

ನಾನು ಕಾಣುವ ಎಲ್ಲಾ ಕನಸುಗಳು ನನಸಾಗಿಲ್ಲ. ಅದಕ್ಕಿರುವ ಏಕೈಕ ಕಾರಣ ನನ್ನ ಸೋಮಾರಿತನ. ಹಾಗಂತ ನಾನು ಕಾಣೋದೆಲ್ಲಾ ಹಗಲುಗನಸಾಗಿಯೇ ಉಳಿದಿಲ್ಲ. ಕೆಲವೊಂದು ಸಮಯದಲ್ಲಿ, ಅದು ಯಾವ ಕಾರಣಕ್ಕಾಗಿ ಅಂತ ಇದುವರೆಗೂ ನನಗೆ ತಿಳಿದಿಲ್ಲ, ಕೆಲವೊಂದು ಕನಸುಗಳನ್ನ ಕಾರ್ಯರೂಪಕ್ಕೆ ತರಲಿಕ್ಕೆ ಪ್ರಯತ್ನ ಪಟ್ಟಿದೀನಿ. ನೋಡಿದವರಿಗೆ ಅಬ್ಬ ಮುಗಿತು ಇನ್ನು ಇವನ ಸೋಮಾರಿತನ ಎನ್ನೋದು ತೊಳೆದು ಕೊಚ್ಚಿ ಹೋಯ್ತು, ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡಬಲ್ಲ, ಇನ್ನು ಇವನನ್ನ ಹಿಡಿಯುವವರೆ ಇಲ್ಲ ಅಂತ ಭ್ರಮೆ ಪಡುವ ಮಟ್ಟಕ್ಕೆ. ಆದರೆ ಯಾವತ್ತೂ ಈ ನನ್ನ ಹುರುಪು ಕೆಲವು ದಿನಗಳಿಗಿಂತ ಜಾಸ್ತಿ ಉಳಿದಿಲ್ಲ. ಮತ್ತೆ ಅದೇ ರಾಗ ಅದೇ ತಾಳ.

ಹೀಗೆ ಯಾವಾಗಲಾದರೂ ನನ್ನ 'ದೃಢ' ನಿರ್ಧಾರಗಳನ್ನ ತಿಳಿಸಿದಾಗ ತಂದೆ ನಕ್ಕು ಹೇಳ್ತಿರ್ತಾರೆ, 'ನಮ್ದು ಸೋಡಾ ಬಾಟಲ್ ಸ್ಪಿರಿಟ್ ಇದ್ದ ಹಾಗೆ' ಅಂತ ಮತ್ತು ನಾನು ಯಾವತ್ತೂ ಅವರ ವಾಕ್ಯಗಳು ಸುಳ್ಳಾಗುವುದಕ್ಕೆ ಬಿಟ್ಟಿಲ್ಲ.

ಜೀವನದಲ್ಲಿ ಯಾವತ್ತಾದರೂ ಒಂದು ದಿನ ಇದನ್ನೆಲ್ಲಾ ದಾಟಿ ಮುಂದೆ ಹೋಗಬೇಕು, ಸೋಡಾ ಬಾಟಲ್‍ನಂತಾಗದೇ ಹರಿಯುವ ನದಿಯಂತಾಗಬೇಕು, ವಿಶಾಲ ಕಡಲಂತಾಗಬೇಕು, ನಿಶ್ಚಲ ಬೆಟ್ಟದಂತಾಗಬೇಕು, ಬೆಳಗುವ ಸೂರ್ಯನಂತಾಗಬೇಕು. ಹ್ಮ್, ಶುರುವಾಯ್ತು ನೋಡಿ ಇನ್ನೊಂದು ಹಗಲುಗನಸು, ಅಕಸ್ಮಾತ್ ಪ್ರಯತ್ನಪಟ್ಟರೂ ಇನ್ನೊಂದು, ಸೋಡಾ ಬಾಟಲ್.

Friday, April 4, 2008

ಅಪ್ಪ ನಕ್ಕ...

ಮನೆಗೆ ಹೋದಮೇಲೆ ಹುಡುಗ ಅಪ್ಪನ ಹತ್ರ ನಡೆದಿದ್ದೆಲ್ಲಾ ಹೇಳ್ದ.
ಅಪ್ಪ ನಕ್ಕ.

~*~*~
ಒಂದು ಹಳ್ಳಿ. ಅಲ್ಲೂ ಒಂದು ಶಾಲೆ. ಶಾಲೆ ಎಂದಮೇಲೆ ಬರೀ ಕಟ್ಟಡ ಅಷ್ಟೇ ಇರೊಕ್ಕಾಗುತ್ತಾ, ಮೇಷ್ಟ್ರು, ಮಕ್ಕಳು, ಅದು, ಇದು, ಅಂತ ಹೆಡ್ ಮಾಸ್ತರ್ ಇಂದ ಹಿಡಿದು ಬೋರ್ಡ್ ಅಳಿಸೋ ಡಸ್ಟರ್ ತನಕ ಎಲ್ಲವೂ ಇತ್ತು. ಸ್ಕೂಲ್ ಅಂದ ಮೇಲೆ ಮಾಡ್ಲಿಕ್ಕೆ ಇನ್ನೇನು ಕೆಲ್ಸ ಇರುತ್ತೆ, ಹೊತ್ತು ಕಳೀಲಿ ಅಂತ ಮೇಷ್ಟ್ರು ಪಾಠ ಮಾಡ್ತಿದ್ರು, ಮಕ್ಕಳೂ ಎದುರಿಗೆ ಕೂತಿದ್ರು, ಕೇಳಿಸ್ಕೊತಿದ್ರೋ ಇಲ್ವೋ ಅನ್ನೋದು ಬೇರೆ ವಿಷಯ.

