Tuesday, December 8, 2009

ಮುಂದಿದೆ ದಾರಿ..


ಹತ್ತಿರವಾಗುತಿದೆ, ಇನ್ನೆಷ್ಟರ ದೂರವದು?
ಬೀಳುತ್ತಿದೆ, ಎಣಿಸಿದ್ದಕ್ಕಿಂತಲೂ ರಭಸವಾಗಿ.
ಕೇಳುತ್ತಿದೆ ಅದರ ನಿಲ್ಲದ ಭೋರ್ಗರೆತ,
ಕಿವಿ ಮುಚ್ಚಿದರೂ ಬಿಡದಂತೆ,
'ನೋಡೋ, ಬಚ್ಚಲ ಮೋರಿಯಲ್ಲವಿದು,
ಇಷ್ಟಿದೆ ಇದರ ಆಳ’ ಎಂದಂತೆ.

ಹುಟ್ಟದಿದ್ದೀತೇ ಭಯ? ಆ ಪ್ರಪಾತವ ನೋಡಿದಾಗ,
ಬಿದ್ದದ್ದೆಲ್ಲಾ ನೆಲಮುಟ್ಟದೆ ತೇಲಾಡುವಾಗ,
ಮುಟ್ಟಿದವಪ್ಪಳಿಸಿದ ರಭಸಕೆ ಸಿಡಿದು ಕರಗುವಾಗ.

ಭಯಕ್ಕಂಜಲಾದೀತೇ?
ಬೀಳಲೇಬೇಕೆನ್ನುವ ಆಸೆ ಮೂಡಿದಮೇಲೆಯೂ.
ಒಮ್ಮೆಯಾದರೂ ನೆಗೆಯಬೇಕಿದೆ,
ತಳ ಮುಟ್ಟುವವರೆಗೆ, ಮಬ್ಬು ಸರಿಯುವವರೆಗೆ.
ಇದೂ ಒಂದು ದಾರಿ, ಸಾಗರದೆಡೆಗೆ.
~*~

ಚಿತ್ರಕೃಪೆ: ಅಶೋಕ

Thursday, November 5, 2009

ಕನಸು...



ಅಂದು,
ಮಲಗುವಾಗಾಗಲೇ ಹೊತ್ತು
ಹನ್ನೆರಡರ ಮೇಲೆ ಒಂದಾಗಿತ್ತು.
ಅಲ್ಲಿ, ನನಗೆಂದು ಬಂದಿದ್ದ ಸಿಹಿ ಕನಸುಗಳು
ಆಗಲೇ ಯಾರಕಣ್ಣಲ್ಲಿ ಬಿದ್ದು ಮಲಗಿದ್ದವೇನೋ.

ಎಳೆದು ಅಪ್ಪಿಕೊಂಡರೂ ಕೊಸರಾಡಿ
ಹತ್ತಿರ ಬರಲೊಲ್ಲೆ ಎನ್ನುವ ನಿದ್ದೆ.
ಮುಂದೇನೆನ್ನುವಂತೆ ಖಾಲಿ ಗೋಡೆಯ
ನೋಡುತ್ತಿದ್ದಾಗಲೇ ಬಂದಿದ್ದೆನಿಸುತ್ತೆ ನೋಡಿ,
ನಿದ್ದೆಯ ಜೊತೆಜೊತೆಗೆ, ಆ ಕನಸು.

ಅದು ಬರೀ ಕನಸೆಂದರೆ ಆಯಿತೆ?
ಅಂತಿಂತದ್ದಲ್ಲದು, ಅತೀ ಘೋರ, ಭಯಾನಕ.
ಬೆಟ್ಟದಮೇಲಿಂದ ನನ್ನನ್ಯಾರೊ ನೂಕಿ ನಕ್ಕಾಗ
ತೇಲಾಡುತ ಭಯದಲಿ ಮುದುಡಿ
ನೆಲಮುಟ್ಟುವ ಕ್ಷಣವ ಕಾದಂತೆ?

ನದಿಯಲ್ಲಿ ಮುಳುಗಿದಾಗ ಮೇಲ್ಬರಲಾಗದೆ
ಉಸಿರುಕಟ್ಟಿ, ಕೈಕಾಲು ಬಡಿದು ಒದ್ದಾಡಿದಂತೆ?
ಕರಿ ಕತ್ತಲ ನಿರ್ಜನ ದಾರಿಯಲ್ಲಿ
ವಿಕಾರ ಮುಖದ ಭೂತವೊಂದು ಅಟ್ಟಿ ಬಂದಂತೆ?

