Thursday, November 19, 2020

ಎತ್ತರ (ಕತೆ)

                ರಾಜೇಶ ಬೆಳಿಗ್ಗೇನೆ ಫೋನ್ ಮಾಡಿ 'ಲೇ, ನಿಮ್ಮ ಸುಕುಮಾರ್ ಮೇಲೆ ಹೋದರಂತೆ?' ಅಂತ ಹೇಳಿ ಹೌದೋ ಅಲ್ಲವೋ ಅನ್ನುವಷ್ಟು ಸಣ್ಣದಾಗಿ ನಕ್ಕಿದ್ದ. ಮೇಲಕ್ಕೆ ಅನ್ನುವುದನ್ನು ಅವನು ಸ್ವಲ್ಪ ಜಾಸ್ತೀನೇ ಎಳೆದು ವ್ಯಂಗವಾಗಿ ಹೇಳಿದ್ದು ನನಗೇನು ಅಷ್ಟು ಇಷ್ಟ ಆಗಲಿಲ್ಲ. ಸಾವು ಅನ್ನುವುದು ಕೇವಲ ವ್ಯಕ್ತಿಯ ದೈಹಿಕ ಅಂತ್ಯ ಅಲ್ಲ, ಅದು ಅವನ ಬಗ್ಗೆ ಇರಬಹುದಾದ ಭಿನ್ನಾಭಿಪ್ರಾಯಗಳ, ವೈಮನಸ್ಯಗಳ ಅಂತ್ಯ ಕೂಡ. ಅವೆಲ್ಲಾ ಅವನ ಜೊತೇಗೆ ಮಣ್ಣಾಗಬೇಕು. ಆದರೆ ಒಬ್ಬ ವ್ಯಕ್ತಿಯ ಸಾವು ಎಲ್ಲರನ್ನೂ ಅಷ್ಟೇ ತೀವ್ರವಾಗಿ ಕಾಡಬೇಕಿಲ್ಲ ಅಂತ ಅನ್ನಿಸಿತು. ಸಣ್ಣವನಿದ್ದಾಗ ಶಾಲೆಯಲ್ಲೊಂದು ದಿವಸ ಯಾರೋ ಮಂತ್ರಿ ತೀರಿಕೊಂಡಿದ್ದಕ್ಕೆ ರಜ ಘೋಷಿಸಿದಾಗ ನಾನು ಜೋರಾಗಿ ಚಪ್ಪಾಳೆ ತಟ್ಟಿದ್ದು, ಮೇಷ್ಟರರ ಹತ್ತಿರ ಸರಿಯಾಗಿ ಬೈಸಿಕೊಂಡಿದ್ದು ನೆನಪಾಯ್ತು. ಕಳೆದ ಸ್ವಲ್ಪ ವರ್ಷಗಳ ಕಾಲ ಸುಕುಮಾರ್ ನಡೆಸಿದ ಹಕೀಕತ್ತುಗಳೇ ರಾಜೇಶನ ವ್ಯಂಗ್ಯಕ್ಕೆ ಕಾರಣ ಅಂತ ಗೊತ್ತು,  ಆದರೆ ಅವರ ಆಲೋಚನೆಗಳು ಇದನ್ನೆಲ್ಲಾ ಮೀರಿದಾಗಿತ್ತು.

        ಮಗಳಿಗೇನೋ ಸಣ್ಣದಾಗಿ ಸುಸ್ತು ಅಂದಿದ್ದಕ್ಕೂ ನನಗೂ ಈಗೊಂದು ಎರಡು ಮೂರು ದಿವಸದಿಂದ ಮನಸ್ಸು ಸರಿಯಿಲ್ಲದ್ದಕ್ಕೂ ನೆಪ ಮಾಡಿ ಅರ್ಧ ದಿವಸ ರಜೆ ಹಾಕಿ ಮನೆಗೆ ಬಂದಿದ್ದೆ. ಮೂರನೇ ಮಹಡಿಯ ನನ್ನ ಮನೆ ಬಾಲ್ಕನಿಯಲ್ಲಿ ನಿಂತುಕೊಂಡು ನೋಡ್ತಿದ್ದೆ. ಮಧ್ಯಾಹ್ನ ಆದದ್ದರಿಂದ ರಸ್ತೆಯೆಲ್ಲಾ ಖಾಲಿ ಹೊಡಿತಿತ್ತು. ಅಪಾರ್ಟಮೆಂಟಿನ ಕಾಂಪೌಂಡಿನಾಚೆ ನಿಂತಿದ್ದ ಒಂದು ಆಟೋ ಬಿಟ್ಟರೆ ಬೇರೆ ಗಾಡಿಗಳ ಸುಳಿವಿಲ್ಲ. ಸ್ವಲ್ಪ ಹೊತ್ತು ಹಾಗೇ ನೋಡುತ್ತಿದ್ದಂತೆ ಆಟೋದವನು ಮತ್ತು ಗಿರಾಕಿಯ ನಡುವೆ ಏನೋ ಜಗಳ ನಡೀತಿದೆ ಅಂತ ಅನ್ನಿಸ್ತು. ದೂರದಲ್ಲಿದ್ದಿದ್ದರಿಂದ ಅವರ ಹಾವಭಾವ ತಿಳಿಯುತಿತ್ತೆ ಹೊರತು ಅವರ ಮಾತುಗಳು ಕೇಳುತ್ತಿರಲಿಲ್ಲ. ಸಮಯ ಕಳೆದಂತೆ ಜಗಳನೂ ಜೋರಾಯಿತು. ಮೆಲ್ಲನೆ ಆಚೀಚೆ ಅಡ್ಡಾಡುತ್ತಿದ್ದ ಜನಗಳೆಲ್ಲಾ ನಿಂತುಕೊಂಡು ನೋಡುವುದಕ್ಕೆ ಶುರು ಮಾಡಿದರು. ಇನ್ನೊಂದಿಷ್ಟು ಜನ ಇದ್ಯಾವುದರ ಪರಿವಿಲ್ಲದೇ ಆರಾಮಾಗಿ ಓಡಾಡಿಕೊಂಡಿದ್ದರು. ಜಗಳ ಕೊನೆಗೆ ಕೈ ಕೈ ಮಿಲಾಯಿಸುವ ಹಂತಕ್ಕೂ ಬಂತು. ಅಷ್ಟರಲ್ಲಿ ಸುತ್ತ ಇದ್ದವರೆಲ್ಲಾ ಸೇರಿ ಅವರನ್ನ ಬಿಡಿಸುವ ಮತ್ತು ಒಬ್ಬೊಬ್ಬರು ಒಂದೊಂದು ಪಕ್ಷದ ಪರ ನಿಂತವರಂತೆ ಎದುರಿದ್ದವನಿಗೆ ಕೈ ತೋರಿಸಿ ಏನೇನೊ ಹೇಳುತ್ತಿದ್ದರು. ಟಿವಿಯಲ್ಲಿ ಯಾವುದೋ ಸಿನಿಮಾವನ್ನು ಮ್ಯೂಟ್ ಮಾಡಿಕೊಂಡು ನೋಡುವಂತೆ ನೋಡುತ್ತಿದ್ದ ನನಗೆ ಈಗ, ಈ ಕ್ಷಣ ನಾನು ಅವರೆಲ್ಲರ ಜೀವನದ ಒಂದು ಭಾಗ ಆಗಿದೀನಿ ಆದರೆ ಅದು ಅವರಾರಿಗೂ ತಿಳಿದೇ ಇಲ್ಲ ಅನ್ನುವುದು ಒಂದು ವಿಚಿತ್ರ ಭಾವನೆಯನ್ನು ಹೊಮ್ಮಿಸಿ ಒಳಗಡೆ ಏನೋ ತಳಮಳವನ್ನು ಹುಟ್ಟುಹಾಕಿತು. ಇಲ್ಲ, ಈ ಮೂರು ದಿವಸಗಳಿಂದ ಅನುಭವಿಸುತ್ತಿರುವ ಕಸಿವಿಸಿ, ಅಸಮಧಾನಕ್ಕೆ ಸುಕುಮಾರ್ ಸಾವೇ ಕಾರಣ ಎಂಬುದು ಹೊಳೆದು ಒಮ್ಮಲೇ ಉಬ್ಬಳಿಸಿದಂತಾಯಿತು. ಬಚ್ಚಲ ಕಡೆಗೆ ಓಡಿದೆ.

        ಸುಕುಮಾರರನ್ನ ನಾನು ಮೊದಲ ಬಾರಿಗೆ ನೋಡಿದ್ದು ನರಸಿಂಹ ಪರ್ವತದ ಹಾದಿಯಲ್ಲಿ. ಸಾಮಾನ್ಯವಾಗಿ ಹೋಗುವ ಕಿಗ್ಗಾ ಕಡೆಯಿಂದಲ್ಲದೆ ಆಗುಂಬೆ ಕಡೆಯಿಂದ ಹತ್ತುವುದೆಂದು ನಮ್ಮ ತಂಡದ ನಿರ್ಧಾರ ಆಗಿತ್ತು. ನಾವು ಹೊರಡಬೇಕಾದರೆನೆ ಗೈಡು 'ಸರ್, ನಿಮ್ಮ ಜೊತೆ ಇನ್ನೊಂದು ಪಾರ್ಟಿ ಬರ್ತದೆ, ಸಿಂಗಲ್ಲು' ಅಂತ ಹಲ್ಕಿರಿದಿದ್ದ. ಚಾರಣ ಶುರುವಾಗುವ ಜಾಗಕ್ಕೆ ಮೊದಲೇ ಬಂದು ಕಾಯುತ್ತಿದ್ದ ಆಸಾಮಿಯದು ಸಾಧಾರಣ ಎತ್ತರ. ಪಕ್ಕನೆ ವಯಸ್ಸು