ಸರಿ ಇನ್ನೇನು ಹುಡುಗರು ನಿದ್ರಾಲೋಕಕ್ಕೆ ಹೊಗ್ತಿದ್ರೇನೋ ಅಷ್ಟರಲ್ಲೇ ಯಾವ್ದೋ ಊರಿಂದ ಸ್ಕೂಲ್ ಕಡೆ ಇನ್‍ಸ್ಪೆಕ್ಟರ್ ಸವಾರಿ ಬಂತು. ತಾವೂ ಎಚ್ಚರ ಆಗೋದಲ್ದೆ ಮೇಷ್ಟ್ರು ಹುಡುಗ್ರನ್ನೆಲ್ಲಾ ಎದ್ದೇಳಿಸಿದ್ರು. ಇನ್‍ಸ್ಪೆಕ್ಟರ್ ದು ಉಪಹಾರ, ಪಾನೀಯ, ವಿಶ್ರಾಂತಿ ಎಲ್ಲಾ ಮುಗಿತು. ಕ್ಲಾಸ್ ಕಡೆ ಬಂದ್ರು. ಆ ಸ್ಕೂಲಲ್ಲೇನು ಇನ್‍ಸ್ಪೆಕ್ಶನ್ ಇದ್ದಿಲ್ಲ, ಆದ್ರೆ ಗತ್ತು ತೋರಿಸುವುದಕ್ಕೆ,

