Monday, September 22, 2008

ಹೀಗೊಂದು ಹುಚ್ಚು ಪ್ರಯೋಗ..

ಈ ಪ್ರಯೋಗದಿಂದ ಆದ ಪ್ರಯೋಜನಗಳಿಗಿಂತ ಕಷ್ಟಗಳೇ ಜಾಸ್ತಿ, ಬೇರೆಯವರಿಗೆ. ಅದೆಲ್ಲರ ಜೊತೆಗೆ ಇದನ್ನು ಓದಿ ನಿಮ್ಮ ೫ ನಿಮಿಷ ಹಾಳುಮಾಡುವ ಈ ಇನ್ನೊಂದು ಕಷ್ಟವನ್ನೂ ಕೊಡುತ್ತಿದ್ದೇನೆ, ಸಂಪೂರ್ಣ ಉಚಿತವಾಗಿ.

ಅಂದಹಾಗೆ ಇದೇನೂ ಅಸಾಧಾರಣ, ಯಾರೂ ಮಾಡೇ ಇರದಂತಹ ಕೆಲಸವೇನಲ್ಲ. ನಮ್ಮ ದೇಶದಲ್ಲೇ ಸರಿಸುಮಾರು ೮೪ ಕೋಟಿ ಜನ ಇದನ್ನು ನಡೆಸಿದಾರೆ ಮತ್ತು ನಡೆಸ್ಕೊಂಡು ಹೋಗ್ತಾನೇ ಇದ್ದಾರೆ. ನಾನು ಮಾಡಿದ್ದೂ ಅದನ್ನೇ, ಅಂದ್ರೆ ಮೊಬೈಲ್ ಬಳಸದೇ ಇರುವುದು.

ಕಳೆದ ಎರಡೂ ಮುಕ್ಕಾಲು ತಿಂಗಳಿಂದ ನಾನು ನನ್ನ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಇಟ್ಟಿದ್ದೇನೆ. ಇದಕ್ಕೆ ಕಾರಣಗಳೆರಡು, ಒಂದು ಹೀಗೇ ಸುಮ್ನೆ, ಇನ್ನೊಂದು ಈ ಸಮಯದಲ್ಲಿ ನಾನು ಹಂಚಿಕೊಳ್ಳಲಾಗದಂತಹದ್ದು. ಮುಂದೊಂದು ದಿವಸ ಖಂಡಿತ ಹೇಳ್ತೀನಿ.

ಈ ದಿನಗಳಲ್ಲಿ ಹಾಗೂ ಅದರ ಆಸುಪಾಸಿನಲ್ಲಿ ಆದ ಕೆಲವೊಂದು ವಿಷಯಗಳು ಇಲ್ಲಿವೆ.

