Monday, October 29, 2007

ಹುಡುಕಾಟ...

"ಏನದು ಹಂಗಂದ್ರೆ? ಹೊಸ ವಾಶಿಂಗ್ ಪೌಡರ್ರಾ?"

ನಂಗೆ ಸಿಟ್ಟು ಬಂತು. 'ಏನ್ರಿ, ನಿಮಗ ಕನ್ನಡ ಬರಲ್ಲೇನು? ಅಷ್ಟು ಸ್ಪಷ್ಟವಾಗಿ ಹೇಳ್ತಿದಿನಿ, ಮತ್ತೆ ಏನು ವಾಶಿಂಗ್ ಪೌಡರ್ರಾ ಅಂತ ಕೇಳ್ತಿದಿರಲ್ಲಾ?'

"ರೀ ಸ್ವಾಮಿ, ನಾನೂ ಇಲ್ಲೇ ಹುಟ್ಟಿ ಬೆಳ್ದಿದ್ದು. ನನಗೆ ನಿಮಗಿಂತ ಚೆನ್ನಾಗೇ ಬರುತ್ತೆ, ಕನ್ನಡ. ಆದ್ರೆ ಅದೇನೋ ಕೇಳ್ತಿದಿರಲ್ಲಾ ಅಂತ ಸಾಮಾನು ನಮ್ಮಂಗಡಿಯಲ್ಲಿಲ್ಲ. ಬೇರೆ ಕಡೆ ವಿಚಾರಿಸಿ. ಬೆಳ್ ಬೆಳಿಗ್ಗೆ ಟೈಮ್ ವೇಸ್ಟ್ ಮಾಡ್ಬೇಡಿ. ಹೂ ಏನಮ್ಮಾ ನಿಂಗೆ? ಪೇಪರ್ ಅವಲಕ್ಕಿ ಬೇಕಾ ಅಥವಾ ದಪ್ಪನ ಅವಲಕ್ಕಿ ಬೇಕಾ....."

ಸಿಕ್ಕಿದೇನಾದ್ರು ತೊಗೊಂಡು ಅವನ ತಲೆ ಒಡೆಯೋಣ ಅನ್ನಿಸ್ತು. ಅಕ್ಕ ಪಕ್ಕ ಜನ ನೋಡಿ ಸುಮ್ನೆ ಬಂದೆ. ಬೆಳಿಗ್ಗೆ ಇಂದ ಅದು ನಾಲ್ಕನೇ ಅಂಗಡಿ ಆಗಿತ್ತು. ಒಬ್ಬವನ ಹತ್ರನೂ ಇಲ್ಲ ಅಂದ್ರೆ ಎನ್ ಕತೆ? ಅಂಗಡಿ ಇಟ್ಟ ಮೇಲೆ ಎಲ್ಲಾ ಸಾಮಾನು ಇಟ್ಟಿರಬೇಕು. ಸುಮ್ನೆ ಯಾಕ್ ಬೇಕು ಅದು, ತೆಪ್ಪಗೆ ಹಾಸ್ಟೆಲ್ ಗೆ ಹೋಗಿ ಬಿದ್ರೆ ಆಯಿತು ಅಂತ ವಾಪಾಸ್ ಬಂದೆ.

ಅದಿಲ್ಲದಿದ್ದರೂ ನಡಿಯುತ್ತೆ ಅಂತ ಮೂರು ದಿನ ಅನ್ನಿಸಿದ್ರೂ, ಉಳಿದ ನಾಲ್ಕು ದಿನ ಅದಿಲ್ಲದಿದ್ದರೆ ಏನಾಗುತ್ತೆ ಅನ್ನೋದು ಅರ್ಥ ಆಗ್ತಿತ್ತು. ಸರಿ, ಎರಡು ವಾರ ಆದಮೇಲೆ ಮತ್ತೆ ಹುಡ್ಕೊಕ್ಕೆ ಹೊರಟೆ. ಸರಿಯಾಗಿ ಎಲ್ಲಿ, ಯಾವ ಅಂಗಡಿಯಲ್ಲಿ ಸಿಗುತ್ತೆ ಅಂತನೂ ಗೊತ್ತಿಲ್ಲ. ಮೂರ್ನಾಲ್ಕು ಕಡೆ ಕೇಳಿ, ೧೦-೧೦ ನಿಮಿಷ ಬೈದಿದ್ದು, ಬೈಸಿಕೊಂಡಿದ್ದೂ ಆಯ್ತು. ತಲೆ ಕೆಟ್ಟು, ಮಸಾಲ ಚಾಯ್ ಅಂಗಡಿಗೆ ಬಂದು ಕುತ್ಕೊಂಡೆ.