"ಮಕ್ಕಳೇ ನಿಮ್ಮ ತಿಳುವಳಿಕೆ ಎಷ್ಟಿದೆ ಅಂತ ಪರೀಕ್ಷೆ ಮಾಡ್ತಿನಿ. ನಾನು ಕೇಳೋ ಪ್ರಶ್ನೆಗೆ ಯಾರು ಒಳ್ಳೇ ಉತ್ತರ ಕೊಡ್ತಿರೋ ನೋಡೋಣ."
"ಮಾನವನ ಅತ್ಯದ್ಭುತ ಸೃಷ್ಟಿ ಯಾವುದು?"
ಅಂತ ಹುಡುಗ್ರನ್ನ ಪ್ರಶ್ನೆ ಕೇಳೋಕ್ಕೆ ಶುರು ಮಾಡಿದ್ರು. ಇವರು ಕೇಳೋದು ಇಂತಹ ಪ್ರಶ್ನೆನೇ, ಯಾಕಂದ್ರೆ ಅದಕ್ಕೆಲ್ಲಾ ನಿರ್ದಿಷ್ಟ ಉತ್ತರ ಇರೊಲ್ಲ. ಮಕ್ಕಳು ಹೇಳಿದ್ರಲ್ಲಿ ಒಂದು ಆರಿಸಿ ಕರೆಕ್ಟು ಅಂದ್ರೆ ಮುಗಿದ್ಹೋಯ್ತು. ಇಲ್ಲದ ತಲೆ ಓಡಿಸೋ ಪ್ರಮೇಯನೇ ಬರಲ್ಲ.
ಎಷ್ಟೋಂದು ಹುಡುಗ್ರು ಕೈ ಎತ್ತಿದ್ರು. ಸರಿ ಇವ್ರೂ ಒಬ್ಬೊಬ್ರನ್ನೇ ಕೇಳ್ತಾ ಬಂದ್ರು.
"ವಿಮಾನ ಸರ್" ಅಂದ ಒಬ್ಬ.
"ಸ್ಯಾಟಲೈಟ್" ಅಂದ ಇನ್ನೊಂದ್ ಹುಡ್ಗ.
ಉತ್ತರ ಹೇಳಿದವ್ರಿಗೆಲ್ಲಾ 'ಗುಡ್ ಗುಡ್' ಅಂತ ಹೇಳಿ ಕೂಡಿಸಿದ್ರು ಇನ್‍ಸ್ಪೆಕ್ಟರ್ರು.
ಹಂಗೆ ಕಂಪ್ಯೂಟರ್,ಮೊಬೈಲ್,ರೋಬಟ್,ಟೆಲಿಸ್ಕೋಪ್,ಟಿವಿ ಅದು ಇದು ಅಂತ ಗೊತಿದ್ದೆಲ್ಲಾ ಹೇಳಿದ್ರು. ಇನ್‍ಸ್ಪೆಕ್ಟರ್ ಗುಡ್ ಅಂದ ತಕ್ಷಣ ಹುಡುಗ್ರಿಗೆ ಖುಶಿ. ಇವತ್ತು ಮನೆಗೆ ಹೋಗಿ ಹೇಳ್ಬೇಕಲ್ಲಾ, "ಇನ್‍ಸ್ಪೆಕ್ಟರ್ ಹತ್ರ ಶಹಭಾಸ್ ತೊಗೊಂಡೆ" ಅಂತ, ಅದಕ್ಕೆ. ಮೇಷ್ಟ್ರಿಗೂ ಒಳಒಳಗೆ ಸಂತೋಷ, ಹುಡುಗರ ಬುದ್ಧಿವಂತಿಕೆ ನೋಡಿ. ಇನ್‍ಸ್ಪೆಕ್ಟರ್ ಹಿಂಗೆ ಕಣ್ಣಾಡಿಸಿದ್ರು. ಉತ್ತರ ಹೇಳಿದವರೆಲ್ಲಾ ಇನ್ನೊಂದು ಸರ್ತೆ ಹೇಳೊಕ್ಕೆ ಕೈ ಎತ್ತಿದ್ದ್ರು. "ಸಾ ಸಾ, ನಾನು ಸಾ" ಅಂತ ಗಲಾಟೆ ಬೇರೆ. ಅಚಾನಕ್ಕಾಗಿ ಇವರ ಕಣ್ಣು ಕೊನೇ ಬೆಂಚಲ್ಲಿ ಕೂತಿದ್ದ ಹುಡುಗನ ಮೇಲೆ ಬಿತ್ತು. ಅವ್ನು ಎಲ್ಲರೂ ಹೇಳೋದನ್ನ ಗಮನ ಇಟ್ಟು ಕೇಳ್ತಿದ್ದ. ಆದ್ರೆ ಉತ್ತರ ಹೇಳೋಕೆ ಕೈ ಎತ್ತಿರ್ಲಿಲ್ಲ. ಇಂತಹ ಮಕೇಡಿಗಳನ್ನ ಕೇಳಿದ್ರೆ, ಕೊನೇಪಕ್ಷ ಮೇಷ್ಟ್ರನ್ನ ಬೈಯೊಕ್ಕೆ ಅವಕಾಶ ಸಿಗುತ್ತೆ ಅಂತ ಅನ್ಕೊಂಡು,
"ಏ ಲಾಸ್ಟ್ ಬೆಂಚು, ನೀನೇ, ಎದ್ದೇಳು ಉತ್ತರ ಹೇಳು" ಅಂದ್ರು.
ಆ ಹುಡುಗ ಧೈರ್ಯದಿಂದನೇ ಎದ್ದು ನಿಂತ. ಮುಖದಲ್ಲಿ ಒಂದು ಮಂದಹಾಸ ಇತ್ತು.
ಸ್ವಲ್ಪ ಮೆಲ್ಲಗೇನೇ "ದೇವರು.." ಅಂದ.
ಇನ್‍ಸ್ಪೆಕ್ಟರ್‍ಗೆ ಸರಿಯಾಗಿ ಕೇಳ್ಲಿಲ್ಲ, "ಹಾ..?" ಅಂದ್ರು.
ಈ ಸರ್ತಿ ಗಟ್ಟಿಯಾಗೇ ಆ ಹುಡ್ಗ "ದೇವ್ರು.." ಅಂದ.
ಇನ್‍ಸ್ಪೆಕ್ಟರ್‍ಗೆ ಸಿಟ್ಟು ಬಂತು. "ಖೋಡಿ, ನಿದ್ದಿ ಮಾಡ್ತಿದ್ದೇನು? ನಾನು ಕೇಳಿದ್ದ್ ಪ್ರಶ್ನೆಗೆ ಉತ್ತರ ಕೊಡು" ಅಂದ್ರು.
ಹುಡುಗ ಬೆಚ್ಚಿಬಿದ್ದ. ತೀರ ಸಣ್ಣ ಸ್ವರದಲ್ಲಿ, ಪಕ್ಕ ನಾಲ್ಕು ಬೆಂಚಿಗೆ ಕೇಳೋ ಹಾಗೆ, "ಸಾರ್, ದೇವ್ರು.." ಅಂದ.
ಇನ್‍ಸ್ಪೆಕ್ಟರ್‍ಗಂತೂ ಸಿಟ್ಟು ನೆತ್ತಿಗೇರಿತು. ಏನೋ ಬೈಲಿಕ್ಕೆ ಬಾಯಿ ತೆರೆದಿದ್ದ್ರು ಅಷ್ಟ್ರಲ್ಲಿ ಆ ಹುಡ್ಗನ್ನ ಬಚಾವು ಮಾಡೋಣ ಅಂತ ಮೇಷ್ಟ್ರು ಮಧ್ಯ ಪ್ರವೇಶ ಮಾಡಿದ್ರು.
"ಸರ್, ನಮ್ಮ ಸ್ಕೂಲ್ ಜವಾನ ರಾಮಯ್ಯ, ಅದೇ ಅವಾಗ ತಿಂಡಿ ತಂದು ಕೊಟ್ನಲ್ಲಾ, ಅವ್ನ ಮಗ ಸರ್ ಇವ್ನು. ಓದ್ನಲ್ಲೆಲ್ಲಾ ಚೆನ್ನಾಗೇ ಇದಾನೆ. ಏನೋ ಪ್ರಶ್ನೆ ಕೇಳಿಸಿಲ್ಲ ಅನ್ಸುತ್ತೆ" ಅಂದು ಹುಡುಗನ ಕಡೆ ತಿರುಗಿದ್ರು.
"ಅಲ್ಲಪ್ಪ, ಮಾನವನನ್ನ ಸೃಷ್ಟಿ ಮಾಡಿದ್ದು ಯಾರು ಅಂತ ಅಲ್ಲ ಇವ್ರು ಕೇಳಿದ್ದು, ಮಾನವನ ಅತ್ಯದ್ಭುತ ಸೃಷ್ಟಿ ಯಾವ್ದು ಅಂತ ಕೇಳಿದ್ದು" ಅಂದ್ರು.
ಹುಡುಗ ಇದ್ದ ಬದ್ದ ಶಕ್ತಿ ಎಲ್ಲಾ ಸೇರಿಸಿ, "ಅದೇ ಸರ್, ದೇವ್ರು.. ಹಂಗೇ ನಮ್ಮಪ್ಪ ಹೇಳ್ಕೊಟ್ಟಿರೋದು" ಅಂದ.

