Friday, April 4, 2008

ಅಪ್ಪ ನಕ್ಕ...

ಮನೆಗೆ ಹೋದಮೇಲೆ ಹುಡುಗ ಅಪ್ಪನ ಹತ್ರ ನಡೆದಿದ್ದೆಲ್ಲಾ ಹೇಳ್ದ.
ಅಪ್ಪ ನಕ್ಕ.

~*~*~
ಒಂದು ಹಳ್ಳಿ. ಅಲ್ಲೂ ಒಂದು ಶಾಲೆ. ಶಾಲೆ ಎಂದಮೇಲೆ ಬರೀ ಕಟ್ಟಡ ಅಷ್ಟೇ ಇರೊಕ್ಕಾಗುತ್ತಾ, ಮೇಷ್ಟ್ರು, ಮಕ್ಕಳು, ಅದು, ಇದು, ಅಂತ ಹೆಡ್ ಮಾಸ್ತರ್ ಇಂದ ಹಿಡಿದು ಬೋರ್ಡ್ ಅಳಿಸೋ ಡಸ್ಟರ್ ತನಕ ಎಲ್ಲವೂ ಇತ್ತು. ಸ್ಕೂಲ್ ಅಂದ ಮೇಲೆ ಮಾಡ್ಲಿಕ್ಕೆ ಇನ್ನೇನು ಕೆಲ್ಸ ಇರುತ್ತೆ, ಹೊತ್ತು ಕಳೀಲಿ ಅಂತ ಮೇಷ್ಟ್ರು ಪಾಠ ಮಾಡ್ತಿದ್ರು, ಮಕ್ಕಳೂ ಎದುರಿಗೆ ಕೂತಿದ್ರು, ಕೇಳಿಸ್ಕೊತಿದ್ರೋ ಇಲ್ವೋ ಅನ್ನೋದು ಬೇರೆ ವಿಷಯ.

ಸರಿ ಇನ್ನೇನು ಹುಡುಗರು ನಿದ್ರಾಲೋಕಕ್ಕೆ ಹೊಗ್ತಿದ್ರೇನೋ ಅಷ್ಟರಲ್ಲೇ ಯಾವ್ದೋ ಊರಿಂದ ಸ್ಕೂಲ್ ಕಡೆ ಇನ್‍ಸ್ಪೆಕ್ಟರ್ ಸವಾರಿ ಬಂತು. ತಾವೂ ಎಚ್ಚರ ಆಗೋದಲ್ದೆ ಮೇಷ್ಟ್ರು ಹುಡುಗ್ರನ್ನೆಲ್ಲಾ ಎದ್ದೇಳಿಸಿದ್ರು. ಇನ್‍ಸ್ಪೆಕ್ಟರ್ ದು ಉಪಹಾರ, ಪಾನೀಯ, ವಿಶ್ರಾಂತಿ ಎಲ್ಲಾ ಮುಗಿತು. ಕ್ಲಾಸ್ ಕಡೆ ಬಂದ್ರು. ಆ ಸ್ಕೂಲಲ್ಲೇನು ಇನ್‍ಸ್ಪೆಕ್ಶನ್ ಇದ್ದಿಲ್ಲ, ಆದ್ರೆ ಗತ್ತು ತೋರಿಸುವುದಕ್ಕೆ,