ಚಾ ಕಪ್ಪಿಗೆ ಚಹಾನ ಎತ್ತಿ ಸುರಿತಾ, ಅಂಗಡಿಯವನು ಕೇಳ್ದ "ಏನ್ ಸರ್, ತುಂಬಾ ಟೆನ್ಷನ್ ಅಲ್ಲಿ ಇದಿರಾ? ಏನಾಯ್ತು?"

ಹಿಂಗಿಂಗೆ ಅಂತ ಹೇಳ್ದೆ.

ಜೋರಾಗಿ ನಕ್ಕ್ ಬಿಟ್ಟ. "ಇಷ್ಟೆನಾ? ನನ್ನ ಕೇಳಿದ್ರೆ ಕೊಡ್ತಿದ್ದೆ." ಅಂದ.

'ಯೊ.. ಹೊಗಯ್ಯ, ನನ್ನ ಕಷ್ಟ ನಂಗಾದ್ರೆ, ಮ್ಯಾಲೆ ನಿಂದ್ ಬೇರೆ. ಎಂತೆಂತಾ ದೊಡ್ಡ ಅಂಗಡಿಗಳಲ್ಲಿ ಕೇಳಿದಿನಿ, ಅಲ್ಲಿಲ್ದಿದ್ದು ನಿನ್ನ ಹತ್ರ ಹೆಂಗ್ ಬರ್ಬೇಕು? ನಿಮ್ಮ ಚಾಯ್ ಅಂಗಡಿಯವರ್ದು ಗೊತ್ತಿಲ್ಲೇನ್ ನಂಗೆ, ಇಂತದ್ದು ಗೊತ್ತಿಲ್ಲ ಅಂತ ತೋರಿಸ್ಕಳಲ್ಲ. ದೇವ್ರು ಎಲ್ಲಿ ಅಂದ್ರೆ, ಓಹ್ ಮೊನ್ನೆ ಮಾರ್ಕೆಟ್ ಅಲ್ಲಿ ಸಿಕ್ಕಿದ್ದ ಅನ್ನೋ ಜಾತಿ ನಿಮ್ದು'

ಅವನ ಮುಖದಲ್ಲಿ ಆ ನಗು ಇನ್ನೂ ಹಂಗೇ ಇತ್ತು. "ಸರ್, ನೀವು ಕೇಳಿದ್ದು, ನನ್ನ ಹತ್ರ ಇದೆ ಅಂತ ಹೇಳ್ತಿನಿ ಅಷ್ಟೆ. ನಂಬೋದು ಬಿಡೋದು ನಿಮಗ್ ಬಿಟ್ಟಿದ್ದು. ಆದ್ರೆ ನಾನೂ ಸ್ವಲ್ಪ ಜವಾರಿನೇ. ಅಷ್ಟು ಸುಲಭ ಆಗಿ ನಿಮ್ಗೆ ಕೊಟ್ಬಿಡಲ್ಲ. ನಾನು ಹೇಳೊ ಕೆಲ್ಸ ಮಾಡಿದ್ರೆ ಅಷ್ಟೆ ಕೊಡೊದು." ಅಂತ ಹೇಳಿ ಕಪ್ಪು ಇಟ್ಟು ಹೋದ.