ಕೈಗೆ ಸಿಕ್ಕ ಅವಕಾಶನಾ ಇನ್‍ಸ್ಪೆಕ್ಟರ್ ಬಿಡ್ತಾರಾ, ಮೇಷ್ಟ್ರನ್ನ ಸರಿಯಾಗಿ ದಬಾಯಿಸಿದ್ರು. ಮಕ್ಕಳಿಗೆ ಬರೇ ಪುಸ್ತಕದಲ್ಲಿರೋದನ್ನ ಹೇಳಿದ್ರೆ ಸಾಕಾಗಲ್ಲ. ಲೋಕ ಜ್ಞಾನನೂ ತಿಳಿಸ್ಬೇಕು. ನೀವು ಸರಿಯಾಗಿದ್ದಿದ್ರೆ, ಹುಡುಗ್ರು ಹಿಂಗೆಲ್ಲಾ ಅಸಂಬದ್ಡ ಉತ್ತರಗಳನ್ನೆಲ್ಲಾ ಕೊಡಲ್ಲ, ಹಾಗೆ, ಹೀಗೆ ಅಂತೆಲ್ಲಾ ಪ್ರವಚನ ಬಿಗಿದು, ಕರೆಕ್ಟಾಗಿ ಬಸ್ ಬರೋ ಟೈಮ್ ಆಗಿದ್ದು ನೋಡಿ ಎದ್ದು ಹೋದ್ರು.
ಅವ್ರು ಹೋದಮೇಲೆ "ಏನು ತಿರುಗಾಮರುಗಾ ಅದನ್ನೇ ಹಿಡ್ಕೊಂಡಿದಿಯಾ? ರೈಲೋ, ರಾಕೆಟ್ಟೋ ಏನೋ ಒಂದು ಬೊಗಳಿ ಕುತ್ಕೋಳಕ್ಕ ಬರ್ತಿದ್ದಿಲ್ಲೇನು. ನಿನ್ನಂತವರು ಒಬ್ರು ಸಾಕು, ನನ್ನ ಪ್ರಾಣ ತೆಗಿಯೋಕೆ" ಅಂತ ಮೇಷ್ಟ್ರು ಆ ಹುಡುಗನಿಗೆ ಮಹಾ ಮಂಗಳಾರತಿಯೇ ಮಾಡಿದ್ರು. ಜೊತೆಗೆ ಪ್ರಸಾದ ಬೇರೆ, ಬೆತ್ತದಿಂದ.

~*~*~
ಮನೆಗೆ ಹೋದಮೇಲೆ ಹುಡುಗ ಅಪ್ಪನ ಹತ್ರ ನಡೆದಿದ್ದೆಲ್ಲಾ ಹೇಳ್ದ.
ಅಪ್ಪ ನಕ್ಕ.

Monday, January 28, 2008

ತರ್ಕ..

ಅಪ್ಪ: "ಘಂಟೆ ಎಷ್ಟು ಹೊಡಿತು?"

ಮಗ: "ಏಳೂವರೆ."

ಅಪ್ಪ: "ಎಷ್ಟು ಘಂಟೆಗೆ ನಿನ್ನ ಪ್ರೊಗ್ರಾಮು?"

ಮಗ: "ಒಂಬತ್ತೂವರೆಗೆ."

ಅಪ್ಪ: "ನಂದೊಂದು ಪ್ರಶ್ನೆ ಇದೆ."

ಮಗ: "ಕೇಳಿ."

ಅಪ್ಪ: "ಯಾರಾದ್ರೂ ನಿದ್ದೆ ಮಾಡ್ತಿದಾರೆ ಅಂತ ಹೇಗೆ ಕಂಡುಹಿಡಿಯೋದು?"