ಅಲ್ಲ ಅಲ್ಲ, ಅಲ್ಲವೇ ಅಲ್ಲ.
ಅದಿವೆಲ್ಲಕ್ಕಿಂತಲೂ ಭೀಕರ, ಭಯಂಕರ.
ಈಗಲೂ ಮೈನಡುಕ ಹುಟ್ಟಿಸುವಂತದ್ದು.

ಆ ಕನಸಲ್ಲಿ,
ಹುಣ್ಣಿಮೆಯ ರಾತ್ರಿ, ತಂಗಾಳಿ ಬೀಸುವಾಗ,
ಹೊಟ್ಟೆತುಂಬ ಊಟವಾದಮೇಲೆ,
ಪಕ್ಕದಲ್ಲಿ ಹರಿಯುವ ನೀರಿನ ಸದ್ದು ಕೇಳದೆ,
ತುಂಬು ಚಂದಿರನ ನೋಡದೆ,
ನಸು ನಗದೆ,
ಹೊದ್ದು ಮಲಗಿದ್ದೆ ನಾನು!
ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ,
ಆ ಸಿಹಿ ನಿದ್ದೆಯಲ್ಲಿ ಕೂಡ,
ಹಣ, ಪ್ರತಿಷ್ಠೆ, ಗುರಿ, ಸಾಧನೆಗಳ
ಕನಸು?!
~*~

Wednesday, October 14, 2009

ಸೊಬಗು..



ಅಂತದ್ದೇನಿದೆ ಅಲ್ಲಿ?
ಅವೇ ಹಸಿರೆಲೆ ಬಿಡುವ ಗಿಡ ಮರಗಳು,
ತಣ್ಣಗೆ ಬಿದ್ದೋಡುವ ತೊರೆಗಳು,
ಒಂದಿಷ್ಟು ಗಾಳಿ, ಮೋಡ ಮತ್ತು ನೀಲಾಕಾಶ.
ಅದನೋಡೋಕೆ ಮೈಲುಗಟ್ಟಲೆ ನಡೆದು,
ಅಲ್ಲಿಗೆ ಹೋಗಬೇಕೆ? ಅಂತ ಕೇಳಿದಿರಾ ಸ್ವಾಮಿ?
ಬರೀ ನಕ್ಕೇನು ನಾನು. ಉತ್ತರಿಸುವ ಮೂರ್ಖನಾಗಲಾರೆ.
~*~


ಚಿತ್ರಕೃಪೆ: ಅಶೋಕ

Wednesday, September 30, 2009

ನಡಿಗೆ..


ಎಣಿಸಲಾಗದೆ ಚುಕ್ಕಿಗಳ ಬರೀ ನೋಡುತ
ಕಣ್ಣಲ್ಲೇ ಮಾತನಾಡುತ ಮೌನದಲಿ
ನಡೆದಿದ್ದವ ಚಿಕ್ಕ ಕಲ್ಲೆಡವಿದ್ದಕ್ಕೆ ’ಆಹ್’ ಅಂದ.

Tuesday, September 15, 2009

ನೀರು...




ಒಂದೇ ಎನ್ನುವಂತೆ ಸಾಗುತ್ತಿದ್ದ ನಾವು
ಆ ತುದಿಯಲ್ಲಿ ನೂರಾಗಿ ಸಾವಿರವಾಗಿ
ಹರಡಿ ಹೊಳೆಹೊಳೆದು ತೂರಾಡಿ
ಕೆಳಗುದುರಿ ಮತ್ತೆ ಮೊದಲಿನಂತೆ ನಡೆದಾಗಲೇ
ಹುಟ್ಟಿದ್ದು, ಆ ಪುಟ್ಟ ನಗು.




ಫೋಟೋ ಕೃಪೆ: ಅಶೋಕ

Tuesday, August 4, 2009

ಹರಿಯದ ಪುಟಗಳು

~*~

"ಓಕೆ"
ಯಾಕಂದೆ ನಾನು ಹಾಗೆ..? ಗೊತ್ತಿಲ್ಲ.
"ಹೇ, ಅರ್ಜೆಂಟ್ ಆಗಿ ನಾನೆಲ್ಲೋ ಹೊಗ್ಬೇಕು. ಆಮೆಲೆ ಸಿಗ್ತೀನಿ" ಇಷ್ಟೇ ಅಲ್ವಾ ನಾನಂದಿದ್ದು?
ಅವಳುತ್ತರಕ್ಕೆ ಮನಸ್ಸು ನಿಲ್ಲಲಿಲ್ಲ, ಕಾಲುಗಳು ನಡಿತಿದ್ವು. ಮಾತುಗಳನ್ನೆದುರಿಸಕ್ಕಾಗದಾಗ ಮುಖ ನೋಡೋಕಾಗಲ್ಲ, ಭಾರಿ ಕಷ್ಟ. ಕಣ್ಣುಗಳನ್ನ ಎದರಿಸುವುದಂತೂ ಅಸಾಧ್ಯ. ಮುಂದೆ ಏನೋ ಹೇಳ್ತಿದ್ದಳು ಅನ್ಸುತ್ತೆ, ಶಬ್ದ ಕೇಳ್ತಿತ್ತು, ಆದ್ರೆ ಶಬ್ದಗಳು ಕೇಳ್ಲಿಲ್ಲ. ಜೋರೆದೆ ಬಡಿತದ ಮುಂದೆ ಬೇರೇನು ಕೇಳ್ಸಿದ್ದೀತು? ನಡಿತಿದ್ನೋ ಅಥವಾ ಓಡುತಿದ್ನೋ, ನಂಗೇನು ಗೊತ್ತು, ನೋಡಿದವರು ಹೇಳಬೇಕಿತ್ತು ಅದನ್ನ. ಫಿಸಿಕ್ಸ್ ಲ್ಯಾಬ್ ಹಿಂದೆ ಹೋಯ್ತು, ಪ್ಲೇಸ್ಮೆಂಟ್ ಸೆಲ್ಲ್ ಕೂಡ ಹೋಯ್ತು, ಮೆಟ್ಟಲುಗಳು ಬಂದ್ವು, ಕೆಳಗೆ ಇಳಿದೂ ಆಯ್ತು. ಇನ್ನು ಅವಳಿಗೆ ನಾನು ಕಾಣಿಸ್ತಿಲ್ಲ ಅಂತ ಗೊತ್ತಾದಗಲ್ವಾ ನಾನು ಓಡೋಕೆ ಶುರು ಮಾಡಿದ್ದು? ಆ ಆಟೋನ ಅಪ್ಪಿತಪ್ಪಿ ಕೂಡ ಇನ್ನೊಂದು ಸರ್ತಿ ಹತ್ತಬಾರದು. ಕಾಲೇಜ್ ಇಂದ ಬೆಟ್ಟದ ಬುಡಕ್ಕೆ ಹೋಗ್ಲಿಕ್ಕೆ ೭೦ ರೂಪಾಯಿ ಕೇಳೋದಾ? ಹ್ಮ್ ಆಗ್ಲೇ ದಬಾಯಿಸಬೇಕಿತ್ತು ಅವನನ್ನ, ಏನೂ ಮಾತಾಡ್ದೇ ಯಾಕೆ ಹತ್ತಿ ಕುಳಿತುಕೊಂಡೆನೋ ಏನೋ. ಮೆಟ್ಟಲು ಹತ್ತಬೇಕಾದ್ರೆ ಮೊಬೈಲು ಸ್ವಿಚ್ ಆಫ್ ಮಾಡಿದ್ದು ಯಾಕೆ? ಅವಳ ಹತ್ರ ನನ್ನ ನಂಬರ್ ಕೂಡ ಇದ್ದಿಲ್ಲ, ಆದರೂ ಒಂದು ರೀತಿ ಹೆದರಿಕೆ. ವಾರಕ್ಕೆ ಒಂದು ದಿವಸ, ಒಂದೇ ಒಂದು ದಿವಸ, ನಿನ್ನೆ ಓಡಿಕೊಂಡು ಮೆಟ್ಟಲು ಹತ್ತಿದಹಾಗೆ ಹತ್ತುತಾ ಇದ್ರೆ, ಅರ್ಧಕ್ಕರ್ಧ ಹೊಟ್ಟೆ ಕರಗುತ್ತೇನೋ.

ನಾನು ಮಾಡೊ ಜೋಕಿಗೆ, ನನ್ನ ಅಸಂಬದ್ಧ ಕಲ್ಪನೆಗಳಿಗೆ, ಉತ್ಪ್ರೇಕ್ಷೆಗಳಿಗೆ ನಗುವವರನ್ನ ಕಂಡರೆ ನನಗೆ ಖುಷಿಯಾಗುತ್ತೆ. ಖುಷಿಯಾದಾಗ ಇದೆಲ್ಲಾ ಮಾಡೋದು ಇನ್ನಷ್ಟು ಜಾಸ್ತಿಯಾಗುತ್ತೆ. ಆದರೆ ಇದಕ್ಕೆಲ್ಲಾ ನಗುವುದಷ್ಟೆ ಅಲ್ಲದೆ ನನ್ನನ್ನ ಹೊಗೊಳೋಕೆ ಎನಾದ್ರೂ ಶುರು ಮಾಡಿದ್ರೆ? ನಂಗೊಂತರಾ ಮುಜುಗರ. ಅದಕ್ಕೆಲ್ಲಾ ಇನ್ನೊಂದು ಸ್ಮೈಲ್ ಕೊಟ್ಟು ಬಾಯ್ಮುಚ್ಕೋತಿನಿ. ಆದರೆ ಯಾರೂ ಯಾವತ್ತೂ ಇವಳ ತರಹ ಹೇಳಿರಲಿಲ್ವಲ್ಲ? ಅದೇನು ಹೊಗಳಿಕೆನಾ? ಭಾವನೆನಾ? ಅಥವಾ ಸುಮ್ನೆ ತಮಾಶೆಗೆ ಅಂದಿದ್ದಾ? ಛೇ! ಅಲ್ಲೇ ನಿಂತಿದ್ರೆ ಗೊತ್ತಾಗ್ತಿತ್ತೇನೋ? ಇದಕ್ಕೆಲ್ಲಾ ಯಾವತರಹ ಉತ್ತರಿಸಬೇಕೋ ಏನೋ? ’ಓಕೆ’ ಅಂದಿದ್ದು ಬಹಳ ಸಪ್ಪೆ ಆಯ್ತಲ್ವ? ಬರೀ ’ಓಕೆ’? ಏನು ಹೇಳಿದ ಹಾಗಾಯ್ತು ಹಾಗಂದ್ರೆ? ಆದ್ರೆ ಬೇರೆ ಏನು ಹೇಳಬಹುದಿತ್ತು ನಾನು? ಹ್ಮ್..

ಇದೆಲ್ಲಾ ಯಾರಿಗೂ ಗೊತ್ತಾಗಿಲ್ಲ, ಅಬ್ಬ, ಅಂತ ಹಾಸ್ಟೆಲ್‍ಗೆ ಬಂದಾಗ ಇದ್ದ ನೆಮ್ಮದಿ ಎರಡ್ನಿಮಿಷ ಕೂಡ ಇರ್ಲಿಲ್ವಲ್ಲ. ನಿನ್ನನ್ನ ಕೇಳ್ಕೊಂಡವಳು ಮೂರು ಸರ್ತಿ ಫೋನ್ ಮಾಡಿದ್ಲು, ನನ್ನ ನಂಬರ್ ನೀನು ಕೊಟ್ಟಿದ್ಯಾ? ನೀನ್ಯಾಕೆ ಸ್ವಿಚ್ ಆಫ್ ಮಾಡಿದಿಯಾ? ಅಂತ ರೂಮ್‍ಮೇಟ್ ಕೇಳಿದಾಗ ಎದೆ ಝಲ್ ಅನ್ಲಿಲ್ವ? ಯಾಕೆ ಫೋನ್ ಮಾಡಿದ್ದು ಅಂತ ಇವ್ನು ಕೇಳಿದ್ದ್ರೆ ಏನಾಯ್ತು ಅಂತ ಏನಾದ್ರು ಹೇಳಿಬಿಟ್ಟಿದಾಳಾ? ಪುಣ್ಯ, ನಾನು ತಡವರಿಸಿದ್ರೂ ಅವ್ನೇನು ಮುಂದೆ ಪ್ರಶ್ನೆ ಕೇಳ್ಲಿಲ್ಲ, ಆದ್ರೆ ಅದರರ್ಥ ಅವಳೇನೂ ಹೇಳೇ ಇಲ್ಲ ಅಂತೇನೂ ಅಲ್ವಲ್ಲ? ವಿಷಯ ನನ್ನ ಬಾಯಿಂದಾನೇ ಹೊರ ಬರಲಿ ಅಂತ ಎನಾದ್ರೂ ಕಾಯ್ತಿದ್ನಾ?