ಅವನ ಮಾತು ಕೇಳಿ ಸಿಟ್ಟು ನೆತ್ತಿಗೇರಿತು. ಒಂದು ಗುಟುಕು ಕುಡಿದವನೇ ಕಪ್ಪನ್ನ ಜೋರಾಗಿ ಟೇಬಲ್ಲಿಗೆ ಕುಕ್ಕಿ 'ಖಚಡಾ ಟೀ' ಅಂತ ಉಗುದು ಬಂದೆ, ದುಡ್ಡೂ ಕೊಡ್ದೆ. ಅವನ ಮುಖದಲ್ಲಿ ನಗು ಹಂಗೇ ಇತ್ತು.

ಸಾಯಂಕಾಲ, ರಾತ್ರಿ ಎಲ್ಲಾ ಯೋಚನೆ ಮಾಡಿದಾಗ ಯಾಕೋ ಅವನ ಹತ್ರ ಇದೆ ಅಂತ ಅನ್ನಿಸ್ತಿತ್ತು. ಕೊನೆ ಪಕ್ಷ ಅವನ ಹತ್ರ ಇಸ್ಕೊಳ್ಳೊ ತನಕ ಸಿಟ್ಟು ಹಿಡಿತದಲ್ಲಿಟ್ಟುಕೊಳ್ಳಬೇಕು ಅನ್ಕೊಂಡು ಮರುದಿವ್ಸ ಮತ್ತೆ ಹೋದೆ.

'ಸರಿ ಎನ್ ಮಾಡ್ಬೇಕು ಹೇಳು. ಸುಮ್ನೆ ಎಲ್ಲಾ ಆದ್ಮೇಲೆ ತಮಾಷೆಗೆ ಮಾಡಿದ್ದು ಅಂತ ಎನಾದ್ರೂ ರಾಗ ಎಳೆದ್ರೆ ಕೊಂದೇ ಬಿಡ್ತಿನಿ ಅಷ್ಟೆ..'

ನಗು ಅವನ ಮುಖ ಬಿಟ್ಟು ಹೋಗಿರ್ಲಿಲ್ಲ. ಅಲ್ಲಿ ಇಲ್ಲಿ ಹುಡಿಕ್ಯಾಡಿ ಒಂದು ದೊಡ್ಡ ಲಿಸ್ಟ್ ತೆಗೆದು ಕೊಟ್ಟ. ಅದ್ರಲ್ಲಿ ಒಂದ್ ಇನ್ನೂರು ಮುನ್ನೂರು ಹೆಸರಿದ್ವು. ಎಲ್ಲಾ ಬೇರೆ ಬೇರೆ ತರಹದ ಅಂಗಡಿಗಳದ್ವು. ಬೀಡಾ ಅಂಗಡಿ, ಸೈಕಲ್ ಅಂಗಡಿ, ಚಪ್ಪಲಿ ಹೊಲೆಯೊ ಅಂಗಡಿ, ಕಿರಾಣಿ ಅಂಗಡಿ, ಸ್ಟೇಷನರಿ ಅಂಗಡಿ, ಜವಳಿ ಅಂಗಡಿ, ಹೋಟೆಲ್, ಕಂಪ್ಯೂಟರ್ ಅಂಗಡಿ, ಹಿಂಗೆ ಎಂತೆಂತವೋ. ತಲೆ ಬುಡ ಅರ್ಥ ಆಗ್ಲಿಲ್ಲ. ಅವ್ನನ್ನ ಒಂದ್ ಸರ್ತಿ ಕಣ್ಕಣ್ ಬಿಟ್ಟು ನೋಡ್ದೆ. ಮಸಾಲ ಟೀ ಮುಂದೆ ಇಡ್ತ ಅವ್ನು ಹೇಳ್ದ,