ಮಗ: " 'ನಿದ್ದೆ ಮಾಡ್ತಿದಿರಾ?' ಅಂತ ಮಲಗಿದ್ದವರನ್ನ ಕರೆದು ಕೇಳಿ, ಗೊತ್ತಾಗುತ್ತೆ."

ಅಪ್ಪ: "ಅದು ಹೇಗೆ?"

ಮಗ: "ಅವ್ರು ನಿದ್ದೆ ಮಾಡ್ತಿದ್ದಿದ್ರೆ, 'ಹೂಂ' ಅಂತಾರೆ. ಇಲ್ಲ ಅಂದ್ರೆ 'ಇಲ್ಲ' ಅಂತಾರೆ."

ಅಪ್ಪ: "ಆದ್ರೆ ಅವ್ರು ಏನೇ ಉತ್ತರ ಕೊಟ್ಟರೂ ಸರಿ, ಅವ್ರು ಎದ್ದಿದಾರೆ ಅಂತಾನೇ ಅರ್ಥ ಅಲ್ವಾ? ಯಾಕಂದ್ರೆ ನಿದ್ದೆ ಮಾಡ್ತಾ ಹೇಗೆ ಉತ್ತರ ಕೊಡೋಕೆ ಸಾಧ್ಯ ಹೇಳು."

ಮಗ: "ಹೌದು. ಆದ್ರೆ ಅವ್ರು 'ಹೂಂ' ಅಂತ ಹೇಳಿದ್ದರ ಅರ್ಥ ಮೊದಲು ನಿದ್ದೆ ಮಾಡ್ತಿದ್ದೆ, ಈಗ ನೀವು ಕೂಗಿದ ಮೇಲೆ ಎಚ್ಚರ ಆಯಿತು ಅಂತ."

ಅಪ್ಪ: "ಹಂಗಂದ್ರೆ ನಾನು ಕೇಳಿದ ಪ್ರಶ್ನೆಗೆ ಅವರ ಉತ್ತರ ಸರಿಯಾಗಿದ್ದಿಲ್ಲ. ನಾನು ಕೇಳೋ ಪ್ರಶ್ನೆಗೆ ಅವ್ರು ಉತ್ತರ ಕೊಟ್ಟರೆ ಅದು 'ಇಲ್ಲ' ಅಂತನೇ ಇರಬೇಕು. ಇಲ್ಲಾಂದ್ರೆ ಅವ್ರು ಸುಳ್ಳು ಹೇಳ್ತಿದಾರೆ ಅಂತ ಅರ್ಥ. ನಾನು ಅವ್ರನ್ನ ಕೇಳಿದ್ದು 'ನಿದ್ದೆ ಮಾಡ್ತಿದಿರಾ?' ಅಂತ, 'ನಿದ್ದೆ ಮಾಡ್ತಿದ್ರಾ?' ಅಂತ ಅಲ್ಲ."

ಮಗ: "ಹಾಗಾದ್ರೆ ಅವ್ರನ್ನ 'ನಿದ್ದೆ ಮಾಡ್ತಿದ್ರಾ?' ಅಂತಾನೇ ಕೇಳಿ."

ಅಪ್ಪ: "ನನಗೆ ಅವರು ಮೊದಲೇನು ಮಾಡ್ತಿದ್ರು ಅನ್ನೋದು ಬೇಡ. ಈಗ, ಈ ಕ್ಷಣ, ನಿದ್ದೆ ಮಾಡ್ತಿದಿರಾ ಅಂತ ಗೊತ್ತಾಗಬೇಕು."

ಮಗ: "ಹ್ಮ್.. ಹಾಗಾದ್ರೆ ಮೊದಲೇ ಕೇಳಿದಂತೆ 'ನಿದ್ದೆ ಮಾಡ್ತಿದಿರಾ?' ಅಂತಾನೇ ಕೇಳಿ. ಏನೇ ಉತ್ತರ ಬಂದರೂ ಎದ್ದಿದಾರೆ ಅಂತ ಅರ್ಥ. ಏನೂ ಉತ್ತರ ಬರಲಿಲ್ಲ ಅಂದ್ರೆ ಖಂಡಿತ ನಿದ್ದೆ ಮಾಡ್ತಿದಾರೆ ಅಂತಾನೇ."

ಅಪ್ಪ: "ಅಂದ್ರೆ ನಾನು ಕರೆದಿದ್ದು ಅವರಿಗೆ ಕೇಳಿಸಲಿಲ್ಲ, ಅದಕ್ಕೆ ಅವರು ಉತ್ತರ ಕೊಡಲಿಲ್ಲ ಅಂದ್ರೆ ಅವರು ನಿದ್ದೆ ಮಾಡ್ತಿದಾರೆ ಅಂತಾನಾ?"

ಮಗ: "ಹಾಗಲ್ಲ."

ಅಪ್ಪ: "ಅಕಸ್ಮಾತ್ ಅವರಿಗೆ ನನ್ನ ಪ್ರಶ್ನೆಗೆ ಉತ್ತರ ಕೊಡುವುದಕ್ಕೆ ಇಷ್ಟ ಇಲ್ದೇ ಉತ್ತರ ಕೊಡದಿದ್ರೆ, ಅವರು ನಿದ್ದೆ ಮಾಡ್ತಿದಾರೆ ಅಂತ ಅರ್ಥನಾ?"

