Sunday, April 15, 2018

ಲಿಂಗ ಬದಲಾವಣೆಯ ಸಮಯ..

ಅದೇ ಕೊನೆಯ ಬಾರಿಗೆ ಎಂಬಂತೆ ಹೊರಟಿತು ಅವನ ಕೊರಳಿಂದ‌ ಒರಲು.

ಕಾಫಿ ಎಂದೆನುತ ಎತ್ತಿದ್ದ ಕೈ, ತರುವುದರೊಳಗಾಗಲೇ ಬಿದ್ದಿತ್ತು ಜೋಲಾಡುತ.

ಕೈ ಜಾರಿದ ಲೋಟದ ಪರಿವಿಲ್ಲದೇ ಎದೆ‌ಬಡಿಯುತ್ತಾ ಅಳತೊಡಗಿದಳು ಜೋರಾಗಿ.

ಗುಂಪುಗಟ್ಟಿದರು ಮನೆಮಂದಿಯೆಲ್ಲ. ಅವನ ಕೈ ಹಿಡಿದೊಬ್ಬ ಹೇಳಿದ, ಹೋಗಿದೆ ಪ್ರಾಣ.

ಎಲ್ಲರೂ ಅವನೆದುರು ಕುಳಿತು ಅತ್ತರು, ಅವನ ಗುಣಗಾನ ಮಾಡುತ ಗೋಳಾಡಿದರು.

ಕರೆಗಳು ಹಾರಿದವು ದೂರದೂರುಗಳಿಗೆ. ಹರಿದು ಬಂದರು ಜನ ಮನೆ ತುಂಬುವಂತೆ.

ಅತ್ತತ್ತು ಸುಸ್ತಾದ ಜನರ ಕಣ್ಣಲ್ಲಿ ಅದೇನೋ ಭಯ, ನಿರ್ಲಿಪ್ತತೆಯ ಮೋಡ.

ಇನ್ನು ಬಹಳ ಹೊತ್ತು ಕಾಯುವುದು ತರವಲ್ಲ. ಇದನ್ನೀಗಲೇ ಎತ್ತಬೇಕೆಂದವು ಹಿರಿತಲೆಗಳು.

ಹೆಣವನ್ನೆತ್ತಿ ಚಟ್ಟಕ್ಕೆ ಬಿಗಿದರು. ಮತ್ತೊಮ್ಮೆ ಅತ್ತು, ಹೊರಳಾಡಿ, ಹೊತ್ತೊಯ್ದು ಸುಟ್ಟರು.

ಅವನ ಅಭಾವ ಕಾಡಿದಲ್ಲೆಲ್ಲಾ ಅವನ ನೆನೆದರು. 
ಅವನಿಲ್ಲಿಲ್ಲ ಆದರೂ ಇಲ್ಲೇ ಇದ್ದಾನೆ ಎಂಬುದು ಅರಿವಾಗುವವರೆಗೆ ಕೊರಗಿದರು.

ಇವೆಲ್ಲವುಗಳ ನಡುವೆ 'ಅವನು' ಹೋಗಿ, 'ಅದು' ಆಗಿ ಮತ್ತೆ 'ಅವನು' ಆಗಿ ಬದಲಾಗಿದ್ದು ಯಾವ ಸಮಯದಲ್ಲಿ ಎಂಬುದು ಮಾತ್ರ ತಿಳಿಯಲೇ ಇಲ್ಲ.