"ನೋಡಿ ಸರ್, ೨೫ ವರ್ಷದಿಂದ ಇಲ್ಲೇ ಚಾ ಅಂಗಡಿ ಹಾಕ್ಕೊಂಡ್ ಇದಿನಿ. ಚಾ ಅಂಗಡಿ ಅಂದಮೇಲೆ ನೂರೆಂಟು ತರಹದ ಜನ ಪರಿಚಯ ಆಗ್ತಾರೆ. ಆ ಪೇಪರ್ ಕೊಟ್ಟ್ನಲ್ಲಾ, ಅದೆಲ್ಲಾ ನನ್ನ ಪರಿಚಯದವರ ಅಂಗಡಿಗಳು. ಅಲ್ಲೆಲ್ಲಾ ಹೋಗಿ ನನ್ನ ಹೆಸರು ಹೇಳಿದ್ರೆ ಖಂಡಿತ ಗುರ್ತು ಹಿಡಿತಾರೆ. ನೀವು ಮಾಡ್ಬೇಕಾಗಿರೋದು ಇಷ್ಟೆ. ದಿನಾ ಒಂದಿಷ್ಟು ಅಂಗಡಿಗಳ ಹತ್ರ ಹೋಗಿ, ಎರಡು ಹದ್ದಿನ ಮರಿ ಬೇಕು ಅಂತ ಕೇಳಿ. ಪ್ರತಿಯೊಬ್ರು ಇಲ್ಲ ಅಂತನೇ ಹೇಳ್ತಾರೆ. ಇನ್ನೊಂದು ಸರ್ತಿ ಕೇಳಿ. ಬಾಯಿತುಂಬ ಬಯ್ಯಬಹುದು. ಮತ್ತೆ ಕೇಳಿ, ಮುಖ ಒರಿಸಿಕೊಳ್ಳೊ ಹಂಗೆ ಉಗಿಬಹುದು. ಮತ್ತೆ ಇನ್ನೊಂದ್ ಸರ್ತಿ ಕೇಳಿ, ಹೊಡಿಲಕ್ಕೂ ಬರ್ಬಹುದು. ಆಮೇಲೆ ಮತ್ತೊಂದ್ ಸರ್ತಿ ಕೇಳಿ, ಮುಂದಿನ ಅಂಗಡಿಗೆ ಹೋಗಿ!"

"ಹಿಂಗೆ ಪ್ರತಿಯೊಂದು ಅಂಗಡಿಯಲ್ಲೂ ಮಾಡ್ತಾ ಹೋಗಿ. ಆ ಪಟ್ಟಿಯಲ್ಲಿರೊದೆಲ್ಲಾ ಮುಗಿಯೊಕ್ಕೆ ಒಂದ್ ವಾರ ಹಿಡಿಬಹುದು. ಆಮೆಲೆ ನನ್ನ ಹತ್ರ ಬರ್ರಿ, ನೀವು ಕೇಳಿದ್ದು ಖಂಡಿತ ಕೊಡ್ತಿನಿ!". ಮುಖದ ಮೇಲೆ ಇನ್ನೂ ಅದೇ ನಗು.

ಪಕ್ಕಾ ಈ ಮನುಷ್ಯಂಗೆ ಹುಚ್ಚು ಹಿಡ್ದದ ಅಂತ ಅನ್ನಿಸ್ತು. ಆದ್ರೆ ನಾನು ಹುಡುಕ್ತಿದ್ದ ವಸ್ತು ಬಹಳ ಶ್ರೇಷ್ಠವಾದ್ದರಿಂದ, ಮೊದಲು ಹುಡುಕಿದ ಕಡೆ ಎಲ್ಲೂ ಸಿಗದಿದ್ರಿಂದ, ಹೂ ಅಂತ ಒಪ್ಕೊಂಡೆ.