ಮಗ: "ನೀವು ಹೀಗೆ ಕೇಳಿದ್ರೆ ನಾನೇನು ಹೇಳಲಿ? ಒಂದು ಕೆಲ್ಸ ಮಾಡಿ. ಮಲಗಿರುವವರ ಪಕ್ಕ ಹೋಗಿ ನೋಡಿ. ಗೊತ್ತಾಗುತ್ತೆ."

ಅಪ್ಪ: "ಅವರು ನಾನು ಬಂದೆ ಅಂತ ಸುಮ್ನೆ ಕಣ್ಣುಮುಚ್ಚಿಕೊಂಡು ನಾಟಕ ಮಾಡ್ತಿದ್ರೆ? ಅಥವಾ ಅವರು ಕಣ್ಣು ತೆರೆದುಕೊಂಡು ಕುಳಿತುಕೊಂಡೇ ನಿದ್ದೆ ಮಾಡ್ತಿದ್ರೇ? ನನಗೆ ಹೇಗೆ ಗೊತ್ತಾಗಬೇಕು?"

ಮಗ: "ಅಪ್ಪ.. ನೀವು ಹೀಗೇ ಯೊಚನೆ ಮಾಡ್ತಿದ್ರೆ ಖಂಡಿತ ನಿಮ್ಮ ಪ್ರಶ್ನೆಗೆ ಉತ್ತರ ಸಿಗೋದು ಅಸಾಧ್ಯ!"

ಅಪ್ಪ: "ಹೌದಾ? ಈ ಪ್ರಶ್ನೆಗೇ ಉತ್ತರ ಸಿಗಲಿಲ್ಲ ಅಂದ್ರೆ ನಾನು ಮುಂದೆ ಕೇಳಬೇಕಂತಿದ್ದ ನೂರಾರು ಪ್ರಶ್ನೆಗಳಿಗೆ ಉತ್ತರಾನೇ ಇಲ್ಲ ಅನ್ಸುತ್ತೆ. ಉದಾಹರಣೆಗೆ, 'ನಾನು ಮಾತಾಡಿದ್ದು ಇನ್ನೊಬ್ಬರಿಗೆ ಕೇಳಿಸಿತಾ?', 'ನನ್ನನ್ನು ಅವರು ನೋಡಿದರಾ?', 'ನಾನು ನೋಡುತ್ತಿರುವ ವಸ್ತು ಅದೇನಾ?', 'ನಾನು ನಾನೇನಾ?' "

ಮಗ: "ಹ್ಮ್.. ಹೌದೆನ್ನಿಸುತ್ತೆ."

ಅಪ್ಪ: "ಮತ್ತೆ ಇಷ್ಟೆಲ್ಲಾ ಪ್ರಶ್ನೆಗಳು ಮನಸ್ಸಿನಲ್ಲಿ ಎದ್ದು, ಅದಕ್ಕೆ ಉತ್ತರಗಳೇ ಸಿಗದಿದ್ರೂ, ಜನ ಹೇಗೆ ನಿರ್ಭಯ, ನಿಶ್ಚಿಂತೆಯಿಂದ ಜೀವನ ಮಾಡ್ತಾರೆ?"

ಮಗ: " "

ಅಪ್ಪ: "ಹೋಗ್ಲಿ ಬಿಡು. ನೀನೆಲ್ಲಿಗೋ ಹೊರಟಿದ್ದೆಯಲ್ಲಾ, ತಯ್ಯಾರಾಗು. ನನಗಂತೂ ಮಾಡ್ಲಿಕ್ಕೊಂದಿಷ್ಟು ಕೂಡ ಕೆಲಸ ಇಲ್ಲ, ಕಾಲ ಕಳಿಯೊದಿಕ್ಕೆ ಹೀಗೇ ಎನೇನೋ ಕೇಳ್ತಿರ್ತಿನಿ ಅಷ್ಟೆ."

ಮಗ: "ಸರಿ."

ಅಪ್ಪ: " 'ನಂಬಿಕೆ' ಅಂತ ಒಂದು ಇರದಿದ್ದರೆ ಈ ಜಗತ್ತಿನ ಕತೆ ಏನಾಗ್ತಿತ್ತೋ!"

Friday, January 11, 2008

ದೇವರು?