ಗುರುತಿಸಲಾಗದಿದ್ದರೂ, ನಲವತ್ತರ ಮೇಲಿರಬಹುದು ಅಂತ ಅಂದಾಜಿಸಿದ್ದೆ. ಆಯಾಸ ಪಟ್ಟುಕೊಂಡು ಹತ್ತುತ್ತಿದ್ದಿದ್ರಿಂದ ಅವರ ಬ್ಯಾಗನ್ನು ಗೈಡೇ ಹಿಡಿಯಬೇಕಾಯಿತು. ದಿನಪೂರ್ತಿ ನಡೆದರೂ ತುದಿ ಸಿಗದೆ, ಅಲೆದು ಕೊನೆಗೊಂದು ಕಡೆ ಟೆಂಟ್ ಹಾಕುವಷ್ಟರಲ್ಲಿ ರಾತ್ರಿಯಾಗಿತ್ತು. ಇಷ್ಟರ ಮಧ್ಯ ತಾನು ಸುಕುಮಾರ್ ಎಂತಲೂ ಬೆಂಗಳೂರಿನ ಕಂಪೆನಿಯೊಂದರಲ್ಲಿ ಎಂಜಿನಿಯರ್ ಎಂದು ಪರಿಚಯ ಮಾಡಿಕೊಂಡಿದ್ದು ಬಿಟ್ಟರೆ ಹೆಚ್ಚಿಗೆ ಏನೂ ಮಾತನಾಡಿರಲಿಲ್ಲ. ಬೆಳಿಗ್ಗೆ ಎದ್ದು ಒಂದು ತಾಸಾದರೂ ಸುಕುಮಾರ್ ಸುತ್ತಮುತ್ತ ಎಲ್ಲೂ ಕಾಣದಿದ್ದಾಗ ಎಲ್ಲರಿಗೂ ಸ್ವಲ್ಪ ಆತಂಕವಾಗಿದ್ದು ನಿಜ. ಸ್ವಲ್ಪ ಹೊತ್ತಿನ ನಂತರ ಎಲ್ಲಿಂದಲೋ ಬಂದ ಗೈಡ್ ಅಗೋ ಅದೇ ಪೀಕ್, ಅವರು ಬೆಳಿಗ್ಗೆಯೇ ಎದ್ದು ಮೇಲೆ ಹೋಗಿದ್ದಾರೆ ಅಂದಾಗ ಸಮಾಧಾನ ಆಗಿತ್ತು. ಎಲ್ಲರೂ ತುದಿಯ ಮುಟ್ಟಿದಾಗ ಸುಕುಮಾರ್ ಬೆಟ್ಟದಿಂದ ತುಸು ಹೊರ ಚಾಚಿದಂತಿದ್ದ ಬಂಡೆಯ ಮೇಲೆ ಕುಳಿತು ದೂರದಲ್ಲೆಲ್ಲೊ ದೃಷ್ಟಿ ನೆಟ್ಟಿದ್ದರು. ತುಸುವೇ ಮೇಲೇರಿದ್ದ ಸೂರ್ಯನ ಬೆಳಕಿನಲ್ಲಿ ಪ್ರಶಾಂತತೆ ತುಂಬಿದ್ದ ಅವರ ಮೂಖ ಹೊಳೆಯುತಿತ್ತು. ಆವಾಗ ಮೊದಲ ಬಾರಿಗೆ ಯಾಕೋ ಆ ವ್ಯಕ್ತಿ ಆಪ್ತರಂತೆ ಅನ್ನಿಸಿದರು. ಒಂದರ್ಧ ಗಂಟೆಯ ಫೋಟೋಶೂಟ್ ನಂತರ ಎಲ್ಲರೂ ಸಣ್ಣ ಸಣ್ಣ ಗುಂಪುಗಳಾಗಿ ಅದು ಇದು ಹರಟತೊಡಗಿದ್ದರು. ನಾನು ಹೋಗಿ ಸುಕುಮಾರ್ ಬಳಿ ಕುಳಿತೆ. ಕಣ್ಣು ಹಾಯುವಷ್ಟು ದೂರದವರೆಗೆ ಹಬ್ಬಿರುವ ಬೆಟ್ಟದ ಸಾಲುಗಳ ಹಸಿರು ಹೊದಿಕೆ. ಹಸಿರಿನ ಕಣಿವೆಯ ನಡುವೆ ಒಂದಿಷ್ಟು ಬೇರೆ ಬಣ್ಣ ಚೆಲ್ಲಿದಂತೆ ಕಾಣುವ ಒಂದು ಪುಟ್ಟ ಊರು. ತುಂಬಾ ದೂರದಲ್ಲಿದ್ದರಿಂದ ಜನರ ಓಡಾಟಗಳೇನು ಗೊತ್ತಾಗುತ್ತಿರಲಿಲ್ಲ. ಮನೆಗಳಲ್ಲಿ ಒಲೆ ಉರಿಸುತ್ತಿದ್ದಕ್ಕಾಗಿ ಚಿಮಣಿಗಳಿಂದ ಬರುತ್ತಿದ್ದ ಹೊಗೆಯೊಂದು ಕಾಣದಿದ್ದಿದ್ದರೆ ಅಲ್ಲಿ ಯಾರಾದರೂ ವಾಸವಾಗಿದ್ದಾರೆ ಅನ್ನುವದನ್ನು ನಂಬಲಸಾಧ್ಯವಾದ ದೃಶ್ಯವದು. ಸುಕುಮಾರ್ ಬಹಳ ಹೊತ್ತಿನಿಂದ ಅದೇ ಹಳ್ಳಿಯನ್ನ ತದೇಕಚಿತ್ತದಿಂದ ನೋಡುತ್ತಿದ್ದರು. ಸ್ವಲ್ಪ ಹೊತ್ತಾದ ಮೇಲೆ ನನ್ನ ಇರುವನ್ನ ಗಮನಿಸಿ ನಿಮಗೆ ಆ ಹಳ್ಳಿಯನ್ನು ನೋಡಿದರೆ ಏನನ್ನಿಸುತ್ತೆ? ಅಂತ ಕೇಳಿದರು. ಸಾಮಾನ್ಯವಾಗಿ ಹೀಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳದ ನಾನು 'ಏನಿಲ್ಲ ಅವರು ಬಹಳ ಪುಣ್ಯವಂತರು ಅನ್ನಿಸುತ್ತೆ, ಇಂತಹ ಪ್ರಶಾಂತ ಕಾಡಿನ ನಡುವೆ ನಗರದ ಯಾವುದೇ ಜಂಜಾಟಗಳಿಲ್ಲದೇ ಬದುಕುವುದು ಎಲ್ಲರಿಗೂ ಸಿಗುವಂತದ್ದಲ್ಲ'. ಆಗ ಅವರು ನನ್ನನ್ನ ನೋಡಿದ ನೋಟ ಇನ್ನೂ ಮರೆಯುವುದಕ್ಕಾಗಿಲ್ಲ. ಅದು ಆಶ್ಚರ್ಯ ತುಂಬಿದ, ತೀಕ್ಷ್ಣವಾದ, ತುಟಿಯ ಒಂದಂಚು ತುಸುವೇ ಮೇಲೇರಿಸಿ ಮನುಷ್ಯನ ಅಂತರಾಳವನ್ನೆಲ್ಲಾ ಸ್ಕ್ಯಾನ್ ಮಾಡಿ ನೋಡಿ ಇಷ್ಟೇನಾ ಅಂತನ್ನುವ ನೋಟ ಅದು. ಮುಂದೇನಾದರೂ ಹೇಳ್ತಾರೆ ಅಂತ ಕಾಯ್ತಿದ್ದ ನನಗೆ ಏನನ್ನೂ ಹೇಳದೆ ಮತ್ತೆ ಹಳ್ಳಿಯನ್ನ ನೋಡುವುದರಲ್ಲಿ ಮಗ್ನರಾದರು. ಇದಾದ ಹಲವು ದಿನಗಳ ನಂತರ ಫೇಸ್ಬುಕ್ ಅಲ್ಲಿ ಫ್ರೆಂಡ್ ಆಗಿ ನಮ್ಮ ಮನೆಗಳಿರುವುದೂ ಹತ್ತಿರದಲ್ಲೇ ಎಂಬುದು ಗೊತ್ತಾದ ಮೇಲೆ ಆಗಾಗ ಭೇಟಿಯಾಗುವುದು ಮಾಮೂಲಿಯಾಗಿತ್ತು. ಹೀಗೆ ಬಹಳಷ್ಟು ಭೇಟಿಗಳ ನಂತರವೇ ಅವತ್ತು ಅವರು ನನ್ನನ್ನ ಆ ರೀತಿ ಯಾಕೆ ನೋಡಿದ್ದರು ಅಂತ ಗೊತ್ತಾಗಿದ್ದು.

        ಅದೊಂದು ದಿವಸ ಮನುಷ್ಯನ ಕೆಲವೊಂದು ಸಮಸ್ಯೆಗಳು ಎಷ್ಟೊಂದು ಜಟಿಲ ಅದೆಷ್ಟೇ ಒಳಹೊಕ್ಕು ಹುಡುಕಿದರೂ ಅದರ ಮೂಲ ತಿಳಿಯುವುದಿಲ್ಲ ಎನ್ನುವುದರ ಬಗ್ಗೆ ಹೀಗೆ ಚರ್ಚೆ ನಡೆಯುತ್ತಿತ್ತು. ಆಗೇನೋ ಹೇಳಿದಾಗ ಮತ್ತೊಮ್ಮೆ ಅದೇ ನೋಟವನ್ನ ಅವರಿಂದ ಎದುರಿಸಿದೆ. ಆದರೆ ಈ ಬಾರಿ ಅದರ ಬಗ್ಗೆ ಮಾತನಾಡಲು ಅವರು ತಯಾರಿದ್ದರು. ಅವರು ಅದೇ ಮಂದಸ್ಮಿತದಲ್ಲಿ ಬನ್ನಿ ಎಂದು ನನ್ನನ್ನ ಎದುರಿಗಿನ ದೊಡ್ಡ ಮನೆಯ ಮೇಲೆ ಕರೆದೊಯ್ದರು. ಅವತ್ತು ಮಾತನಾಡುವ ಒಳ್ಳೆಯ ಮೂಡಲ್ಲಿದ್ದಂತೆ ಕಾಣುತ್ತೆ, ಮೆಲ್ಲಗೆ ಶುರು ಹಚ್ಚಿಕೊಂಡರು. ನೋಡಿ ಬಹಳಷ್ಟು ಸಮಯದಲ್ಲಿ ನಮ್ಮ ಪರಿಸ್ಥಿತಿಗಳು, ಸಮಸ್ಯೆಗಳು ನಮಗಿಂತಲೂ ಅದೆಷ್ಟು ಬೃಹದಾಕಾರವಾಗಿರುತ್ತವೆಂದರೆ ನಾವು ಅದರ ಮಧ್ಯ ನಿಂತುಕೊಂಡು ನೋಡಿದಾಗ ಅದರ ಅಗಾಧತೆಯ ಸ್ಪಷ್ಟ ನಿಲುವು ಸಿಗುವುದಿಲ್ಲ. ಆದ್ದರಿಂದ ಅದನ್ನ ನಾವು ದೂರ ನಿಂತುಕೊಂಡು ನೋಡಬೇಕು. ಅದು ಪರಿಸ್ಥಿತಿಯ ಒಂದು ಸ್ಥೂಲ ದರ್ಶನ ನೀಡುತ್ತೆ. ಮೇಲಿನಿಂದೆ ಒಬ್ಬೊಬ್ಬರನ್ನೇ ಗಮನಿಸುತ್ತಾ ಬನ್ನಿ, ಅದು ಅವರವರ ವ್ಯಕ್ತಿತ್ವವನ್ನ ಹೇಳುತ್ತಾ ಬರುತ್ತೆ. ಜಗತ್ತಿನ ಬಗ್ಗೆ ಒಂದು ವಿಶಾಲ ಚಿತ್ರಣ ಕೊಡುತ್ತೆ. ಈ ಮೇಲಿನಿಂದ ಜಗತ್ತನ್ನು ನೋಡುವುದು ಒಂದು ರೀತಿ ವಿಲಕ್ಷಣ ಅನುಭವ ಕೊಡುವಂತಹದು. ಶಾಲೆ ಮುಗಿಸಿಕೊಂಡು ಕೈ ಕೈ ಹಿಡಿದುಕೊಂಡು ಬರ್ತಿರೋ ಹುಡುಗಿಯರು, ಜೋರಾಗಿ ಶಬ್ದ ಮಾಡಿಕೊಂಡು ಹೋಗ್ತಿರೋ ಆಟೋ, ಬೇಗ ಬೇಗ ದಮ್ಮೆಳೆದು ಮನೆ ಮುಟ್ಟಿಕೊಳ್ಳುವ ಧಾವಂತದಲ್ಲಿರೋ ಯುವಕರು, ಕಟ್ಟೆ ಮೇಲೆ ಕುಳಿತುಕೊಂಡು ಹರಟೆ ಹೊಡಿತಿರೋ ಒಂದಿಷ್ಟು ಜನ, ಇವರೆಲ್ಲರ ಬಗ್ಗೆ ನೀವು ಗಮನಿಸಿರಲಾರದ ಸಂಗತಿಗಳು ಹೀಗೆ ಮೇಲೆ ನಿಂತು ನೋಡಿದಾಗ ಕಾಣಿಸುತ್ತೆ. ಹೀಗೆ ವೀಕ್ಷಕನ ದೃಷ್ಟಿಯಲ್ಲಿ ಜಗತ್ತನ್ನು ನೋಡುವುದು ಅನುಭವಕ್ಕೆ ಬಂದಿರದ ಎಷ್ಟೋ ವಿಷಯಗಳನ್ನ ಹೇಳಿಕೊಡುತ್ತೆ ಮತ್ತು ಸಮಸ್ಯೆಗಳಿಗೆ ಹೊಸ ಆಯಾಮ ತೋರಿಸುತ್ತವೆ. ಅವರು ಹೇಳಿದ್ದು ನಾನೆಂದೂ ಯೋಚಿಸದೇ ಇದ್ದ ವಿಷಯವಾಗಿತ್ತು. ಇದರೊಂದಿಗೆ ಅವರ ಬಗ್ಗೆ ಇದ್ದ ಆದರ ಇನ್ನೊಂದಿಷ್ಟು ಜಾಸ್ತಿಯಾಯಿತು.