೩ ವರ್ಷದಲ್ಲಿ ಒಂದಿವಸನೂ ಡೈರಿ ಬರೆಯುವುದು ಬಿಟ್ಟಿರಲಿಲ್ಲ. ನಿನ್ನೆಯ ಹಾಳೆ ನೋಡಿದರೆ ಖಾಲಿ ಖಾಲಿ. ಮುಂದೇನು ಮಾಡ್ಬೇಕು, ಏನಾಗುತ್ತೋ ಗೊತ್ತಿಲ್ಲ ಅಂತ ಹೆದರಿಕೊಂಡು ಇಲ್ಲೇ ಕುತ್ಕೋಂಡಿದ್ರೆ ಏನು ಉಪಯೋಗ? ಧೈರ್ಯ ತಂದ್ಕೋಬೇಕು. ರಾತ್ರಿ ಎಲ್ಲಾ ನಿದ್ದೆಗೆಟ್ಟು ಯೋಚಿಸಿದ್ದು ಇದನ್ನೇ ಅಲ್ವಾ? ಅದಕ್ಕೇ ಈ ರೀತಿ ಬೆಳಬೆಳಿಗ್ಗೆ ೫ ಗಂಟೆಗೆ ಕುಳಿತು ನಿನ್ನೆ ನಡೆದಿದ್ದೆಲ್ಲಾ ಬರಿತಿದೀನಿ. ಕಾಲೇಜಿನಲ್ಲಿ ಇನ್ನೇನೇನು ಕಾದಿದೆಯೋ? ಅವಳೆನಾದ್ರು ಎದುರಿಗೆನೇ ಬಂದುಬಿಟ್ಟರೆ?

~*~


ಮುಂದೇನಾಯ್ತು? ನಂಗೇನು ಗೊತ್ತು? ಯಾವ ಮಹಾ ಪುಣ್ಯಾತ್ಮ ಬರೆದಿದ್ದೇನೋ ಈ ಡೈರಿ. ಆಕಡೆ ಈಕಡೆಯ ಕೆಂಪು ದಪ್ಪ ರಟ್ಟಿನಲ್ಲಿ ಪೂರ್ತಿ ಪ್ರಮಾಣದಲ್ಲಿ ಜೀವಂತವಾಗಿದ್ದಿದ್ದು ಇವೊಂದೆರಡು ಹಾಳೆಗಳಷ್ಟೆ. ಉಳಿದ ಹಾಳೆಗಳನ್ನೆಲ್ಲಾ ಎಲ್ಲಿ ಹರಿದು ಬಿಸಾಕಿದಾನೋ ಏನೋ. ಏನೋ ಕುತೂಹಲಕ್ಕೆ ಅಂತ ತೆಗೆದೋದಿದ್ರೆ, ತಲೆಯಲ್ಲಿ ಹುಳ ಬಿಟ್ಕೊಳ್ಳೊ ಪಾಡು ನಂದು. ಹಿಂದಿಲ್ಲ, ಮುಂದಿಲ್ಲ. ನಿಮಗ್ಯಾರಿಗೂ ಈ ಕಷ್ಟ ಬರಬಾರದು ಅಂತ ಆ ಹಾಳೆಗಳನ್ನ ಕೂಡ ನಾನೇ ಹರಿದು ಬಿಸಾಕಿದೆ.

Wednesday, June 24, 2009

ಮಾತು..

ಹ್ಮ್.. ಬರೆಯೋಕೆ ಶುರು ಮಾಡ್ಬೇಕು, ಯೋಚನೆಗಳನ್ನ, ಭಾವನೆಗಳನ್ನ, ಅನಿಸಿಕೆಗಳನ್ನ, ಕನಸುಗಳನ್ನ..

ಮಾಡ್ತೀನಿ, ಆದಷ್ಟು ಬೇಗ.. :)

(ಇದಿನ್ನೊಂದು ಸೋಡಾ ಬಾಟಲ್ ಆಗದಿದ್ರೆ ಸಾಕು.. :p)