'ಲೇ ಸ್ವಾಮಿ, ಚೂರು ಹಿಡ್ಕಳಲೇ ಇದನ್ನ. ಇವ್ನಜ್ಜಿ ಅವಾಗಿಂದ ಚಪ್ಲಿ ಕಿತ್ಗಂಡ್ ಬರ್ತಿದದ' ಅಂತ ಹೇಳಿ ಹಿಡ್ಕಂಡಿದ್ದ ಅಟ್ಲಾಸ್ ಸೈಕಲ್ನ ಇವ್ನ ಕೈಗೆ ಕೊಟ್ಟ. ಬೀಳೊ ಹಂಗೆ ಆಗಿದ್ದ ಸೈಕಲ್ ಅನ್ನ ಗಟ್ಟಿಯಾಗಿ ಹಿಡ್ಕಂಡ್ ನಿಂತ. ಸುಮಾರು ಅವ್ನಷ್ಟು ಎತ್ರನೇ ಇತ್ತದು. ಪೂರ್ತಿ ಹಸುರ್ ಬಣ್ಣ, ಬರೀ ಹ್ಯಾಂಡಲ್ ಮತ್ತೆ ಸೀಟ್ ಕವರ್ ಅಷ್ಟೇ ಕೆಂಪು, ದೊಡ್ಡದಾಗಿ 'ರಣಧೀರ' ಅಂತ ಬರ್ದಿದ್ರು ಅದ್ರಮೇಲೆ.
ಅವ್ನಿನ್ನೂ ಚಪ್ಲಿ ಸರಿ ಮಾಡಿದ್ನಾ ಇಲ್ವಾ, ಇವ್ನಿಗೆ ತಡ್ಕಳ್ಲಿಕ್ಕಾಗ್ಲಿಲ್ಲ, ಕೇಳೇಬಿಟ್ಟ. "ಸೀನಣ್ಣ, ನಾನೂ ಒಂದ್ ಸರ್ತಿ ಸೈಕಲ್ ಹೊಡಿಲಾ?"
"ಓಹೋಹೋ, ಏನೂ ಬ್ಯಾಡ. ಹೊಡಿಲಿಕ್ಕೆ ಬರಲ್ಲ ಬಿಡಲ್ಲ, ಎಲ್ಲನಾ ಹೊತ್ಕಂಡ್ ಬಿದ್ರೆ, ಊರೆಲ್ಲಾ ಡಂಗುರ ಹೊಡದ್ಬಿಡ್ತಿಯಾ ಅಷ್ಟೆ, 'ಸೀನಣ್ಣನ ನಂಗ ಹೊಡಿಲಕ್ಹೇಳಿದ್ದು, ಆತ್ನೇ ಬೀಳ್ಸಿದ್ದು' ಅಂತ, ಕಂಡಿಲ್ಲೇನು ನಾನೇನು."
ಸ್ವಾಮಿ ಮುಖ ಒಂಚೂರ್ ಸಪ್ಪಗಾಯ್ತು, ಯಾಕಂದ್ರ ಮೊದ್ಲ್ ಎರಡ್ ಮೂರ್ ಸರ್ತಿ ಹಿಂಗೆ ಮಾಡಿದ್ದ.
'ಹೂಂ ಮತ್ತೆ, ನಾನು ಹೊಡಿಬೇಕಾರ ಹಿಡ್ಕಂಡಿರು ಅಂದ್ರೆ ಹಿಡ್ಕಳದೇ ಇಲ್ಲ. ಕೈ ಬಿಟ್ಬಿಡ್ತಿ, ಬೀಳಲ್ಲೇನ್ ಅವಾಗ ನಾನು?'
"ಇದು ನೋಡು ಮಾತಂದ್ರೆ, ಅಲ್ಲಲೇ ನಾನು ಹಿಡ್ಕಂಡಿದ್ರೆ ನೀನೇನ್ ಹೊಡ್ದಂಗಾಯ್ತು? ಅದಕ್ಕಿಂತ ನೀನ್ ಸುಮ್ನೆ ಹೊಡಿಲಿಲ್ಲದಂಗೆ ಕುತ್ಕಂಡಿದ್ರೇನೆ ವಾಸಿ."
'ಇಲ್ಲ ಇಲ್ಲ, ನಿಜ ಇನ್ನಮ್ಯಾಲೆ ಹಂಗೆ ಹೇಳಲ್ಲ. ಒಂದೇ ಒಂದು ರೌಂಡ್ ಹೊಡಿತಿನಿ, ಹಿಡ್ಕಳಣ್ಣ..'
"ಸರಿ ಸರಿ, ಹತ್ತು" ಅಂದ.
ಶಬ್ದಗಳು ಬೆನ್ನ ಹಿಂದಿಂದ ಬರ್ತಿದ್ವು, ಸೀನಣ್ಣ ಹಿಡ್ಕಂಡ್ ಮೇಲೆ ಅದ್ಹೆಂಗ್ ಬೀಳ್ತಿನಿ ಅಂತೇಳಿ ಸ್ವಾಮಿ ದಬಾಯಿಸಿ ತುಳ್ದ. ಅಲೆಲೆಲೇ ಏನ್ ಮಜಾ ಸೈಕಲ್ ಓಡಿಸ್ಬೇಕಾದ್ರೆ, ಅದೂ ಸೀನಣ್ಣ ಹಿಂದೆ ಹಿಡ್ಕಂಡಿರ್ಬೆಕಾದ್ರೆ, ಭಯ ಎಲ್ಲಿಂದ ಬರ್ಬೇಕು? ಖುಶಿಯಾಗಿ ತುಳಿತಾನೇ ಕರ್ದ, 'ಸೀನಣ್ಣಾ...'. ಉತ್ರನೇ ಇಲ್ಲ. ಬ್ರೇಕ್ ಹಿಡ್ದ್, ನಿಲ್ಸಿ, ತಿರುಗ್ ನೋಡ್ದ.