~*~
ಅಪ್ಪ ಅಮ್ಮ ಬೆಂಗಳೂರಿಗೆ ಬಂದಿದ್ದರು, ಸಂಬಂಧಿಕರ ಗೃಹಪ್ರವೇಶಕ್ಕೆ.
'ಅಪ್ಪ, ನಾನು ಮೂರು ತಿಂಗಳು ಮೊಬೈಲು ಆಫ್ ಮಾಡಿ ಇಡೋಣ ಅಂತಿದೀನಿ.'
"ಆಯ್ತು. ಮೊಬೈಲ್ ಬಳಸದೇ ಇರಬಹುದು. ಆದರೆ ನಿನ್ನನ್ನು ಸಂಪರ್ಕಿಸುವುದು ಹೇಗೆ? ಇನ್‍ಕಮ್ಮಿಂಗ್ ಅಷ್ಟೆ ಬರೋಹಾಗೆ ಮಾಡಿಡುವುದಕ್ಕೆ ಆಗಲ್ವ?" (ನಾನು ಬೆಂಗಳೂರಿನಲ್ಲಿ ಒಬ್ಬಂಟಿಗನಾಗಿ ವಾಸಿಸುವುದು)
'ಇನ್‍ಕಮ್ಮಿಂಗು ಔಟ್‍ಗೋಯಿಂಗು ಏನೂ ಬೇಡ ಅಪ್ಪ. ಪತ್ರ ಹಾಕ್ತಿರ್ತೀನಿ.'
"ಸರಿ."
ಈ ದಿನಗಳಲ್ಲಿ ನಾನು ಹಾಕಿದ ಪತ್ರಗಳು ೨. ಮನೆಯಿಂದ ಬಂದ ಪತ್ರ ೧.
~*~
ಅಪ್ಪನಿಗೆ ಹೇಳಿದ ಮಾತನ್ನು ಅಮ್ಮನಿಗೂ ಹೇಳಿದೆ.
"ಯಾಕಪ್ಪ ನಿನಗೆ ಫೋನ್ ಮಾಡಿ ಅಷ್ಟೊಂದು ತೊಂದ್ರೆ ಕೊಡ್ತಿದಿವಾ? ಇನ್ನುಮುಂದೆ ಫೋನ್ ಮಾಡೋದು ಕಡಿಮೆ ಮಾಡ್ತೀವಂತೆ, ಆಫ್ ಮಾಡ್ಬೇಡ."
'ಅಯ್ಯೋ ಹಂಗೇನಿಲ್ಲಮ್ಮ. ಸುಮ್ನೆ ಹೀಗೇ ಆಫ್ ಮಾಡ್ತಿರೋದು.'
"ಬರೇ ಮನೆಗಷ್ಟೇ ಫೋನ್ ಇಲ್ವಾ ಅಥವಾ ಎಲ್ಲರಿಗೂ ಇಲ್ವಾ?"
'ಏನು ಹಂಗಂದ್ರೆ? ಇಡೀ ಪ್ರಪಂಚಕ್ಕೇ ಇಲ್ಲ ಆಯ್ತಾ?'
"ಬೇರೆ ಸಿಮ್ಮು ತೆಗೋತಿದಿಯಾ?"
'ಏನ್ ಅಮ್ಮಾ, ಇಲ್ಲ.'
ನನಗೆ ವಾರದಲ್ಲಿ ೩-೪ ಬಾರಿ ಮನೆಯಿಂದ ಕರೆಬರುತ್ತಿತ್ತು, ಆಫ್ ಮಾಡುವ ಮೊದಲು.
~*~
ಮೂರು ತಿಂಗಳವರೆಗೆ ಮೊಬೈಲ್ ಬಳಸುವುದಿಲ್ಲ ಅಂತ ಆಫ್ ಮಾಡುವ ನಾಲ್ಕು ದಿವಸ ಮುಂಚೆನೇ ಒಂದು ಮೈಲು ಹಾಕಿದೆ. ಕರೆಗಳ ಮಹಾಪೂರನೇ ಹರಿದು ಬಂತು.
"ಲೋ ಹುಚ್ಚು ಹಿಡಿತಾ ನಿಂಗೆ? ನಿನ್ನೆ ಮೊನ್ನೆಯಲ್ಲಾ ಸರಿ ಇದ್ಯಲ್ಲಾ?"
"ಯಾಕೋ ದೇವದಾಸ್, ಯಾರು ಕೈ ಕೊಟ್ರು ನಿಂಗೆ?"
"ಎನಾದ್ರೂ ಪ್ರಾಬ್ಲಮ್ ಇದ್ರೆ ಹೇಳೋ.. ಮನೆಯಲ್ಲೇನಾದ್ರೂ ತೊಂದರೇನಾ?"
"ಆಫೀಸ್ ಅಲ್ಲಿ ಆದ್ರೆ ಚಾಟ್, ಮೈಲ್ ಅಂತ ಹೇಗೋ ಸಿಕ್ತೀಯಾ, ಆದ್ರೆ ವೀಕೆಂಡ್ ಹ್ಯಾಗೆ ನಿನ್ನ ಕಾಂಟಾಕ್ಟ್ ಮಾಡೋದು?"
"ಏನಪ್ಪಾ ಮೊಬೈಲ್ ಖರ್ಚು ಉಳಿಸೋ ಪ್ಲ್ಯಾನಾ? ಲೊ ಜುಗ್ಗಾ ಆನ್ ಮಾಡೋ."
ಎಲ್ಲರಿಗೂ ಸಮಜಾಯಿಷಿ ಕೋಡುವಷ್ಟೊತ್ತಿಗೆ ನನಗೆ ಸಾಕುಸಾಕಾಗಿ ಹೋಗಿತ್ತು.