"ಮಕ್ಕಳೇ ನಿಮ್ಮ ತಿಳುವಳಿಕೆ ಎಷ್ಟಿದೆ ಅಂತ ಪರೀಕ್ಷೆ ಮಾಡ್ತಿನಿ. ನಾನು ಕೇಳೋ ಪ್ರಶ್ನೆಗೆ ಯಾರು ಒಳ್ಳೇ ಉತ್ತರ ಕೊಡ್ತಿರೋ ನೋಡೋಣ."
"ಮಾನವನ ಅತ್ಯದ್ಭುತ ಸೃಷ್ಟಿ ಯಾವುದು?"
ಅಂತ ಹುಡುಗ್ರನ್ನ ಪ್ರಶ್ನೆ ಕೇಳೋಕ್ಕೆ ಶುರು ಮಾಡಿದ್ರು. ಇವರು ಕೇಳೋದು ಇಂತಹ ಪ್ರಶ್ನೆನೇ, ಯಾಕಂದ್ರೆ ಅದಕ್ಕೆಲ್ಲಾ ನಿರ್ದಿಷ್ಟ ಉತ್ತರ ಇರೊಲ್ಲ. ಮಕ್ಕಳು ಹೇಳಿದ್ರಲ್ಲಿ ಒಂದು ಆರಿಸಿ ಕರೆಕ್ಟು ಅಂದ್ರೆ ಮುಗಿದ್ಹೋಯ್ತು. ಇಲ್ಲದ ತಲೆ ಓಡಿಸೋ ಪ್ರಮೇಯನೇ ಬರಲ್ಲ.
ಎಷ್ಟೋಂದು ಹುಡುಗ್ರು ಕೈ ಎತ್ತಿದ್ರು. ಸರಿ ಇವ್ರೂ ಒಬ್ಬೊಬ್ರನ್ನೇ ಕೇಳ್ತಾ ಬಂದ್ರು.
"ವಿಮಾನ ಸರ್" ಅಂದ ಒಬ್ಬ.
"ಸ್ಯಾಟಲೈಟ್" ಅಂದ ಇನ್ನೊಂದ್ ಹುಡ್ಗ.
ಉತ್ತರ ಹೇಳಿದವ್ರಿಗೆಲ್ಲಾ 'ಗುಡ್ ಗುಡ್' ಅಂತ ಹೇಳಿ ಕೂಡಿಸಿದ್ರು ಇನ್‍ಸ್ಪೆಕ್ಟರ್ರು.
ಹಂಗೆ ಕಂಪ್ಯೂಟರ್,ಮೊಬೈಲ್,ರೋಬಟ್,ಟೆಲಿಸ್ಕೋಪ್,ಟಿವಿ ಅದು ಇದು ಅಂತ ಗೊತಿದ್ದೆಲ್ಲಾ ಹೇಳಿದ್ರು. ಇನ್‍ಸ್ಪೆಕ್ಟರ್ ಗುಡ್ ಅಂದ ತಕ್ಷಣ ಹುಡುಗ್ರಿಗೆ ಖುಶಿ. ಇವತ್ತು ಮನೆಗೆ ಹೋಗಿ ಹೇಳ್ಬೇಕಲ್ಲಾ, "ಇನ್‍ಸ್ಪೆಕ್ಟರ್ ಹತ್ರ ಶಹಭಾಸ್ ತೊಗೊಂಡೆ" ಅಂತ, ಅದಕ್ಕೆ. ಮೇಷ್ಟ್ರಿಗೂ ಒಳಒಳಗೆ ಸಂತೋಷ, ಹುಡುಗರ ಬುದ್ಧಿವಂತಿಕೆ ನೋಡಿ. ಇನ್‍ಸ್ಪೆಕ್ಟರ್ ಹಿಂಗೆ ಕಣ್ಣಾಡಿಸಿದ್ರು. ಉತ್ತರ ಹೇಳಿದವರೆಲ್ಲಾ ಇನ್ನೊಂದು ಸರ್ತೆ ಹೇಳೊಕ್ಕೆ ಕೈ ಎತ್ತಿದ್ದ್ರು. "ಸಾ ಸಾ, ನಾನು ಸಾ" ಅಂತ ಗಲಾಟೆ ಬೇರೆ. ಅಚಾನಕ್ಕಾಗಿ ಇವರ ಕಣ್ಣು ಕೊನೇ ಬೆಂಚಲ್ಲಿ ಕೂತಿದ್ದ ಹುಡುಗನ ಮೇಲೆ ಬಿತ್ತು. ಅವ್ನು ಎಲ್ಲರೂ ಹೇಳೋದನ್ನ ಗಮನ ಇಟ್ಟು ಕೇಳ್ತಿದ್ದ. ಆದ್ರೆ ಉತ್ತರ ಹೇಳೋಕೆ ಕೈ ಎತ್ತಿರ್ಲಿಲ್ಲ. ಇಂತಹ ಮಕೇಡಿಗಳನ್ನ ಕೇಳಿದ್ರೆ, ಕೊನೇಪಕ್ಷ ಮೇಷ್ಟ್ರನ್ನ ಬೈಯೊಕ್ಕೆ ಅವಕಾಶ ಸಿಗುತ್ತೆ ಅಂತ ಅನ್ಕೊಂಡು,