        ಈ ಸುಕುಮಾರ್ ತಲೆಯಲ್ಲಿ ಬಿಟ್ಟ ಹುಳ ಬಹಳ ದಿವಸದವರೆಗೆ ನನ್ನನ್ನು ಕಾಡಿತ್ತು. ಬಹಳಷ್ಟು ಸಾರಿ ಎದುರಿನ ಮನೆಯ ಮೇಲೆ ಹತ್ತಿ ಓಡಾಡುವ ಜನರನ್ನು, ಅಕ್ಕ ಪಕ್ಕದ ಮನೆಯವರನ್ನು ಗಮನಿಸುತ್ತಾ ನಿಲ್ಲುತ್ತಿದ್ದೆ. ಕಪ್ಪು ತಲೆಗಳು, ಓರೆಯಾಗಿ ತುಸುವೇ ಕಾಣುವ ಮುಖ, ಹಾವಭಾವದಿಂದಲೇ ಅವರ ನಡೆಗಳನ್ನು ಗುರುತಿಸಬೇಕಾದದ್ದು ಒಂದು ರೀತಿಯ ವಿಚಿತ್ರ ನೋಟ. ನಮ್ಮ ಮುಂದಿರುವ ದೃಶ್ಯಗಳಲ್ಲಿ ನಾವು ಪರೋಕ್ಷವಾಗಿ ಭಾಗಿಯಾಗಿದ್ದರೂ ಅದರ ಯಾವುದೇ ಪರಿಣಾಮಗಳು ನಮ್ಮನ್ನ ಬಾಧಿಸದಿರುವುದರಿಂದ ಸುಕುಮಾರ್‌ಗೆ ಈ ವಿಧಾನ ಆಪ್ತವಾಗಿ ಕಂಡಿರಬಹುದು. ಇದೇ ಕಾರಣಕ್ಕಾಗಿ ಜನ ಸಿನಿಮಾ, ನಾಟಕಗಳನ್ನ ಇಷ್ಟಪಡುತ್ತಾರೆ. ನಿಜ ಜೀವನದಲ್ಲಿ ಅನುಭವಿಸಲಾಗದ ಸಂಗತಿಗಳನ್ನ ಪರದೆಯ ಮೇಲಿನ ಪಾತ್ರಗಳಿಗೆ ಹೋಲಿಸಿ ಅವು ನಮ್ಮ ಯೋಚನೆಗಿಂತ ಭಿನ್ನವಾಗಿ ನಡೆದುಕೊಳ್ಳುವಾಗ ಅಚ್ಚರಿಗೊಂಡು, ಅವಕ್ಕೆ ತೊಂದರೆಯಾದಾಗ ಅದು ನಿಜವಲ್ಲ ಬರೆ ನಟನೆ ಎಂದು ಸಮಾಧಾನ ಪಟ್ಟುಕೊಳ್ಳುವುದು ಮನಸ್ಸಿಗೆ ನೆಮ್ಮದಿಯ ನೀಡುವ ಅನುಭವಗಳು ಎಂದೆಲ್ಲಾ ವಿಶ್ಲೇಷಣೆಯನ್ನೂ ಮಾಡಿದ್ದೆ. ಇದೆಲ್ಲಾ ಕೆಲವೊಮ್ಮೆ ಮುದವನ್ನು ನೀಡಿದ್ದರೂ, ಇಡೀ ಜಗತ್ತಿನಲ್ಲಿ ಬೇರೆಲ್ಲಾದರೂ ಇರಬಹುದಾದ ಅಸಂಖ್ಯಾತ ಜಾಗಗಳನ್ನು ಬಿಟ್ಟು ನನ್ನ ಜೀವನದ ಬಹುಪಾಲು ಸಮಯವನ್ನು ಅಗೋ ಎದುರಿಗೆ ಕಾಣುವ ಬಿಳಿಬಣ್ಣದ ಸಣ್ಣ ಮನೆಯಲ್ಲೇ ಕಳೆಯುತ್ತಿದ್ದೇನೆ ಎಂಬುದು ಕೆಲವೊಮ್ಮೆ ತೀವ್ರ ನಿರಾಶೆಯನ್ನ ಉಂಟು ಮಾಡುತ್ತಿತ್ತು. ಈ ಅಭ್ಯಾಸ ಬಹಳ ದಿನಗಳವರೆಗೇನು ಮುಂದುವರೆಯಲಿಲ್ಲ. ನನ್ನ ಮದುವೆಯ ನಂತರ ಮನೆಯವರೆಲ್ಲಾ ಬೇರೆ ಅಪಾರ್ಟಮೆಂಟ್ಗೆ ಶಿಫ್ಟ್ ಆದ ನಂತರ ಹೊಸದೇ ಪ್ರಪಂಚ ತೆರೆದುಕೊಂಡಿತು ಮತ್ತು ಸುಕುಮಾರರ ನಂಟು ಕಡಿಮೆ ಆಯಿತು ಕೂಡ.

        ಬಹಳ ದಿವಸಗಳವರೆಗೆ ಸುಕುಮಾರರ ಬಗ್ಗೆ ಸುದ್ದಿಯೇ ಇರಲಿಲ್ಲ. ಅದೊಂದು ದಿವಸ ಇದೇ ರಾಜೇಶನೆ ಸುದ್ದಿ ತಂದಿದ್ದ. ಸುಕುಮಾರ್ ತಮ್ಮ ಕೆಲಸ ಬಿಟ್ಟು ಎಲ್ಲೋ ಲಿಫ್ಟ್ ಆಪರೇಟರ್ ಆಗಿ ಕೆಲಸಕ್ಕೆ ಸೇರಿದಾರೆ ಅಂತ. ಇವನೆಲ್ಲೋ ತಮಾಷೆ ಮಾಡುತ್ತಿರಬೇಕೆಂದು ಮೊದಲು ನಂಬಿರಲೇ ಇಲ್ಲ ಅದನ್ನು. ಆದರೆ ಒಮ್ಮೆ ಮಾಲಿನಲ್ಲಿ ತಿರುಗುತ್ತಿರಬೇಕಾದರೆ ಗಾಜಿನ ಲಿಫ್ಟಿನಲ್ಲಿ ಸುಕುಮಾರರನ್ನು ನೋಡಿದಾಗ ಆದ ಆಶ್ಚರ್ಯ ಅಷ್ಟಿಷ್ಟಲ್ಲ. ಅವರ ಶಿಫ್ಟ್ ಮುಗಿಯುವವರೆಗೆ ಕಾದಿದ್ದು, ಕಾಫೀ ಕುಡಿಯಲು ಕುಳಿತಾಗ ಅವರು ಹೇಳಿದ ಕಥೆ ಕೇಳಿ ವಿಚಿತ್ರ ಎನ್ನಿಸಿತ್ತು. ಜಗತ್ತನ್ನು ಮೇಲಿಂದಲೇ ನೋಡುವ ಹಂಬಲ ಅವರನ್ನು ಎಷ್ಟು ತೀವ್ರವಾಗಿ ಕಾಡುತ್ತಿತ್ತೆಂದರೆ ಅದಕ್ಕಾಗಿ ದೇಶದ ದೊಡ್ಡ ದೊಡ್ಡ ಬೆಟ್ಟಗಳು, ತರೇವಾರಿ ಕಟ್ಟಡಗಳನ್ನೆಲ್ಲಾ ಹತ್ತಿ ಇಳಿದಿದ್ದರು. ವಿಮಾನ ಹೆಲಿಕಾಪ್ಟರ್‌ಗಳಲ್ಲಿ ಸುತ್ತಾಡಿ ಬಂದಿದ್ದರು. ಆದರೆ ಹೋಗಿಬಂದ ಒಂದೆರಡು ದಿವಸದಲ್ಲೆ ಮುಗಿದು ಹೋಗುವ ಉತ್ಸಾಹವ ತಣಿಸಲಾರದೆ ಅದಕ್ಕೊಂದು ಖಾಯಂ ಪರಿಹಾರವೆಂಬಂತೆ ಎಂಜಿನಿಯರ್ ಕೆಲಸವನ್ನು ಬಿಟ್ಟು ಈ ಕೆಲಸಕ್ಕೆ ಬಂದಿದ್ದರು. ದಿನಕ್ಕೆ ಎಂಟು ಗಂಟೆ ಮಾಲಿನಲ್ಲಿ ಅಡ್ಡಾಡುವ ಜನರನ್ನು ಗಮನಿಸುವುದು ಅವರಿಗೆ ಅದೇನೋ ನೆಮ್ಮದಿಯನ್ನು ಕೊಡುತ್ತಿತ್ತು. ಒಂದು ಹವ್ಯಾಸ ಮನುಷ್ಯನನ್ನ ಇಷ್ಟರ ಮಟ್ಟಿಗೆ ಬದಲಿಸಬಹುದು ಎಂಬುದು ಅರಗಿಸಿಕೊಳ್ಳಲಾಗದ ಸಂಗತಿಯಾಗಿತ್ತು ನನಗೆ. ಅವರನ್ನ ಆ ಸ್ಥಿತಿಯಲ್ಲಿ ನೋಡಲಾಗದ ನಾನು ಎಷ್ಟೋ ದಿವಸಗಳವರೆಗೆ ಆ ಮಾಲಿನ ಕಡೆಗೆ ಹೋಗಿರಲೇ ಇಲ್ಲ.

        ಈ ಕೆಲಸವೂ ಅವರನ್ನು ಬಹಳ ದಿವಸದವರೆಗೆ ಹಿಡಿದಿಟ್ಟುಕೊಳ್ಳಲಿಲ್ಲ ಅನ್ನಿಸುತ್ತೆ. ಸರಿಯಾಗಿ ಕೆಲಸ ಮಾಡದೆ ಬರಿಯ ಹೊರಗಡೆ ನೋಡುತ್ತಾ ನಿಲ್ಲುತ್ತಾನೆ ಅಂತ ಮ್ಯಾನೇಜರ್ ಇವರನ್ನ ಕೆಲಸದಿಂದ ತೆಗೆದು ಹಾಕಿದ್ದರಂತೆ. ಮುಂದಿನ ಕೆಲವು ವರ್ಷಗಳಲ್ಲಿ ಸುಕುಮಾರ್ ಎಲ್ಲೆಲ್ಲೋ ಕೆಲಸ ಮಾಡುತ್ತಿದ್ದಾರೆ ಅಂತ ಸುದ್ದಿಗಳು ಬರುತ್ತಲೇ ಇದ್ದವು. ಬಿಲ್ಡಿಂಗ್ಗಳ ಗಾಜು ಒರೆಸುವುದು, ವಾಲ್ ಪೇಂಟಿಂಗ್, ಕರೆಂಟಿನ ಕೆಲಸ, ಹೀಗೆ ಊಹಿಸಲೂ ಆಗದ ಕೆಲಸಗಳಲ್ಲೆಲ್ಲಾ ನೋಡಿದ್ದಾಗಿ ಹೇಳುವವರಿದ್ದರು. ಆದರೆ ಎಲ್ಲಾ ಕೆಲಸಗಳಿಗಿದ್ದ ಒಂದೇ ಸಾಮ್ಯತೆಯೆಂದರೆ ಎತ್ತರದಲ್ಲಿ ಕೆಲಸ ಮಾಡುವುದು. ಮಧ್ಯದಲ್ಲೊಮ್ಮೆ ಸಿಕ್ಕಾಗ ಅವರ ಸ್ಥಿತಿ ಶೋಚನೀಯವಾಗಿತ್ತು. ತುಂಬಾ ಇಳಿದು ಹೋಗಿದ್ದರು. ಏನೋ ಅವರನ್ನು ತೀವ್ರವಾಗಿ ಕಾಡುತ್ತಿತ್ತು. ಆದರೆ ಕಣ್ಣಲ್ಲಿದ್ದ ಆ ವಿಲಕ್ಷಣ ಹೊಳಪು ಮಾತ್ರ ಹಾಗೆಯೇ ಇತ್ತು, ಇನ್ನೂ ಏನನ್ನೋ ಹುಡುಕುತ್ತಿರುವಂತೆ, ಎದುರಿಗಿರುವವರ ಮನಸ್ಸಿನ ಬಟ್ಟೆಗಳನ್ನೆಲ್ಲಾ ಬಿಚ್ಚಿ ಬೆತ್ತಲಾಗಿಸಿ ನೋಡುತ್ತಿರುವಂತೆ. ಇದು ಸರಿಯಿಲ್ಲ, ಯಾರಾದರೂ ಡಾಕ್ಟರರನ್ನ ಭೇಟಿಯಾಗೋಣ ಎಂಬ ನನ್ನ ಸಲಹೆಯನ್ನ ಉಢಾಫೆ ಮಾಡಿ ನಕ್ಕು ಬಿಟ್ಟಿದ್ದರು.