"ಸರ್, ಇನ್ನೊಂದು ವಿಷಯ. ಇದೆಲ್ಲಾ ನೀವು ಬೇಕಂದ್ರೆ ಮಾಡಬಹುದು, ಒತ್ತಾಯ ಎನೂ ಇಲ್ಲ. ಆದ್ರೆ ನೀವು ಯಾವುದೇ ಅಂಗಡಿಯವನಿಗೆ ಬಯ್ಯಬಾರ್ದು, ಹೊಡಿಬಾರ್ದು, ಅವರ ಜೊತೆ ಜಗಳ ಮಾಡಬಾರ್ದು, ಎಲ್ಲೂ ನನ್ನ ಹೆಸರು ಎತ್ತಬಾರ್ದು. ಸುಮ್ನೆ ನಾನು ನಿಮಗೆ ಹೇಳಿದ್ನಲ್ಲಾ, ಅಷ್ಟೆ ಮಾಡ್ಬೆಕು. ನೀವು ಇಂತದೇನಾದ್ರೂ ಮಾಡಿದ್ರೆ ನನಗೆ ಗೊತ್ತಾಗೇ ಆಗುತ್ತೆ, ಅವ್ರಿಲ್ಲಿಗೆ ಬಂದಾಗ. ಆಮೇಲೆ ನಿಮ್ಮ ವಸ್ತು ಸಿಗೋದು ಸ್ವಲ್ಪ ಕಷ್ಟ ಆಗ್ಬಹುದು. ಮುಂದಿನ ವಾರ ಬನ್ನಿ ನೋಡೋಣ."

ನಾಳೆ ನೆನಸ್ಕೊಂಡ್ರೇನೆ ಭಯ. ಯಾವನೋ ಸೈಕಲ್ ರಿಪೇರಿ ಶಾಪ್ ಅವನ ಹತ್ರ ಹೋಗಿ ಎರಡು ಹದ್ದಿನ ಮರಿ ಕೊಡಿ ಅಂದ್ರೆ, ಏನನ್ನಬಹುದು ಅವ್ನು? ಅದೂ ಐದ್ ಐದು ಸರ್ತಿ ಕೇಳಿದ್ರೆ!! ರಾತ್ರಿಯೆಲ್ಲಾ ನಿದ್ದೆ ಇಲ್ಲ. ಆದ್ರೂ ಬೆಳಿಗ್ಗೆ ಆಯ್ತು.

ಸಾಯಂಕಾಲ ಚಾ ಕುಡಿತಾ ಅವ್ನ ಹತ್ರ ಎಲ್ಲಾ ಹೇಳಿದೆ. ಪ್ರತಿಯೊಬ್ಬರ ಹತ್ರನೂ ಬಾಯಿಗೆ ಬಂದಹಾಗೆ ಬಯ್ಯಿಸಿಕೊಂಡಿದ್ದು, ಇಸ್ತ್ರಿ ಅಂಗಡಿ ಮತ್ತೆ ತರಕಾರಿ ಮಾರೊವನ ಹತ್ರ ಹೊಡದಾಡಿದ್ದು, ಎಲ್ಲಾ. ಸಣ್ಣಗೆ ನಕ್ಕು ಹೇಳ್ದ, "ಸಾರ್, ನಾನು ಹೇಳಿದ್ದಂಗೆ ನೀವು ಮಾಡ್ತಿಲ್ಲ. ನೀವು ಅಲ್ಲಿ ಹೋಗಿ ಕೇಳೊ ಹದ್ದಿನ ಮರಿ ಅವ್ರ ಹತ್ರ ಇರೊಲ್ಲ ಅಂತ ನಿಮಗೂ ಗೊತ್ತು. ಹಂಗೆ ಅವ್ರು ಬೈತಾರೆ ಅಂತಾನೂ ಗೊತ್ತು. ನಿಮಗೆ ಅಲ್ಲಿ ಹೋಗಿ ಕೇಳೊದಲ್ದೆ ಬೇರೆ ದಾರಿನೇ ಇಲ್ಲ ಅಂತಾನೂ ಗೊತ್ತು. ಇಷ್ಟೆಲ್ಲಾ ಗೊತ್ತಿದ್ದಮೇಲೆ ಅವರಜೊತೆ ಸಿಟ್ಟು ಮಾಡ್ಕೊಂಡು ಎನು ಪ್ರಯೋಜನ?"