"ಏ ಲಾಸ್ಟ್ ಬೆಂಚು, ನೀನೇ, ಎದ್ದೇಳು ಉತ್ತರ ಹೇಳು" ಅಂದ್ರು.
ಆ ಹುಡುಗ ಧೈರ್ಯದಿಂದನೇ ಎದ್ದು ನಿಂತ. ಮುಖದಲ್ಲಿ ಒಂದು ಮಂದಹಾಸ ಇತ್ತು.
ಸ್ವಲ್ಪ ಮೆಲ್ಲಗೇನೇ "ದೇವರು.." ಅಂದ.
ಇನ್‍ಸ್ಪೆಕ್ಟರ್‍ಗೆ ಸರಿಯಾಗಿ ಕೇಳ್ಲಿಲ್ಲ, "ಹಾ..?" ಅಂದ್ರು.
ಈ ಸರ್ತಿ ಗಟ್ಟಿಯಾಗೇ ಆ ಹುಡ್ಗ "ದೇವ್ರು.." ಅಂದ.
ಇನ್‍ಸ್ಪೆಕ್ಟರ್‍ಗೆ ಸಿಟ್ಟು ಬಂತು. "ಖೋಡಿ, ನಿದ್ದಿ ಮಾಡ್ತಿದ್ದೇನು? ನಾನು ಕೇಳಿದ್ದ್ ಪ್ರಶ್ನೆಗೆ ಉತ್ತರ ಕೊಡು" ಅಂದ್ರು.
ಹುಡುಗ ಬೆಚ್ಚಿಬಿದ್ದ. ತೀರ ಸಣ್ಣ ಸ್ವರದಲ್ಲಿ, ಪಕ್ಕ ನಾಲ್ಕು ಬೆಂಚಿಗೆ ಕೇಳೋ ಹಾಗೆ, "ಸಾರ್, ದೇವ್ರು.." ಅಂದ.
ಇನ್‍ಸ್ಪೆಕ್ಟರ್‍ಗಂತೂ ಸಿಟ್ಟು ನೆತ್ತಿಗೇರಿತು. ಏನೋ ಬೈಲಿಕ್ಕೆ ಬಾಯಿ ತೆರೆದಿದ್ದ್ರು ಅಷ್ಟ್ರಲ್ಲಿ ಆ ಹುಡ್ಗನ್ನ ಬಚಾವು ಮಾಡೋಣ ಅಂತ ಮೇಷ್ಟ್ರು ಮಧ್ಯ ಪ್ರವೇಶ ಮಾಡಿದ್ರು.
"ಸರ್, ನಮ್ಮ ಸ್ಕೂಲ್ ಜವಾನ ರಾಮಯ್ಯ, ಅದೇ ಅವಾಗ ತಿಂಡಿ ತಂದು ಕೊಟ್ನಲ್ಲಾ, ಅವ್ನ ಮಗ ಸರ್ ಇವ್ನು. ಓದ್ನಲ್ಲೆಲ್ಲಾ ಚೆನ್ನಾಗೇ ಇದಾನೆ. ಏನೋ ಪ್ರಶ್ನೆ ಕೇಳಿಸಿಲ್ಲ ಅನ್ಸುತ್ತೆ" ಅಂದು ಹುಡುಗನ ಕಡೆ ತಿರುಗಿದ್ರು.
"ಅಲ್ಲಪ್ಪ, ಮಾನವನನ್ನ ಸೃಷ್ಟಿ ಮಾಡಿದ್ದು ಯಾರು ಅಂತ ಅಲ್ಲ ಇವ್ರು ಕೇಳಿದ್ದು, ಮಾನವನ ಅತ್ಯದ್ಭುತ ಸೃಷ್ಟಿ ಯಾವ್ದು ಅಂತ ಕೇಳಿದ್ದು" ಅಂದ್ರು.
ಹುಡುಗ ಇದ್ದ ಬದ್ದ ಶಕ್ತಿ ಎಲ್ಲಾ ಸೇರಿಸಿ, "ಅದೇ ಸರ್, ದೇವ್ರು.. ಹಂಗೇ ನಮ್ಮಪ್ಪ ಹೇಳ್ಕೊಟ್ಟಿರೋದು" ಅಂದ.