ಇವ್ನೆಲ್ಲಿ ಶುರು ಮಾಡಿದ್ನೋ ಸೀನಣ್ಣ ಅಲ್ಲೇ ಕೂತಿದ್ದ, ಕಿತ್ಹೊಗಿದ್ದ, ಹವಾಯಿ ಚಪ್ಪಲ್ ಸರಿ ಮಾಡ್ಕೊತಾ. ಸ್ವಾಮಿಗೆ ಇವಾಗ ಭಯ ಶುರು ಆಯ್ತು. ಅದ್ಕೆ ಅಲ್ಲಿಂದ ಸೈಕಲ್ ದಬ್ಕೊಂಡೇ ವಾಪಾಸ್ ಬಂದ.
"ಏನಲೇ, ನಾನಿನ್ನೂ ಹಿಡ್ಕಂಡೇ ಇದ್ದಿಲ್ಲ, ಆಗ್ಲೇ ಹೊಡ್ಕಂಡ್ ಹೋಗ್ಬಿಟ್ಟೆ? ಪರ್ವಾಗಿಲ್ಲ ಕಲ್ತ್ ಬಿಟ್ಟಿಯ.. ಯಾವಾಗ ಕಲ್ತೆ?"
ಸ್ವಾಮಿಗ್ಯಾರು ಕಲಿಸ್ಬೇಕು? ಏನೋ ಸೀನಣ್ಣ ಜೊತೆಗಿದಾನೆ ಅನ್ಕೊಂಡು ಹೊಡ್ದಿದ್ದ, ಅಷ್ಟೇ.
ಅವಾಗ್ಲೇ ಸ್ವಾಮಿಗನ್ಸಿದ್ದು, 'ಅಲ್ಲ ಈವಣ್ಣ ಯಾವತ್ತೂ ನಂಗೆ ಹಿಡ್ಕೊಂಡು ಕಲ್ಸೇ ಇಲ್ಲ. ನಾನೇ ಸುಮ್ನೆ ಗಟ್ಟಿ ಹಿಡ್ಕಂಡನ ಬಿಡು ಅಂತೇಳಿ ಕಲ್ತಿದ್ದು. ಅಂದ್ರೆ ಇದ್ರೊಳಗೆ ಕಲಿಸ್ಲಿಕ್ಕೇನೂ ಇಲ್ಲ. ಯಾರೂ ಕಲ್ಸೋದೂ ಇಲ್ಲ. ಆದ್ರೆ ಸೀನಣ್ಣ ಇದಾನ ಅಂತ ಅನ್ಕಂಡಿಲ್ಲ ಅಂದ್ರೆ ನಾನು ಕಲಿತಾನೇ ಇದ್ದಿಲ್ಲೇನೋ.' ಅಂತ.
'ಅಣ್ಣ ನಾಳೆ ಇಂದ ನಾನೇ ಹೊಡಿತಿನಿ ಸೈಕಲ್' ಅಂದ.
"ಹೊತ್ಕಂಡು ಬಿದ್ರೆ?"
'ಏನೂ ಬೀಳಲ್ಲ. ನಂಗಿವತ್ತು ಗೊತ್ತಾಯ್ತು. ಒಂದೋ ಸೈಕಲ್ ಯಾರೂ ಹಿಡ್ಕಂಡಿರಲ್ಲ, ಓಡ್ಸೋದು ಬೀಳ್ಸೋದು ಎಲ್ಲಾ ನನ್ನ ಕೈಯ್ಯಾಗೇ ಅದ ಅಂತ ಗೊತ್ತಿರ್ಬೇಕು, ಇಲ್ಲಂದ್ರೆ ಯಾರಾದ್ರೂ ಜೊತಿಗಿದಾರ, ಬಿದ್ರೆ ಮ್ಯಾಲ ಎತ್ತತಾರ ಅಂತ ಅನ್ಕೊಂಡು ಧೈರ್ಯದಿಂದ ಓಡಿಸ್ಬೇಕು. ಎರಡೂ ಹೊತ್ನಾಗೂ ಜೊತಿಗೆ ಯಾರೂ ಇರಲ್ಲ, ಆದ್ರ ಎಲ್ಲಾ ನಾನ್ ಅನ್ಕಳದ್ರ ಮ್ಯಾಲ ಹೊಗ್ತದ.'
ಜೋರಾಗಿ ನಕ್ಕಂತ ಸೀನಣ್ಣ ಹೇಳ್ದ "ಬಪ್ಪರೇ ಮಗನ, ಇನ್ನು ನಿನ್ನ ಹಿಡಿಯೊರ್ ಇಲ್ಲ ಬಿಡು. ಆಯ್ತು ಸೈಕಲ್ ತೊಗೊಂಡ್ ಮನಿಕಡಿ ಹೋಗಿರು, ನಾ ಆಮ್ಯಾಲೆ ಬರ್ತಿನಿ"