        ಯಾವುದೋ ಕಟ್ಟಡದ ತುದಿಯಲ್ಲಿ ಕೆಲಸ ಮಾಡುವಾಗ ಮೇಲಿಂದ ಬಿದ್ದು ಸತ್ತರೆಂದು ಸುದ್ದಿ ಬಂದಾಗಿನಿಂದ ಅವರು ಜಾರಿ ಬಿದ್ದರೊ ಅಥವಾ ತಾವಾಗೇ ಹಾರಿದರೋ ಎಂಬ ಸಂಶಯ ನನ್ನನ್ನು ಬಿಟ್ಟು ಹೋಗುತ್ತಿಲ್ಲ ಮತ್ತು ಅದೇ ಈ ತಳಮಳಕ್ಕೆ ಕಾರಣ ಅಂತನಿಸುತ್ತಿದೆ. ವಾಂತಿಯಾದದಕ್ಕೆ ಸ್ವಲ್ಪ ಸಮಾಧಾನವಾದಂತನ್ನಿಸಿ ಮತ್ತೆ ಬಾಲ್ಕನಿಗೆ ಬಂದು ನಿಂತೆ. ಕೆಳಗಡೆಯ ಜಗಳ ಇನ್ನೂ ನಡೆದೇ ಇತ್ತು. ನೋಡುತ್ತಿದ್ದಂತೆಯೆ ಈ ಪರಿಸ್ಥಿತಿಗೆ ಒಂದು ಹೊಸ ಆಯಾಮ ಹೊಳೆದಂತನ್ನಿಸಿತು. ಜಗತ್ತನ್ನು ಹಕ್ಕಿಯ ದೃಷ್ಟಿಯಿಂದ ನೋಡುವುದು ಬೇರೆಯ ಚಿತ್ರಣ ಕೊಟ್ಟರೂ ಕೊನೆಗೆ ಇರಬೇಕಾದದ್ದು ನೆಲದ ಮೇಲೆಯೇ. ಸುಕುಮಾರರಿಗೆ ಯಾವುದೋ ಸಮಸ್ಯೆ ಕಾಡುತ್ತಿದ್ದು ಅದನ್ನು ಪರಿಹರಿಸಿಕೊಳ್ಳಲಾಗದೆ ಅದರಿಂದ ದೂರ ಓಡುತ್ತಿದ್ದರು. ಅದಕ್ಕೊಂದು ಹೊಸ ಹೆಸರನ್ನು ಕೊಟ್ಟು ಅದನ್ನೇ ತೀವ್ರವಾಗಿ ನಂಬಿದ್ದರು. ಬೇರೆಯವರ ಕಷ್ಟ ಸುಖಗಳೇ ತಮ್ಮವೆಂಬಂತೆ ನೋಡುತ್ತಿದ್ದರೇ ಹೊರತು ಅನುಭವಿಸುವ ಧೈರ್ಯವಿರಲಿಲ್ಲ ಅನ್ನಿಸುತ್ತೆ. ಅವರನ್ನೊಮ್ಮೆ ಕರೆದುಕೊಂಡು ಸಂತೆಗಳಲ್ಲಿ, ಜಾತ್ರೆಗಳಲ್ಲಿ ಅಡ್ಡಾಡಬೇಕಾಗಿತ್ತು ಎಂದು ಈಗ ಅನ್ನಿಸಿದರೆ ಏನುಪಯೋಗ?

        ಕೆಳಗಿನವರ ಹೊಡದಾಟ ಜೋರಾದಾಗ ಇನ್ನು ಇಲ್ಲಿ ನಿಂತು ನೋಡಿ ಪ್ರಯೋಜನವಿಲ್ಲ, ಅಲ್ಲಿ ಅವರ ಮಧ್ಯ ನಿಲ್ಲಬೇಕು. ಪರಿಸ್ಥಿತಿಯ ನಿಜವಾದ ಭಾಗಿಯಾಗಬೇಕು ಅನ್ನಿಸಿತು. ಜಗಳ ನಿಲ್ಲಿಸಲು ಕೆಳಗಿಳಿದು ಹೊರಟೆ.

~*