~*~
ನಾನು ಆಫ್ ಮಾಡಿದಮೇಲೆ ಗೊತ್ತಾದ ಸ್ನೇಹಿತರು ಎಲ್ಲಾ ಮೇಲಿನ ಪ್ರಶ್ನೆಗಳನ್ನು ಪುನರಾವರ್ತಿಸಿದ್ರು. ವಾರಕ್ಕೊಮ್ಮೆ ಸಿಗುವ ಸ್ನೇಹಿತರೂ, ದಿನವೂ ಸಿಗುವ ಆಫೀಸಿನ ಗೆಳೆಯರಿಂದ ಅರ್ಧ ಮುಕ್ಕಾಲು ಘಂಟೆಯ interview ಗಳೂ ನಡೆದವೂ, ಇಲ್ಲದ ವಿಷಯವನ್ನು ಬಾಯಿ ಬಿಡಿಸೋಕೆ. ನಾನು ಕೊಟ್ಟ ಉತ್ತರಗಳು ಸಮಾಧಾನ ಕೊಡದಿದ್ದರೆ ಮರುದಿವಸ ಮತ್ತೆ ಶುರು.
~*~
ಈ ಅವಧಿಯಲ್ಲಿ ಒಂದ್ ಬಾರಿ ಮನೆಗೆ ಹೋಗಿದ್ದೆ. ನಮ್ಮದು ಅವಿಭಕ್ತ ಕುಟುಂಬ. ಒಮ್ಮೆ ಎಲ್ಲರೂ ಒಟ್ಟಿಗೆ ಕುಳಿತಿರಬೇಕಾದರೆ,
"ಅನಂತ ನಿಂಗೆ ಹೆಣ್ಣು ನೋಡೋಕೆ ಶುರು ಮಾಡೋಣ್ವಾ?"
'ನನಗಾ? ಈಗ್ಲೇ ಯಾಕೆ?'
"ಅಲ್ಲ ಈಗಿಂದ ಶುರು ಮಾಡಿದ್ರೆ ಎಲ್ಲಾ ಮುಗಿಯುವಷ್ಟರಲ್ಲಿ ಇನ್ನೂ ಎರಡು ವರ್ಷ ಆದ್ರೂ ಆಗುತ್ತೆ."
'ಹ್ಮ್, ಈಗ್ಲೇ ಹುಡುಕುವಂತದ್ದೇನೂ ಬೇಡ. ಮನೆಯಲ್ಲಿ ನನಗಿಂತ ದೊಡ್ಡೊರು ಇನ್ನೂ ೫-೬ ಜನ ಇದ್ದಾರೆ, ಅವ್ರಿಗ್ಯಾಕೆ ಹುಡ್ಕಲ್ಲಾ?'
"ಅವ್ರಿಗೂ ಹುಡ್ಕೋಣ. ಏನ್ಮಾಡೋದು, ಈಗಿನ ಕಾಲದಲ್ಲಿ ಒಳ್ಳೆ ಸಂಬಂಧ ಸಿಗೋದು ಕಷ್ಟ. ಅದಕ್ಕೇ. ಹೋಗ್ಲಿಬಿಡು, ಜಾಸ್ತಿ ಒತ್ತಾಯ ಮಾಡಲ್ಲ, ಈಗ ಮಾತಾಡೊದನ್ನ ನಿಲ್ಸಿದೀಯ, ಆಮೇಲೆ ಮನೆಗೆ ಬರೋದನ್ನೇ ನಿಲ್ಲಿಸಿ ಬಿಡ್ತೀಯಷ್ಟೆ"
ನನ್ನ ಅಕ್ಕನ ಮದುವೆಯಾಗಿ ಕೆಲವು ತಿಂಗಳಾಗಿದೆ ಅಷ್ಟೆ. ನಾನಿನ್ನೂ ೨೩ ವಯಸ್ಸಿನ ಹಸುಗೂಸು. ಈಗಿಂದೀಗೆ ಮದುವೆಯಾಗ ಬೇಕು, ಇಲ್ಲದಿದ್ದರೆ ಮುಂದೆ ಕಷ್ಟ ಅನ್ನುವ ವಯಸ್ಸೂ ಅಲ್ಲ. ಅಕ್ಕನ ಮದುವೆಯ ಸಮಯದಲ್ಲಿ ಇನ್ನು ೨-೩ ವರ್ಷದ ನಂತರ ನನ್ನ ಮದುವೆಯ ಬಗ್ಗೆ ಯೋಚನೆ ಮಾಡಿದರಾಯಿತು ಅಂತ ಎಲ್ಲಾ ಮಾತಾಡಿಕೊಂಡಿದ್ದರೂ ಕೂಡ. ಪಾಪ, ನನಗೆ ಗೊತ್ತು, ನನ್ನ ನಡುವಳಿಕೆಗಳು ಅವರ ಮನಸ್ಸಿನಲ್ಲಿ ಏನೇನು ಸಂಶಯ ಬಿತ್ತಿರಬಹುದು ಅಂತ.
~*~
ಈ ಸಮಯದಲ್ಲಿ ನನಗೆ ಸಿಕ್ಕ ಬಿರುದಾವಳಿಗಳು ಅನೇಕ. ಹುಚ್ಚ, ದೇವದಾಸ, ಸನ್ಯಾಸಿ, ಮಠಾಧಿಪತಿ, ಇನ್ನು ಏನೇನೋ..
~*~