ಕೈಗೆ ಸಿಕ್ಕ ಅವಕಾಶನಾ ಇನ್‍ಸ್ಪೆಕ್ಟರ್ ಬಿಡ್ತಾರಾ, ಮೇಷ್ಟ್ರನ್ನ ಸರಿಯಾಗಿ ದಬಾಯಿಸಿದ್ರು. ಮಕ್ಕಳಿಗೆ ಬರೇ ಪುಸ್ತಕದಲ್ಲಿರೋದನ್ನ ಹೇಳಿದ್ರೆ ಸಾಕಾಗಲ್ಲ. ಲೋಕ ಜ್ಞಾನನೂ ತಿಳಿಸ್ಬೇಕು. ನೀವು ಸರಿಯಾಗಿದ್ದಿದ್ರೆ, ಹುಡುಗ್ರು ಹಿಂಗೆಲ್ಲಾ ಅಸಂಬದ್ಡ ಉತ್ತರಗಳನ್ನೆಲ್ಲಾ ಕೊಡಲ್ಲ, ಹಾಗೆ, ಹೀಗೆ ಅಂತೆಲ್ಲಾ ಪ್ರವಚನ ಬಿಗಿದು, ಕರೆಕ್ಟಾಗಿ ಬಸ್ ಬರೋ ಟೈಮ್ ಆಗಿದ್ದು ನೋಡಿ ಎದ್ದು ಹೋದ್ರು.
ಅವ್ರು ಹೋದಮೇಲೆ "ಏನು ತಿರುಗಾಮರುಗಾ ಅದನ್ನೇ ಹಿಡ್ಕೊಂಡಿದಿಯಾ? ರೈಲೋ, ರಾಕೆಟ್ಟೋ ಏನೋ ಒಂದು ಬೊಗಳಿ ಕುತ್ಕೋಳಕ್ಕ ಬರ್ತಿದ್ದಿಲ್ಲೇನು. ನಿನ್ನಂತವರು ಒಬ್ರು ಸಾಕು, ನನ್ನ ಪ್ರಾಣ ತೆಗಿಯೋಕೆ" ಅಂತ ಮೇಷ್ಟ್ರು ಆ ಹುಡುಗನಿಗೆ ಮಹಾ ಮಂಗಳಾರತಿಯೇ ಮಾಡಿದ್ರು. ಜೊತೆಗೆ ಪ್ರಸಾದ ಬೇರೆ, ಬೆತ್ತದಿಂದ.

~*~*~
ಮನೆಗೆ ಹೋದಮೇಲೆ ಹುಡುಗ ಅಪ್ಪನ ಹತ್ರ ನಡೆದಿದ್ದೆಲ್ಲಾ ಹೇಳ್ದ.
ಅಪ್ಪ ನಕ್ಕ.