ಅವನು ಹೇಳಿದ್ದೂ ಸಿಜ ಅನ್ನಿಸ್ತು. ಮರುದಿವ್ಸದಿಂದ ಅಂಗಡಿಯವ್ರು ಬೈಯ್ಯಬೇಕಾದ್ರೆ, ಗಟ್ಟಿಯಾಗಿ ಸಿಟ್ಟು ತಡೆ ಹಿಡ್ಕೊಂದು ಒಂದು, ಎರಡು, ಮೂರು ಎಣಿಸೊದೊ ಅಥವಾ ಎನೊ ಒಂದು ಮಾಡ್ತಿದ್ದೆ. ಇನ್ನೊಂದೆರಡು ದಿವ್ಸದಲ್ಲಿ ಸಿಟ್ಟು ಬರೋದೇ ಕಡಿಮೆಯಾಗ್ತಾ ಬಂತು. ಯಾವನು ಹೆಂಗೇ ಬೈದರೂ ಸುಮ್ನೆ ನಗುಮುಖ ಹಾಕ್ಕೊಂಡು ನಿಂತು ಬಿಡ್ತಿದ್ದೆ. ಅಂದುಕೊಂಡಿದ್ದಕ್ಕಿಂತ ಒಂದು ದಿವ್ಸ ಮೊದ್ಲೆ ಲಿಸ್ಟ್ ಅಲ್ಲಿದ್ದ ಎಲ್ಲಾ ಅಂಗಡಿಗಳೂ ಮುಗಿದ್ಹೊದ್ವು. ಅವತ್ತೇ ಹೋಗಿ ಚಾ ಅಂಗಡಿಯವ್ನಿಗೆ ಹೇಳಿದೆ.

ಅವ್ನು ನಗನಗತಾ "ಸರಿ ಸರ್, ಬಹಳ ಸುಧಾರಿಸಿದಿರಾ ಅಂತ ಕೇಳಿದೆ. ಇವತ್ತು ನಾನು ನೀವು ಕೇಳಿದ ಸಾಮಾನನ್ನ ಕೊಡ್ತಿನಿ. ಆದ್ರೆ ನನ್ನ ಹತ್ರನೂ ಬಹಳ ಇಲ್ಲ. ಅಲ್ಪ ಸ್ವಲ್ಪ ಅಲ್ಲಿ ಇಲ್ಲಿ ಸಿಕ್ಕಿದ್ದು ಅಷ್ಟೆ." ಅಂತ ಹೇಳಿ ಅವನ ದುಡ್ಡಿನ ಡ್ರಾವರ್, ಕಪಾಟು ಅಲ್ಲಿ ಇಲ್ಲಿ ಹುಡಿಕಿ ಒಂದು ಸಣ್ಣ ಪ್ಲಾಸ್ಟಿಕ್ ಬ್ಯಾಗ್ ತೆಗೆದ. ಅದನ್ನ 'ಉಫ್' ಅಂತ ಊದಿ ಒಂದು ಗಂಟು ಹಾಕಿ ನನ್ನ ಕೈಗೆ ಕೊಟ್ಟ.

ನಾನೂ ಜೋರಾಗಿ ನಕ್ಕೆ. 'ತುಂಬಾ ಥ್ಯಾಂಕ್ಸ್ ರೀ, ಇಷ್ಟು ಸಾಕ್ ಬಿಡ್ರಿ ನಂಗೆ. ಇದ್ರಿಂದ ಎಷ್ಟು ಬೇಕೋ ಅಷ್ಟು ನಾನೇ ಬೆಳಿಸ್ಕೋತಿನಿ' ಅಂತ ಹೇಳಿ ಹಾಸ್ಟೆಲ್ ಗೆ ಬಂದೆ, ಆ ಪ್ಲಾಸ್ಟಿಕ್ ಬ್ಯಾಗನ್ನ ಕಸದಬುಟ್ಟಿಗೆ ಹಾಕ್ತಾ.