ನನ್ನಲ್ಲುಂಟಾಗುವ ಭಾವನೆಗಳನ್ನೆಲ್ಲಾ ರಸವತ್ತಾಗಿ ಹಂಚಿಕೊಳ್ಳುವುದು ನನಗೆ ಬರುವುದಿಲ್ಲ. ಇಷ್ಟು ದಿನಗಳಲ್ಲಿ ನನಗನ್ನಿಸಿದ್ದನ್ನು ಹೇಳಬೇಕಂದರೆ, ನೆಮ್ಮದಿಯಾಗಿತ್ತು, ಖುಷಿಯಾಯ್ತು, ಅಷ್ಟೆ.

ಈ ಅಕ್ಟೋಬರ್ ನಾಲ್ಕನೇ ತಾರೀಖಿಗೆ ಮೊಬೈಲ್ ಬಳಸದೇ ಮೂರು ತಿಂಗಳಾಗುತ್ತೆ. ಎಲ್ಲರ ಕಷ್ಟ, ನನ್ನ ಸುಖಗಳನ್ನು ಗಣನೆಗೆ ತೆಗೆದುಕೊಂಡು ಮೊಬೈಲು ಬಳಸಬೇಕೋ ಇಲ್ಲವೋ ಅಂತ ಅವತ್ತು ನಿರ್ಧಾರ ಮಾಡ್ತೀನಿ. ಒಂದು ವೇಳೆ ಬಳಸಲು ಶುರುಮಾಡಿದರೂ ಅದು ತಾತ್ಕಾಲಿಕವಾಗಿ, ಕೆಲವು ದಿನಗಳೋ, ತಿಂಗಳುಗಳೋ, ವರ್ಷಗಳೋ ಅಷ್ಟೆ.